ಶುಕ್ರವಾರ, ಡಿಸೆಂಬರ್ 2, 2022
21 °C

ಸ್ತನ್ಯಪಾನದ ವೇಳೆ ಋತುಚಕ್ರದಲ್ಲಿ ಏರುಪೇರು: ಏನು ಮಾಡಬೇಕು?

ಡಾ. ವೀಣಾ ಎಸ್. ಭಟ್‌ Updated:

ಅಕ್ಷರ ಗಾತ್ರ : | |

1. ಶಸ್ತ್ರಚಿಕಿತ್ಸೆಯ ಮೂಲಕ ಎರಡು ಮಕ್ಕಳಾಗಿವೆ. ಎರಡನೇ ಮಗುವಿನ ಹೆರಿಗೆ ಸಂದರ್ಭದಲ್ಲಿ ಉಸಿರಾಟದ ತೊಂದರೆ ಇದ್ದಿದ್ದರಿಂದ ಮಕ್ಕಳಾಗದ ಆಪರೇಷನ್‌ ಮಾಡಲಿಲ್ಲ. ಈಗ ಎರಡನೇ ಮಗುವಿಗೆ 8 ತಿಂಗಳು. ತಿಂಗಳು ಮುಟ್ಟಾಗಿಲ್ಲ. ಗರ್ಭಧಾರಣೆಯನ್ನು ತಿಳಿಸುವ ಕಿಟ್‌ನಿಂದ ಮನೆಯಲ್ಲಿ ಪರೀಕ್ಷೆ ನಡೆಸಿದೆ. ಗರ್ಭಿಣಿ ಅಲ್ಲವೆಂದು ತಿಳಿಯಿತು. ಆದರೂ ಮನಸ್ಸಿನ ಮೂಲೆಯಲ್ಲಿ ಅಳುಕಿದೆ. ಸಲಹೆ ನೀಡಿ ಮೇಡಂ.

ಅಪರ್ಣ, ಕೆ.ಆರ್‌. ಪೇಟೆ

ಉತ್ತರ: ಅಪರ್ಣ ಅವರೇ, ನೀವೀಗ ಮಗುವಿಗೆ ಎದೆಹಾಲು ಕುಡಿಸುತ್ತಿರುವುದರಿಂದ  ಮುಟ್ಟಾಗದೇ ಇರಬಹುದು. ಇದನ್ನ ಲ್ಯಾಕ್ಟೇಷನಲ್ ಅಮೆನೂರಿಯಾ ಎನ್ನುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೆರಿಗೆಯ ನಂತರ ಆರು ತಿಂಗಳ ಕಾಲ ಮಗುವಿಗೆ ಕೇವಲ ಎದೆಹಾಲು ಕುಡಿಸುವುದರಿಂದ, ಮಗು ಮೊಲೆತೊಟ್ಟನ್ನು ಹೆಚ್ಚು ಚೀಪುವುದರಿಂದ ಮೆದುಳಿನ ಹೈಪೋಥಲಾಮಸ್-ಪಿಟ್ಯೂಟರಿ-ಅಂಡಾಶಯ ಅಕ್ಷೆಯ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಉಂಟಾಗಿ ಅಂಡಾಶಯದಿಂದ ಅಂಡಾಣು ಉತ್ಪಾದನೆಯಾಗುವುದಿಲ್ಲ. ಇದರಿಂದ ಮಾಸಿಕ ಋತುಚಕ್ರವು ಆಗುವುದಿಲ್ಲ. ಇದು  ತಾತ್ಕಾಲಿಕ ಅಷ್ಟೇ. ಹೆಚ್ಚಿನ ಸಂದರ್ಭದಲ್ಲಿ ಆರು ತಿಂಗಳ ನಂತರ ಋತುಚಕ್ರ ಆರಂಭವಾಗುತ್ತದೆ. ಈ ಪ್ರಕ್ರಿಯೆ ಎಂಟು ತಿಂಗಳವರೆಗೆ ಮುಂದುವರೆದಿರಬಹುದು.  ನೀವು ಸಂತಾನ ನಿಯಂತ್ರಣ ಕ್ರಮವಾಗಿ ಕಾಪರ್ಟಿ ಅಳವಡಿಕೆ, ಶಾಶ್ವತ ಸಂತಾನಶಕ್ತಿ ಹರಣ ಚಿಕಿತ್ಸೆ ವಿಧಾನಗಳನ್ನು ವೈದ್ಯರ ಸಲಹೆ ಮೇರೆಗೆ ಅನುಸರಿಸಿ. 

2. ನನಗೆ 40 ವರ್ಷ. ವರ್ಷದಿಂದ 2 ರಿಂದ 3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದೆ. ಮುಟ್ಟಾದಾಗ 8 ರಿಂದ10 ದಿನಗಳ ರಕ್ತಸ್ರಾವ ಇರುತ್ತದೆ. ಹತ್ತಿರದ ವೈದ್ಯರಲ್ಲಿ ತೋರಿಸಿದಾಗ ಸ್ಕ್ಯಾನಿಂಗ್‌ ಮಾಡಿಸಿ, ತೊಂದರೆ ಏನಿಲ್ಲ ಎಂದು ಮಾತ್ರೆ ಕೊಟ್ಟಿದ್ದರು. ಮಾತ್ರೆ ತಗೊಂಡ ಮೇಲೆ ಸ್ವಲ್ಪ ಕಡಿಮೆಯಾಯಿತು. ಈಗ ಮತ್ತೆ ಹಾಗೇ ಆಗುತ್ತಿದೆ. ಬೇಕಾದರೆ ಗರ್ಭಕೋಶ ತೆಗೆಯಬಹುದು ಎಂದು ವೈದ್ಯರು ಹೇಳಿದ್ದಾರೆ. ಮುಟ್ಟು ನಿಲ್ಲುವಾಗ ಹೀಗೆ ಆಗುತ್ತದೆ ಎಂದು ಕೆಲವರು ಹೇಳಿದರೆ, ಹೀಗೆ ಬಿಟ್ಟರೆ ಕ್ಯಾನ್ಸರ್ ಆಗುತ್ತೆ ಎಂದು ಕೆಲವರು ಹೆದರಿಸುತ್ತಿದ್ದಾರೆ. ಏನು ಮಾಡಬೇಕು ತಿಳಿಯುತ್ತಿಲ್ಲ. 

ಗಿರಿಜಾ, ಬೆಂಗಳೂರು.  

ಉತ್ತರ: ಗಿರಿಜಾರವರೇ ನಿಮಗಿನ್ನೂ 40ವರ್ಷಗಳಷ್ಟೆ. ಮುಟ್ಟು ನಿಲ್ಲುವ ವಯಸ್ಸಲ್ಲ. ಹಾರ್ಮೋನ್‌ ತೊಂದರೆ ಯಿಂದ ಹೀಗೆ ಆಗುತ್ತಿರಬಹುದು. ಸ್ಕ್ಯಾನಿಂಗ್‌ ನಾರ್ಮಲ್‌ ಇದೆ ಎಂದು ಹೇಳಿದ್ದೀರಿ. ಅಸಮರ್ಪಕವಾದ ಹಾರ್ಮೋನ್‌ಗಳಿಂದ ಹೀಗೆ ಆಗುತ್ತಿದೆ. ಈ ವಯಸ್ಸಿನಲ್ಲಿ ನಿಯಮಿತವಾಗಿ ಆಗುವ ಅಂಡಾಣು ಬಿಡುಗಡೆ ಯಾಗದೇ ಈಸ್ಟ್ರೋಜನ್‌ ಮಟ್ಟಕ್ಕೆ ತಕ್ಕದಾದ ಪ್ರೊಜೆಸ್ಟಿರಾನ್‌ ಎಂಬ ಹಾರ್ಮೋನು ಸರಬರಾಜು ಆಗದೇ ಗರ್ಭಕೋಶದ ಒಳಪದರವು ಹೆಚ್ಚು ಹೆಚ್ಚು ಬೆಳೆಯುತ್ತದೆ. ಎರಡು ಮೂರು ತಿಂಗಳ ನಂತರ ಒಳಪದರಕ್ಕೆ ರಕ್ತಸರಬರಾಜು ಆಗದೇ ಅದು ಕಿತ್ತುಕೊಂಡು ಹೊರಬರುವಾಗ ಈ ರೀತಿ ಅತಿಯಾದ ರಕ್ತಸ್ರಾವವಾಗುತ್ತದೆ. ದೀರ್ಘಾವಧಿ ರಕ್ತಸ್ರಾವವಾದಾಗ ಹೆಚ್ಚಿನ ಮಹಿಳೆಯರಲ್ಲಿ ರಕ್ತಹೀನತೆ  ಉಂಟಾಗಿ ಸುಸ್ತಿನ ಅನುಭವವಾಗುತ್ತದೆ. ಕೆಲವರು ರೋಸಿಹೋಗಿ ಗರ್ಭಕೋಶವನ್ನೇ ತೆಗೆದುಬಿಡಿ ಎಂದು ವೈದ್ಯರನ್ನು ಬೇಡಿಕೊಳ್ಳುವ ಸಂದರ್ಭಗಳಿವೆ. ಅತಿಯಾಗಿ ಚಿಂತಿಸದೇ, ತಜ್ಞವೈದ್ಯರನ್ನು ಸಂಪರ್ಕಿಸಿ. 

ಗರ್ಭಕೋಶದ ಒಳಪದರವು(ಎಂಡೋಮೆಟ್ರಿಯ) ದಪ್ಪನಾಗಿ ಬೆಳೆದಿದ್ದರೆ ಆಗ ಬಯಾಪ್ಸಿ ಅಥವಾ ಡಿ ಆ್ಯಂಡ್‌ ಸಿ ಮೂಲಕ ಗರ್ಭಕೋಶದಿಂದ ಸಂಪೂರ್ಣವಾಗಿ ಹೊರತೆಗೆದು ಅದನ್ನು ಪರೀಕ್ಷೆಗೆ ಕಳಿಸುತ್ತಾರೆ. ಇದರಿಂದ ಹಾರ್ಮೋನುಗಳ ತೊಂದರೆಯ ಬಗ್ಗೆ ಪತ್ತೆಮಾಡಲು ನಿಖರವಾಗಿ ಸಾಧ್ಯವಾಗುತ್ತದೆ ಮತ್ತು ಭವಿಷ್ಯದಲ್ಲಿ ಎಂಡೋಮೆಟ್ರಿಯಂನ ಕ್ಯಾನ್ಸರ್ ಉಂಟಾಗುವುದರ ಬಗ್ಗೆ ಮಾಹಿತಿಯೂ ದೊರಕುತ್ತದೆ. ಅಷ್ಟೇ ಅಲ್ಲ ಎಷ್ಟೋಬಾರಿ ಕೇವಲ ಡಿ ಆ್ಯಂಡ್‌ ಸಿಯಿಂದ ರಕ್ತಸ್ರಾವ ನಿಯಂತ್ರಣಕ್ಕೆ ಬಂದಿದೆ.

ರಕ್ತಸ್ರಾವ ಪುನರಾವರ್ತನೆಗೊಳ್ಳದ ಹಾಗೇ ಕೃತಕ ಪ್ರೊಜೆಸ್ಟ್ರಿರನ್‌ ಹಾರ್ಮೋನು ಮಾತ್ರೆಗಳನ್ನು ನೀಡಲಾಗುತ್ತದೆ.  ಈಗಂತೂ ಪ್ರೊಜೆಸ್ಟ್ರಾನ್‌ ಹಾರ್ಮೋನನ್ನು ನಿಯಮಿತವಾಗಿ ಬಿಡುಗಡೆಗೊಳಿಸುವ, ಗರ್ಭಾಶಯದಲ್ಲಿ ಅಳವಡಿಸುವ ಕಾರ್ಪಟಿಯಂತಹ ಸಾಧನವನ್ನು ಬಳಸಿ ಇಂತಹ ರಕ್ತಸ್ರಾವವನ್ನು ಸಂಪೂರ್ಣ ಹತೋಟಿಯಲ್ಲಿ ಇಡಬಹುದು. ಪ್ರಬಲವಾದ ತೊಂದರೆ ಅಥವಾ ಕಾರಣಗಳಿಲ್ಲದೆ ಗರ್ಭಕೋಶ ತೆಗೆಸುವ ನಿರ್ಧಾರಮಾಡಬೇಡಿ. ಬೇಗನೆ ಗರ್ಭಕೋಶ ಹಾಗೂ ಅಂಡಾಶಯ ತೆಗೆಸಿಕೊಂಡರೆ ಹೆಣ್ತನದ ಹಾರ್ಮೋನುಗಳ ಸ್ರಾವ ಕಡಿಮೆಯಾಗುವು ದರಿಂದ ಮೂಳೆಗಳ ಸವೆತ, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು