ಶುಕ್ರವಾರ, ಅಕ್ಟೋಬರ್ 7, 2022
23 °C

ದೈಹಿಕ ಕ್ಷಮತೆಯೂ ಜೈವಿಕ ಗಡಿಯಾರವೂ

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

ನಿತ್ಯದ ಚಟುವಟಿಕೆ ಮತ್ತು ಜೈವಿಕ ಗಡಿಯಾರ–ಸಾಂಕೇತಿಕ ಚಿತ್ರ

‘ಈಗೊಂದು ತಿಂಗಳಿಂದ ಒಂದೇ ಸಮನೆ ತಲೆನೋವು. ಮಾತ್ರೆ ನುಂಗಿ ಸಾಕಾಯಿತು. ಮನೆಮದ್ದೂ ಮುಗಿಯಿತು. ಏನ್ಮಾಡೋದು ಗೊತ್ತಾಗ್ತಿಲ್ಲ. ಮನೆಗೆಲಸ, ಆಫೀಸ್‌ ಕೆಲಸ ಎರಡನ್ನೂ ಬೇರೆ ಮಾಡ್ಕೋಬೇಕಲ್ಲ..’ ಎಂಬ ಗೆಳತಿ ಪದ್ಮಾಳ ಸಮಸ್ಯೆ ವೈದ್ಯರ ‘ನಿತ್ಯದ ಚಟುವಟಿಕೆಗಳನ್ನು ಜೈವಿಕ ಗಡಿಯಾರ (ಬಯಾಲಜಿಕಲ್‌ ಕ್ಲಾಕ್‌)ದ ಜೊತೆ ಸರಿದೂಗಿಸಬೇಕು ಎಂಬ ಮಾತು ನೆನಪಾಗುವಂತೆ ಮಾಡಿತು.

ಲಾಕ್‌ಡೌನ್‌, ಮನೆಯಿಂದಲೇ ಕಚೇರಿ ಕೆಲಸ ಶುರುವಾದಾಗಿನಿಂದ ಬಹಳಷ್ಟು ಉದ್ಯೋಗಿಗಳಲ್ಲಿ ಅರೆದಲೆಶೂಲೆ (ಮೈಗ್ರೇನ್‌),

ಅಸಿಡಿಟಿ, ನಿದ್ರಾಹೀನತೆ, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದು ಸಹಜವಾಗಿಯೇ ಆತಂಕ, ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ಶಿಫ್ಟ್‌ನಲ್ಲಿ ಕೆಲಸ ಮಾಡುವವರಲ್ಲಿ, ಪದೇ ಪದೇ ಪ್ರಯಾಣ ಮಾಡುವವರಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಮನೆಯಿಂದಲೇ ಕಚೇರಿ ಕೆಲಸ ಮಾಡುವವರು ಕೂಡ ಇಂತಹ ತೊಂದರೆಗಳನ್ನು ಎದುರಿಸಲು ಎಷ್ಟೋ ಹೊತ್ತಿಗೆ ಊಟ– ತಿಂಡಿ ಮಾಡುವುದು, ನಿದ್ರೆ ಮಾಡುವುದು, ವ್ಯಾಯಾಮಕ್ಕೆ ಗಮನ ಕೊಡದಿರುವುದು ಕಾರಣ.

ನಿಮ್ಮ ದೈಹಿಕ ಚಟುವಟಿಕೆಗಳನ್ನು ಜೈವಿಕ ಗಡಿಯಾರ ನಿಯಂತ್ರಿಸುತ್ತದೆ. ಕಂಪ್ಯೂಟರ್‌ನಲ್ಲಿ ಪ್ರೋಗ್ರಾಂ ಆದಂತೆ ಈ ಜೈವಿಕ ಗಡಿಯಾರವು ನಿಮ್ಮ ಚಯಾಪಚಯ ಕ್ರಿಯೆ, ಹಾರ್ಮೋನ್‌ ಬಿಡುಗಡೆ, ನಿದ್ರೆ ಮೊದಲಾದವುಗಳನ್ನು ನಿಯಂತ್ರಿಸುವ ಪ್ರೋಗ್ರಾಮರ್‌.

:ಕೆಲವೊಮ್ಮೆ ನಿಮ್ಮ ದೇಹದಲ್ಲಿ ಶಕ್ತಿ ತುಂಬಿಕೊಂಡಂತಾಗಿ ಉತ್ಸಾಹದಿಂದಿದ್ದರೆ, ಇನ್ನು ಕೆಲವು ಬಾರಿ ಶಕ್ತಿಯೇ ಇಲ್ಲ ಎನಿಸುತ್ತದೆ. ಇದಕ್ಕೆಲ್ಲ ಕಾರಣ ಜೈವಿಕ ಗಡಿಯಾರ’ ಎನ್ನುತ್ತಾರೆ ಲೈಫ್‌ಸ್ಟೈಲ್‌ ರೋಗಗಳ ತಜ್ಞ ಡಾ.ಟಿ.ಎಸ್‌.ತೇಜಸ್‌.

ಹಸಿವು, ಮಾನಸಿಕ ಕ್ರಿಯಾಶೀಲತೆ, ಒತ್ತಡವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಕೂಡ ನಿತ್ಯದ ದೈಹಿಕ ಚಟುವಟಿಕೆಗಳು ನಿಯಂತ್ರಿಸುತ್ತವೆ. ಇದರಲ್ಲಿ ಸ್ವಲ್ಪ ಏರುಪೇರಾದರೂ ಸಾಕು, ಅಂದರೆ ಪ್ರಯಾಣ ಮಾಡುವುದು, ಕಾರ್ಯಕ್ರಮಗಳಲ್ಲಿ ಅಥವಾ ಇತರ ಹೆಚ್ಚುವರಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಶಕ್ತಿ ಕಡಿಮೆಯಾದಂತೆ ಎನಿಸುವುದು ಇದೇ ಕಾರಣಕ್ಕೆ. ಹೀಗಾಗಿ ದಿನನಿತ್ಯದ ಚಟುವಟಿಕೆಗಳನ್ನು ಜೈವಿಕ ಗಡಿಯಾರಕ್ಕೆ ಹೊಂದಿಸಿಕೊಂಡು ಮಾಡುವುದು ಒಳಿತು. ಇದರಿಂದ ದಿನವಿಡೀ ಹುಮ್ಮಸ್ಸಿನಿಂದ ಕೆಲಸ ಮಾಡಬಹುದು.

‘ನಮ್ಮ ಚಟುವಟಿಕೆಗಳಲ್ಲಿ, ಕೆಲಸಗಳಲ್ಲಿ ಬದಲಾವಣೆ ತಂದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಆದರೆ ಸಮಯವನ್ನು ಹೊಂದಿಸಿಕೊಂಡು ಸಣ್ಣಪುಟ್ಟ ಬದಲಾವಣೆ ತಂದುಕೊಂಡರೂ ಸಾಕು, ಆರೋಗ್ಯದಲ್ಲಿ ಸುಧಾರಣೆ ಖಂಡಿತ ಸಾಧ್ಯ. ಮಧುಮೇಹ, ಅಧಿಕ ರಕ್ತದೊತ್ತಡ, ಖಿನ್ನತೆಯಂತಹ ಕಾಯಿಲೆಗಳನ್ನು ಕೂಡ ನಿಯಂತ್ರಣಕ್ಕೆ ತರಬಹುದು’ ಎನ್ನುತ್ತಾರೆ ಡಾ.ತೇಜಸ್‌.

ನಿದ್ರೆ

ನಿತ್ಯ ನೀವು ನಿದ್ರಿಸುವ ಹಾಗೂ ಏಳುವ ಸಮಯವನ್ನು ಈ ಜೈವಿಕ ಗಡಿಯಾರ ಉತ್ತಮವಾಗಿ ನಿರ್ವಹಿಸಬಲ್ಲದು. ನಿಮ್ಮದೇ ಆದ ಸಮಯವನ್ನು ನೀವು ಪಾಲಿಸಬೇಕು. ಜೊತೆಗೆ ಮಲಗುವ ಮುನ್ನ ನೀವು ನಡೆಸುವಂತಹ ಇತರ ಚಟುವಟಿಕೆಗಳು ಅಂದರೆ ಲಘು ವಾಕಿಂಗ್‌, ರಾತ್ರಿಯೂಟ ಬೇಗ ಸೇವಿಸುವುದು ಇತ್ಯಾದಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ವಯಸ್ಸಾದಂತೆ ನಿದ್ರೆಯ ಅವಧಿ ಬದಲಾಗುತ್ತದೆ. ಚಿಕ್ಕಮಕ್ಕಳು, ಹದಿಹರೆಯದವರು ಹೆಚ್ಚು ಹೊತ್ತು ನಿದ್ರಿಸಿದರೆ, ವಯಸ್ಸಾದವರಲ್ಲಿ ಬೆಳಿಗ್ಗೆ ಬೇಗ ಎಚ್ಚರಾಗಬಹುದು. ಹಗಲು ಕೆಲಸ ಮಾಡುವ ಅವಧಿ ಕೂಡ ವಯಸ್ಸಾದವರಲ್ಲಿ ಕಡಿಮೆ. ಹೀಗಾಗಿ ನಿದ್ರೆಯ ಸಮಯವೂ ಸಹಜವಾಗಿ ಕಡಿಮೆಯೇ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ರಾತ್ರಿ ಬೇಗ ಮಲಗಿ, ಬೇಗ ಏಳುವ ಅಭ್ಯಾಸಕ್ಕೆ ಹೊಂದಿಕೊಂಡರೆ, ನಿಮ್ಮ ಜೈವಿಕ ಗಡಿಯಾರ ಇದಕ್ಕೇ ಹೊಂದಿಕೊಳ್ಳುತ್ತದೆ.

ಮಧ್ಯಾಹ್ನ ಸಾಮಾನ್ಯವಾಗಿ ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆಯಾಗುವುದರಿಂದ ಚಿಕ್ಕ ನಿದ್ರೆ ಅಥವಾ ಕೆಲ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ.

ಆಹಾರ ಸೇವನೆ

ಸೂಕ್ತ ಸಮಯದಲ್ಲಿ ಆಹಾರದ ಸೇವನೆ ಕೂಡ ನಮ್ಮ ಆರೋಗ್ಯವನ್ನು ಸರಿ ದಾರಿಗೆ ತರಲು ನೆರವಾಗುತ್ತದೆ. ‘ಬೆಳಿಗ್ಗೆ ಎದ್ದ ಒಂದೆರಡು ತಾಸಿನೊಳಗೆ ಆಹಾರ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಸೂಕ್ತ. ರಾತ್ರಿ ಕೂಡ ಮಲಗುವ 2–3 ತಾಸಿನೊಳಗೆ ಆಹಾರ ಸೇವಿಸಿ. ಆದರೆ ಶಿಫ್ಟ್‌ ಇರುವವರು ಇದನ್ನು ತಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಜೈವಿಕ ಗಡಿಯಾರ ಹೊಂದಿಕೊಳ್ಳುತ್ತದೆ. ಆದರೆ ದಿನಾ ಬದಲಾವಣೆ ಮಾಡಿದರೆ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ’ ಎನ್ನುತ್ತಾರೆ ತೇಜಸ್‌.

ವ್ಯಾಯಾಮವನ್ನೂ ಸಂಜೆ 4–6 ಗಂಟೆಯೊಳಗೆ ಮಾಡಿದರೆ ಅದರಿಂದ ಹೆಚ್ಚು ಲಾಭ ಪಡೆಯಬಹುದು. ನಮ್ಮ ದೈಹಿಕ ಕ್ಷಮತೆ ಕೂಡ ಮಧ್ಯಾಹ್ನ 3–6ರವರೆಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎನ್ನುತ್ತಾರೆ ತಜ್ಞರು.

ಏಕಾಗ್ರತೆ

ವಿದ್ಯಾರ್ಥಿಗಳು ಬೆಳಿಗ್ಗೆ ಓದಿದರೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಜಾಸ್ತಿ ಮಾನಸಿಕ ಶ್ರಮ ಬೇಡುವಂತಹ ಕೆಲಸಗಳನ್ನು ಮಧ್ಯಾಹ್ನದೊಳಗೆ ಮಾಡಿಕೊಳ್ಳುವುದು ಸೂಕ್ತ. ಊಟದ ನಂತರ ಅಂದರೆ 2ರಿಂದ 4 ಗಂಟೆಯವರೆಗೆ ನಮ್ಮ ಏಕಾಗ್ರತೆ ಕಡಿಮೆಯಾಗುವುದರಿಂದ ಕೆಲಸ ಮಾಡಲು ಕಷ್ಟವೆನಿಸುತ್ತದೆ. ಇದು ಬಹುತೇಕರಿಗೆ ಅನುಭವಕ್ಕೆ ಬಂದಿರಬಹುದು. ಹಾಗೆಯೇ ದೈಹಿಕವಾಗಿ ಸುಸ್ತಾದಾಗ ಮಾನಸಿಕವಾಗಿ ಯೋಚನೆ ಬಹಳ ಕಡೆ ಹರಿದಾಡುತ್ತದೆ ಎನ್ನುತ್ತಾರೆ ತಜ್ಞರು.

ಆದರೆ ಎಲ್ಲರಿಗೂ ಇದೇ ರೀತಿ ಜೈವಿಕ ಗಡಿಯಾರ ಕೆಲಸ ಮಾಡುತ್ತದೆ ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಬೆಳಿಗ್ಗೆ ದೈಹಿಕ ಕ್ಷಮತೆ ಜಾಸ್ತಿಯಿದ್ದರೆ, ಇನ್ನು ಕೆಲವರಿಗೆ ಸಂಜೆ ಇರಬಹುದು. ಇದನ್ನು ಅರಿತುಕೊಂಡು ಕೆಲಸ ಮಾಡುವುದು ಸೂಕ್ತ.

* ನಿದ್ರೆ ಸಮಯವನ್ನು ಅಲಾರ್ಮ್‌ ಇಟ್ಟುಕೊಂಡು ಸರಿಪಡಿಸಿಕೊಳ್ಳಬಹುದು.
* ನಿಮ್ಮ ಮನಸ್ಸಿಗೆ, ದೇಹಕ್ಕೆ ಉಲ್ಲಾಸವಾಗುವಂತಹ ಸಮಯವನ್ನು ವಿವಿಧ ಕೆಲಸಗಳಿಗೆ ನಿಗದಿಪಡಿಸಿಕೊಂಡು ಅದನ್ನು ಅನುಸರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು