ಶುಕ್ರವಾರ, ಆಗಸ್ಟ್ 19, 2022
21 °C

ಬಿಎಸ್‌ವೈ ಮೊಮ್ಮಗಳ ಸಾವಿನ ನಂತರ ಮುನ್ನೆಲೆಗೆ ಬಂದ ‘ಪಿಪಿಡಿ’: ಏನಿದು?

ಅಖಿಲ್‌ ಕಡಿದಾಳ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಅವರು ಪ್ರಸವಾನಂತರದ ಖಿನ್ನತೆ (Postpartum Depression-PPD)ಯಿಂದಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಪಿಪಿಡಿ ಎಂಬ ಸಮಸ್ಯೆಯ ಚರ್ಚೆಯು ಮುನ್ನೆಲೆಗೆ ಬಂದಿದೆ. ಆಗಷ್ಟೇ ಮಗುವಿಗೆ ಜನ್ಮ ನೀಡಿದ ಶೇ. 22 ರಷ್ಟು ತಾಯಂದಿರ ಮೇಲೆ ಈ ಸಮಸ್ಯೆ ಪರಿಣಾಮ ಬೀರುತ್ತಿರುವುದು ಗಮನ ಸೆಳೆದಿದೆ.

ಡಾ. ಸೌಂದರ್ಯ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

‘ಪಿಪಿಡಿ ವ್ಯಾಪಕವಾಗಿ ಕಾಡುವ ಸಮಸ್ಯೆ. ಆದರೆ, ಇದು ಪತ್ತೆಯಾಗುವ ಸಾಧ್ಯತೆಗಳು ಕಡಿಮೆ. ಗರ್ಭಾವಸ್ಥೆಯ ನಂತರದ ತಪಾಸಣೆಗೆ ವೈದ್ಯರ ಬಳಿಗೆ ತೆರಳುವ ಮಹಿಳೆಯರ ಸಂಖ್ಯೆ ವಿರಳವಾಗಿರುವುದೇ ಇದಕ್ಕೆ ಕಾರಣ’ ಎಂದು ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆರಿಗೆಯ ನಂತರ ‘ಈಸ್ಟ್ರೊಜೆನ್’ ಮತ್ತು ‘ಪ್ರೊಜೆಸ್ಟರಾನ್‌’ನಂತಹ ಹಾರ್ಮೋನುಗಳ ಉತ್ಪಾದನೆಯಲ್ಲಿ ಆಗುವ ಸಮಸ್ಯೆಯಿಂದಾಗಿ ಪಿಪಿಡಿ ಉಂಟಾಗುತ್ತದೆ. ಇದು ಮನೋವೈದ್ಯಕೀಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ‘ಬೆಂಗಳೂರು ಸೊಸೈಟಿ ಆಫ್ ಅಬ್‌ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿ’ಯ ಮಾಜಿ ಅಧ್ಯಕ್ಷೆ ಡಾ.ಶೀಲಾ ವಿ ಮಾನೆ ತಿಳಿಸಿದ್ದಾರೆ.

‘ಪ್ರತಿ ತಾಯಿಯು ಪ್ರಸವಾನಂತರದ 'ಮಾನಸಿಕ ಸಮಸ್ಯೆ’ಗಳನ್ನು ಅನುಭವಿಸುತ್ತಾಳೆ. ಇದು ಹೆರಿಗೆಯಾದ ಎರಡು ವಾರಗಳಲ್ಲಿ ಹಾರ್ಮೋನುಗಳ ಮಟ್ಟದಲ್ಲಿನ ಕುಸಿತದ ಕಾರಣದಿಂದ ಉಂಟಾಗುತ್ತದೆ’ ಎಂದು ಡಾ ಶೀಲಾ ಹೇಳಿದರು.

‘ಹಾರ್ಮೋನುಗಳ ಸಮಸ್ಯೆಯಿಂದಾಗಿ ಮೆದುಳು ಮತ್ತು ವರ್ತನೆಯಲ್ಲಿ ಬದಲಾವಣೆಗಳಾಗುತ್ತವೆ. ಭಾವನೆಗಳಲ್ಲಿ ಬದಲಾವಣೆ, ಆತಂಕ, ಅಳುವುದು ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ. ಪರಿಸ್ಥಿತಿಯು ಉಲ್ಬಣಗೊಂಡರೆ ಅಥವಾ ಖಿನ್ನತೆಯಂಥ ದೀರ್ಘಕಾಲೀನ ಸಮಸ್ಯೆಗಳು ಇದ್ದರೆ ಹೊಸ ತಾಯಂದಿರಿಗೆ ಪ್ರಸವ ನಂತರ ಒತ್ತಡ ನಿಭಾಯಿಸಲು ಸಾಧ್ಯವಾಗುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಈ ಸ್ಥಿತಿಯಲ್ಲಿರುವ ತಾಯಂದಿರು ಕೆಲವು ಸಂದರ್ಭಗಳಲ್ಲಿ ತಮ್ಮ ಮಗುವಿಗೆ ಹಾನಿ ಮಾಡುವ ಸಂದರ್ಭಗಳೂ ಉಂಟು ಎಂದು ಶೀಲಾ ಮಾಹಿತಿ ನೀಡಿದ್ದಾರೆ.

2017ರಲ್ಲಿ ಭಾರತದಲ್ಲಿ ನಡೆದಿದ್ದ 38 ಅಧ್ಯಯನ ವರದಿಗಳು ಈ ಅಂಶಗಳನ್ನು ಬಯಲಿಗೆಳೆದಿವೆ: ಅಧ್ಯಯನದಿಂದ ಬಹಿರಂಗವಾದ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಉಲ್ಲೇಖಿಸಿದೆ. ಸಮಸ್ಯೆಯ ಎದುರಿಸುತ್ತಿರುವವರ ಪ್ರಮಾಣ ದಕ್ಷಿಣ ಭಾರತದಲ್ಲಿ ಅತ್ಯಧಿಕವಾಗಿದೆ (ಶೇ. 26). ಇದರ ನಂತರ ದೇಶದ ಪೂರ್ವ ಮತ್ತು ನೈರುತ್ಯ ಭಾಗದಲ್ಲಿ ಶೇ. 23ರಷ್ಟು ಇದೆ. ಪಶ್ಚಿಮ ವಲದಯಲ್ಲಿ ಶೇ. 21ರಷ್ಟು ಮಂದಿ ಹೊಸ ತಾಯಂದಿರಿಗೆ ಈ ಸಮಸ್ಯೆ ಇದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಅಧ್ಯಯನದಲ್ಲಿ 20,043 ಹೊಸ ತಾಯಂದಿರನ್ನು ಸಂಪರ್ಕಿಸಲಾಗಿತ್ತು.

ಸಮಸ್ಯೆಯಲ್ಲಿರುವ ಮಹಿಳೆಯರಿಗೆ ಕುಟುಂಬ ಸದಸ್ಯರು ಬೆಂಬಲವಾಗಿ ನಿಲ್ಲಬೇಕು. ಮಾನಸಿಕ ಸ್ಥೈರ್ಯ ತುಂಬಬೇಕು. ಹೀಗೆ ಮಾಡಿದರೆ ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯುವ ಸಾಧ್ಯತೆಗಳಿರುತ್ತವೆ. ಆದರೂ, ಕುಟುಂಬದೊಳಗಿನ ‘ಪ್ರೀತಿ’ಯ ವಾತಾವರಣವು ಹೊಸ ತಾಯಿಯನ್ನು ಹಾರ್ಮೋನ್ ಅಸಮತೋಲನದ ಪರಿಣಾಮಗಳಿಂದ ರಕ್ಷಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ‘ ಎಂದು ಡಾ. ಶೀಲಾ ಬೇಸರ ವ್ಯಕ್ತಪಡಿಸಿದ್ದಾರೆ.

ನೈಜ ಪ್ರಕರಣ

32 ವರ್ಷದ ಆಯಿಷಾ (ಹೆಸರು ಬದಲಾಯಿಸಲಾಗಿದೆ) ಅವರಿಗೂ ಪ್ರಸವ ನಂತರದ ಮಾನಸಿಕ ಸಮಸ್ಯೆ ಉಂಟಾಗಿತ್ತು. ಕುಟುಂಬದೊಳಗಿನ ಬೆಂಬಲ, ಪ್ರೀತಿಯ ಹೊರತಾಗಿಯೂ ಆಕೆ ತನಗೆ ತಾನೇ ಹಾನಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು.

ಹೆರಿಗೆಯಾಗಿ ಕೇವಲ 10 ದಿನಗಳಲ್ಲಿ ಆಯಿಷಾ ಆಸ್ಪತ್ರೆಗೆ ಬಂದಿದ್ದರು. ಕಾರಣವಿಲ್ಲದೆ ಅಳುವುದು, ತಾನು ನಿಷ್ಪ್ರಯೋಜಕಿ ಎಂಬ ಭಾವನೆ ಮೂಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದರು‘ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಪ್ರಸೂತಿ ತಜ್ಞೆ, ಲ್ಯಾಪರೊಸ್ಕೋಪಿಕ್ ಸ್ತ್ರೀರೋಗತಜ್ಞೆ ಮಣಿಪಾಲ್ ಆಸ್ಪತ್ರೆಯ (ಸರ್ಜಾಪುರ ರಸ್ತೆ) ಡಾ ಬೀನಾ ಜೈಸಿಂಗ್ ತಿಳಿಸಿದ್ದಾರೆ.

‘ಮಗುವಿಗೆ ಮತ್ತು ತನಗೆ ತಾನೇ ಹಾನಿ ಮಾಡಿಕೊಳ್ಳಬೇಕೆಂಬ ಭಾವನೆಗಳು ತನ್ನಲ್ಲಿ ಮೂಡುತ್ತಿರುವುದಾಗಿ ಆಕೆ ಬಹಿರಂಗಪಡಿಸಿದರು’ ಎಂದು ಡಾ ಬೀನಾ ವಿವರಿಸಿದರು.

‘ಪ್ರೀತಿಸುವ ಕುಟುಂಬ ಸದಸ್ಯರಿದ್ದರೂ, ಕುಟುಂಬಸ್ಥರ ಬೆಂಬಲದ ಹೊರತಾಗಿಯೂ ಆಯಿಷಾ ಅವರಿಗೆ ಸಮಸ್ಯೆ ಕಾಡಿತ್ತು ಎಂಬುದರ ಹಿನ್ನೆಲೆಯಲ್ಲಿ ಈ ಪ್ರಕರಣವು ಗಮನಾರ್ಹವಾಗಿದೆ. ಇದು ದೇಹದ ಹಾರ್ಮೋನುಗಳ ಸಮಸ್ಯೆಯಿಂದಾಗಿ ಉಂಟಾಗುವ ಮಾನಸಿಕ ಕ್ಷೋಭೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು