ಭಾನುವಾರ, ಜುಲೈ 3, 2022
24 °C

ಆರೋಗ್ಯದ ಹಾಡಿಗೆ ಮನಸ್ಸಿನ ಶ್ರುತಿ

ಪ್ರಜ್ಞಾ ಮತ್ತಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕವಿಋಷಿ ಎಂದು ಕರೆಸಿಕೊಂಡಿದ್ದ ಡಿ.ವಿ.ಜಿ.ಯವರ ಕಗ್ಗವೊಂದು ಹೇಳುತ್ತದೆ: ‘ಕುದಿ ಹೆಚ್ಚೆ ವೆಗಟಹುದು ಕಡಿಮೆಯಿರೆ ಹಸಿ ನಾತ ಕದಡಲೊಡೆವುದು ಹಾಲು ಅದರವೊಲು ಮನದ ಹದ’.

ಹಾಲಿನಷ್ಟೇ ಪರಿಶುದ್ಧವೂ ಸೂಕ್ಷ್ಮವೂ ಆಗಿರುವ ಮನಸ್ಸಿನ ನಿರ್ವಹಣೆ ಎಷ್ಟು ಕಷ್ಟಕರವಾದುದು ಎಂಬ ಸತ್ಯವನ್ನು ನಾವೆಲ್ಲರೂ ಅನುಭವಿಸುತ್ತಲೇ ಇರುತ್ತೇವೆ. ಆಧುನಿಕ ಜೀವನಶೈಲಿ ತಂದೊಡ್ಡುತ್ತಿರುವ ಅನಿರೀಕ್ಷಿತ ಸವಾಲುಗಳನ್ನು ಎದುರಿಸಿ ಜಯಿಸುವ ಗಡಿಬಿಡಿಯ ಸಂಘರ್ಷದಲ್ಲಿ ಸಿಲುಕಿಕೊಂಡ ಮನಸ್ಸು ಪದೇ ಪದೇ ಘಾಸಿಗೊಳ್ಳುತ್ತಲೇ ಇರುತ್ತದೆ. ಕುಮಾರವ್ಯಾಸ ಭಾರತದಲ್ಲಿ ಯುದ್ಧದ ವಿವರಗಳನ್ನು ಬರೆಯುವಾಗ ಅಲ್ಲಿಯೇ ಶಿಬಿರಗಳನ್ನು ಹಾಕಿಕೊಂಡು ಬಡಗಿಗಳು, ಕಮ್ಮಾರರು ಮುಂತಾದವರು ಮುರಿದ ರಥಗಳನ್ನು, ಶಸ್ತ್ರಾಸ್ತ್ರಗಳನ್ನು ಆಗಿಂದಾಗಲೇ ರಿಪೇರಿ ಮಾಡಿ ಸರಿಪಡಿಸುತ್ತಿದ್ದ ಸಂಗತಿಯ ಪ್ರಸ್ತಾಪ ಬರುತ್ತದೆ. ಹಾಗೆಯೇ ಗಾಯಗೊಂಡ ವೀರಯೋಧರನ್ನು ಔಷಧೋಪಚಾರಗಳಿಂದ ಗುಣಪಡಿಸಿ ಮತ್ತೆ ಹೋರಾಟಕ್ಕೆ ಅಣಿಗೊಳಿಸುವ ವೈದ್ಯತಂಡವೂ ಇರುತ್ತದೆ. ಜೀವನದ ರಣರಂಗದಲ್ಲಿ ಕೀರ್ತಿ-ಯಶಸ್ಸುಗಳ ಸಂಪಾದನೆಗಾಗಿ ನಡೆಸುವ ಹಣಾಹಣಿಯಲ್ಲಿ ದಿನದಿನವೂ ಘಾಸಿಗೊಳ್ಳುವ ಮನೋರಥವನ್ನು ಆಗಿಂದಾಗ ದುರಸ್ತಿ ಮಾಡಿ ಮತ್ತೆ ಕ್ರಿಯಾಶೀಲಗೊಳಿಸುವ ಶಿಬಿರವೊಂದನ್ನು ನಮ್ಮ ಚೈತನ್ಯ ಭೂಮಿಕೆಯಲ್ಲಿ ನಾವೇ ಸಿದ್ಧಪಡಿಸಿಕೊಳ್ಳಬೇಕು. ಈ ಶಿಬಿರದಲ್ಲಿ ಬಡಗಿ-ಕಮ್ಮಾರ-ವೈದ್ಯರಾಗಿ ಕೆಲಸ ಮಾಡುವ ತಜ್ಞ ಕುಶಲಕರ್ಮಿಗಳು ಯಾರೆಂದರೆ-ಯೋಗ, ಪ್ರಾಣಾಯಾಮ-ಧ್ಯಾನ-ಪ್ರಾರ್ಥನೆ ಮತ್ತು ಇವೆಲ್ಲವುಗಳಷ್ಟೇ ಶಕ್ತಿಯುತವಾಗಿ ಗುಣಮುಖೀ ಜೀವಧಾರೆಯ ತಂಪೂಡಿಸುವ ಸಾಹಿತ್ಯ-ಸಂಗೀತ-ಲಲಿತಕಲೆಗಳ ಸಾಧನೆ-ಸಂಪರ್ಕ.

ಬಾಹ್ಯಾಚರಣೆಯ ಯಾವ ನೀರಸ ಚಟುವಟಿಕೆಗಳಿಂದಲೂ ಸಾಧ್ಯವಾಗದಿರುವ ಆಧ್ಯಾತ್ಮಿಕ ಸಿದ್ಧಿಯನ್ನು ಮನಸ್ಸಿನ ಏಕಾಗ್ರತೆಯಿಂದ ನಾವು ಸಾಧಿಸಿಕೊಳ್ಳಬಹುದೆನ್ನುವ ಮಹತ್ವದ ಸಂಗತಿಯನ್ನು ಭಾರತೀಯ ಪರಂಪರೆಯಲ್ಲಿ ಬಹಳಷ್ಟು ಚಿಂತಕರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಆದರೆ ಅತ್ತಲಿತ್ತ ಹರಿಯುವ ಮನಸ್ಸನ್ನು ಒಂದೇ ವಿಚಾರದ ಕಡೆಗೆ ಸ್ಥಿರವಾಗಿ ನಿಲ್ಲಿಸುವುದು ಸುಲಭದ ಸಂಗತಿಯಲ್ಲ. ಭಾರತದ ಆಧ್ಯಾತ್ಮಿಕ ಚಿಂತನೆಗಳ ಅಮೂಲ್ಯ ಸಂಪತ್ತನ್ನು ಹಾಡಿ ಹೊಗಳುವ ನಾವು ಅವುಗಳ ಮಹತ್ವವನ್ನು ಬೇಕಾದಷ್ಟು ರೀತಿಯಲ್ಲಿ ಅಭಿವ್ಯಕ್ತಿಸುತ್ತೇವೆ. ಆದರೆ ಆಚರಣೆಯಲ್ಲಿ ತರುವ ಬಗ್ಗೆ ಬಹುತೇಕರಿಗೆ ಆಸಕ್ತಿ ಇರುವುದಿಲ್ಲ. ದಿನವೂ ಕೆಲವು ಗಂಟೆಗಳಷ್ಟು ಕಾಲವನ್ನು ವ್ಯಯಿಸುತ್ತ ನಿರಂತರವಾಗಿ ಧ್ಯಾನ ಮಾಡುವುದಕ್ಕೆ ಶ್ರದ್ಧೆ ಮತ್ತು ಬದ್ಧತೆ ಬೇಕಾಗುತ್ತದೆ. ಬೇರೆ ಬೇರೆ ಕಚೇರಿಗಳಲ್ಲಿ ಬಿಡುವಿಲ್ಲದೇ ದುಡಿಯುವ ಅನಿವಾರ್ಯತೆಯಲ್ಲಿರುವ ಆಧುನಿಕ ಜನಸಮೂಹಕ್ಕೆ ದೇವರೆದುರು ಪದ್ಮಾಸನ ಹಾಕಿಕೊಂಡು ಕಣ್ಣುಮುಚ್ಚಿ ಕುಳಿತುಕೊಂಡು ಧ್ಯಾನ ಮಾಡು ಎಂದರೆ ‘ಅಯ್ಯೋ ಕ್ಷಮಿಸಿ ನನಗೆ ಅದಕ್ಕೆಲ್ಲ ಸಮಯವಿಲ್ಲ ನಿವೃತ್ತಿ ಹೊಂದಿದ ಮೇಲೆ ನೋಡೋಣ’ ಎನ್ನುತ್ತಾರೆ. ಆದರೆ ಧ್ಯಾನದ ಅವಶ್ಯಕತೆಯಿರುವುದು ಗಡಿಬಿಡಿಯ ಜೀವನಶೈಲಿಯವರಿಗೇ ಹೊರತು ನಿವೃತ್ತರಿಗಲ್ಲ. ಯುದ್ಧ ನಡೆಯುತ್ತಿರುವಾಗ ರಿಪೇರಿ ಶಿಬಿರಗಳು ಅವಶ್ಯವಾದಷ್ಟು ಶಾಂತಿಕಾಲದಲ್ಲಿ ಬೇಕಾಗುವುದಿಲ್ಲ.

ನಾವು ಮಾಡುವ ಕೆಲಸ ಅಥವಾ ಉದ್ಯೋಗದಲ್ಲಿಯೇ ನಾವು ಏಕಾಗ್ರತೆಯನ್ನು ಸಾಧಿಸಿಕೊಂಡು ಮನಸ್ಸು ಮತ್ತು ಶರೀರವನ್ನು ಒಂದೇ ಶ್ರುತಿಯಲ್ಲಿ ಹೊಂದಿಸಿಕೊಂಡು ಕಾಯಕವನ್ನೇ ಕೈಲಾಸವಾಗಿಸಿಕೊಳ್ಳುವ ಸುಂದರ ಕ್ರಮ. ಇದಕ್ಕೆ ಅವಶ್ಯವಾಗಿರುವ ಸಂಗತಿಯೇನೆಂದರೆ ಆ ಹೊತ್ತಿನಲ್ಲಿ ನಮ್ಮ ಮನಸ್ಸು ಕೇಡಿನ ಚಿಂತನೆಯನ್ನು ಮಾಡದೇ ಸದ್ವಿಚಾರಗಳಲ್ಲಿ ತೊಡಗಿಕೊಂಡಿರಬೇಕು. ನಮ್ಮ ಶರೀರ ಕಚೇರಿಯ ಕರ್ತವ್ಯಕ್ಕೆ ಸಂಬಂಧಿಸಿದ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಅದೇ ಸಮಯದಲ್ಲಿ ಮನಸ್ಸು ಏಕಾಗ್ರತೆಯಿಂದ ಅಲ್ಲಿಯೇ ನೆಲೆಗೊಳ್ಳಬೇಕು. ಆ ಹೊತ್ತಿಗೆ ನಮ್ಮ ಧ್ಯೇಯ-ಉದ್ದೇಶಗಳು ಜನ ಸಮುದಾಯಕ್ಕೆ ಒಳಿತಾಗುವಂತೆ, ಸುತ್ತಲಿನ ಜೀವರಾಶಿಗಳಿಗೆ ಸನ್ಮಂಗಳವುಂಟಾಗುವಂತೆ ಸಕಲರಿಗೂ ಲೇಸ ಬಯಸುವಂತೆ ರೂಪುಗೊಂಡಿದ್ದರೆ ನಾವು ಮಾಡುವುದು ಧ್ಯಾನವಾಗುತ್ತದೆ. ನಮ್ಮ ದುರಾಲೋಚನೆಗಳಿಂದ ನಮ್ಮ ಮನಸ್ಸು ವಿಷವಾಗಿ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಾವು ರೋಗದ ಗೂಡಾಗುತ್ತೇವೆ. ಅದರ ಬದಲು ಒಳ್ಳೆಯ ವಿಚಾರಗಳಷ್ಟೇ ಮನಸ್ಸಿನಲ್ಲಿ ಸುಳಿಯುವಂತೆ ನೋಡಿಕೊಂಡು ಸರ್ವೇ ಜನಾಃ ಸುಖಿನೋ ಭವಂತು ಎಂದು ಸ್ವಸ್ಥ ಚಿತ್ತದಿಂದ ತಲ್ಲೀನರಾಗಿ ಕೆಲಸ ಮಾಡಿದರೆ ನಮ್ಮ ಹೃದಯವೇ ದೇವಾಲಯವಾಗುತ್ತದೆ, ನಮ್ಮ ಕೆಲಸವೇ ಧ್ಯಾನವಾಗುತ್ತದೆ ಹಾಗೂ ಅಲ್ಲಿಯೇ ನೆಮ್ಮದಿಯ ರೂಪದಲ್ಲಿ ದೈವ ಸಾಕ್ಷಾತ್ಕಾರವಾಗುತ್ತದೆ. ಇದೇ ಆರೋಗ್ಯದ ಮೊದಲ ಸೂತ್ರವೂ ಆಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು