ಮಂಗಳವಾರ, ಏಪ್ರಿಲ್ 13, 2021
23 °C
ಕೈ ಹಿಡಿದಳು ಗಾಯತ್ರಿ –18(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)

PV Web Exclusive: ಕ್ಯಾನ್ಸರ್‌ ನನ್ನ ಬಿಟ್ಟೋಡಿತ್ತು....

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಇಲ್ಲಿಯವರೆಗೆ
ಸಂಕಷ್ಟವನ್ನು ಧೈರ್ಯವಾಗಿ, ಎದುರಿಸಿ ಗೆಲ್ಲುವ ಆತ್ಮವಿಶ್ವಾಸ ಕೊಡು ಎಂದು ಬೇಡಿಕೊಳ್ಳೋದು ನನ್ನ ಜ್ಯಾಯಮಾನ. ಹಾಗೇ ಆಯಿತು. ನನ್ನ ಬತ್ತಳಿಕೆಯಲ್ಲಿದ್ದದ್ದು ಹಣವಲ್ಲ, ಕೇವಲ ನನ್ನಲ್ಲಿನ ವಿಶ್ವಾಸ ಮತ್ತ ಅಚಲ ನಂಬಿಕೆ. ಇಷ್ಟು ದೀರ್ಘಾವಧಿಯ ಅನಾರೋಗ್ಯವನ್ನು ಭೇದಿಸಲು ಅಷ್ಟೇ ತಾಳ್ಮೆ, ಸಂಯಮ ಬೇಕು. ಅದೊಂದು ತಪಸ್ಸು. ಮನಸ್ಸಿನ ಸಮಸ್ಥಿತಿ ಕಾಯ್ದುಕೊಂಡು ಮುನ್ನುಗ್ಗಿದಲ್ಲಿ ಗೆಲುವು ನಮ್ಮದೇ. ಮನದಲ್ಲಿ ಅಂಥ ಅಚಲ ಭರವಸೆಯಿಟ್ಟಲ್ಲಿ ಖಂಡಿತ ಗೆಲುವು ನಮ್ಮ ಪಾಲಿಗಿರಲಿದೆ.... ಮುಂದೆ ಓದಿ...

****

2016ರ ನವೆಂಬರ್‌ ಮಧ್ಯದಿಂದ ಆರಂಭವಾದ ಕ್ಯಾನ್ಸರ್‌ ವಿರುದ್ಧದ ಸಮರದ ಮೊದಲ ಹಂತ 2017ರ ಜುಲೈ 22ರಂದು ಮುಗಿದಿತ್ತು. ಅಂದರೆ 33 ರೆಡಿಯೇಷನ್‌ಗಳು ನನ್ನ ದೇಹವನ್ನು ಹಾದು ಹೋಗಿದ್ದವು. ಸುದೀರ್ಘ ಚಿಕಿತ್ಸೆಯಲ್ಲಿ ಕಿಮೊಥೆರಪಿ, ಸರ್ಜರಿಯ ನಂತರವೂ, ಎಲ್ಲಿಯಾದರೂ ಕ್ಯಾನ್ಸರ್‌ ಕಣಗಳು ಉಳಿದುಕೊಂಡಿದ್ದರೆ ಅವು ರೆಡಿಯೊಥೆರಪಿಯ ವಿಕಿರಣಗಳಿಗೆ ಸುಟ್ಟು ಸುಣ್ಣವಾಗಿದ್ದವು. ಡಾಕ್ಟರ್‌ ಪ್ಲಾನ್‌ ಪ್ರಕಾರ ನನಗೆ ಇನ್ನೂ ಒಂದು ವರ್ಷ ಚಿಕಿತ್ಸೆ (18 ಇಂಜೆಕ್ಷನ್‌ಗಳು) ಬಾಕಿಯಿತ್ತು. ಆದರೆ ನನ್ನ ಪ್ರಕಾರ ಹಾರ್ಮೊನ್‌ ಥೆರಪಿ ಬಿಟ್ಟರೆ ಉಳಿದೆಲ್ಲ ಚಿಕಿತ್ಸೆಗಳು ಮುಗಿದಿದ್ದವು. ನಾನು ಕ್ಯಾನ್ಸರ್‌ನಿಂದ ಗುಣವಾಗಿದ್ದೇನೆ ಎಂಬ ಯೋಚನೆ ನನ್ನ ಮನದಲ್ಲಿ ಬಲವಾಗಿ ನೆಲೆಯೂರಿತ್ತು.

ಎಂಟು ತಿಂಗಳಿಂದ ಮೈಮೇಲೆ ಒಂದೇ ಒಂದು ಕೂದಲು ಬೇಕೆಂದರೂ ಕಾಣಲು ಇರಲಿಲ್ಲ. ಅದರಿಂದಾದ ಒಂದು ಪ್ರಯೋಜನ ಎಂದರೆ ಕೈ–ಕಾಲುಗಳ ವ್ಯಾಕ್ಸಿಂಗ್‌ ಮಾಡಿಕೊಳ್ಳೋಕೆ ಪಾರ್ಲರ್‌ಗೆ ಹೋಗೋದು ತಪ್ಪಿತ್ತು! ಮೂಗಿನೊಳಗೆ ಉಸಿರಾಡುವ ಗಾಳಿ ಫಿಲ್ಟರ್‌ ಆಗಲೂ ಕೂಡ ಒಂದೇ ಒಂದು ಕೂದಲಿರಲಿಲ್ಲ. ಆದರೀಗ ತಲೆಯಲ್ಲಿ ಕೂದಲು ಚಿಗುರಲು ಶುರುವಾಗಿತ್ತು. ತಲೆ ಮೇಲೆ ಕೈಯಾಡಿಸಿದರೆ ಎಳೆ ಕೂದಲುಗಳು ಹತ್ತುತ್ತಿದ್ದವು. ಆದರೆ ಅವುಗಳಲ್ಲಿ ಅರ್ಧದಷ್ಟು ಬಿಳಿ ಕೂದಲುಗಳೇ ಬಂದಿದ್ದವು.  ಕಣ್ಣಿನ ರೆಪ್ಪೆಗಳು, ಹುಬ್ಬುಗಳು ಅಲ್ಲಲ್ಲಿ ಇಣುಕಲು ಶುರುವಾಯಿವು. ಮನದೊಳಗೆ ಹೇಳಲಾರದಂಥ ಖುಷಿ. ಕೂದಲುಗಳು ಮತ್ತೆ ಹುಟ್ಟುತ್ತಿವೆ. ಮೊದಲಿನಂತೆ ದಪ್ಪದಪ್ಪವಾಗಿ ಕಣ್ಣಿನ ರೆಪ್ಪೆ, ಹುಬ್ಬುಗಳು ಬರಲಿವೆ. ವಾವ್‌, ಎಷ್ಟು ಖುಷಿ. ಆದರೂ ತಲೆಯಲ್ಲಿ ಒಂದಿಂಚಿನಷ್ಟು ಉದ್ದದ ಕೂದಲು ಬರುವವರೆಗೂ ಶಾಲು ಹೊದ್ದು ಆಫೀಸ್‌ಗೆ ಹೋಗುತ್ತಿದ್ದೆ. ಆರಂಭದಲ್ಲಿ ಸುಸ್ತು ಎನ್ನಿಸುತ್ತಿದ್ದರೂ ಬರಬರುತ್ತ ಅದಕ್ಕೆ ಹೊಂದಿಕೊಂಡೆ. ಮತ್ತೆ ನನ್ನೊಳಗೆ ಚೈತನ್ಯ ವೃದ್ಧಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದುನಿಂತೆ. ವಾಕಿಂಗ್‌ ಶುರು ಮಾಡಿದರೆ ಹೇಗೆ ಎಂಬ ವಿಚಾರ ತಲೆಯಲ್ಲಿ ಮೂಡಿತು. ಹೌದು ಬೆಳಗಿನ ವಾಯುವಿಹಾರ ಮನಸ್ಸನ್ನು ಚೇತೋಹಾರಿಗೊಳಿಸಲು ಒಳ್ಳೆ ಮಾರ್ಗ ಎಂದುಕೊಂಡೆ.

ಹೋಗಿ ಟ್ರ್ಯಾಕ್‌ ಪ್ಯಾಂಟ್‌, ಟಿ–ಶರ್ಟ್‌, ವಾಕಿಂಗ್‌ ಶೂ ತಂದೆ. ಆಗಸ್ಟ್‌ನಿಂದ ಬೆಳಿಗ್ಗೆ ಮನೆ ಹತ್ತಿರದ ಕಿಮ್ಸ್‌ ಕ್ಯಾಂಪಸ್‌ನಲ್ಲಿ ವಾಕಿಂಗ್‌ ಹೋಗಲು ಶುರು ಮಾಡಿದೆ. ಆರಂಭದಲ್ಲಿ ತೀರಾ ಸುಸ್ತು ಎನಿಸಿತು. ನಡೀತಾ ನಡೀತಾ ಎಲ್ಲಿ ತಲೆ ತಿರುಗಿ ಬೀಳ್ತಿನೆನೋ ಅನ್ನಿಸುತ್ತಿತ್ತು. ಅಷ್ಟೊಷ್ಟೊತ್ತಿಗೆ ಕಣ್ಣು ಮಂಜಾದಂತೆ ಅನ್ನಿಸುತ್ತಿತ್ತು. ಬೆವರು ಇಳಿಯುತ್ತಿತ್ತು. ಆದರೂ ಬಿಡಲಿಲ್ಲ. ಕಷ್ಟವಾದರೂ ನಿತ್ಯವೂ ವಾಕಿಂಗ್‌ ಮುಂದುವರಿಸಿದೆ. ಕಿಮ್ಸ್‌ ಆವರಣವನ್ನು ಮೂರು ಸುತ್ತು ಸುತ್ತುತ್ತಿದ್ದೆ. ಒಂದೆರಡು ತಿಂಗಳಲ್ಲಿ ವಾಕಿಂಗ್‌ಗೆ ಫುಲ್‌ ಹೊಂದಿಕೊಂಡೆ. ಒಂದು ದಿನವೂ ವಾಕಿಂಗ್‌ಗೆ ಹೋಗದೇ ಇರಲಾಗಲಿಲ್ಲ. ಆಹಾರ ಕ್ರಮವವನ್ನೂ ಬದಲಿಸಿಕೊಂಡೆ. ಕ್ಯಾರೆಟ್‌, ಸೌತೆಕಾಯಿ ಸಲಾಡ್‌ ನಿತ್ಯದ ಊಟದ ಜೊತೆಯಾದವು. ಆದರೆ ಎಲ್ಲ ಹಂತದ ಚಿಕಿತ್ಸೆಯ ಜೊತೆಜೊತೆಗೆ ನಾನು ಗಾಯತ್ರಿ ಮುದ್ರೆ ಮಾಡುವುದನ್ನು ಎಂದೂ ತಪ್ಪಿಸಲಿಲ್ಲ. ಸರ್ಜರಿ ಸಮಯ ಬಿಟ್ಟು ಉಳಿದೆಲ್ಲ ದಿನಗಳೂ ಬೆಳಿಗ್ಗೆ, ರಾತ್ರಿ ನಿಯಮಿತವಾಗಿ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಶೈಲಜಾ ಗೋರನಮನೆ ಎರಡನೇ ಮಗಳು ತೇಜಸ್ವಿನಿ ಮದುವೆಯಿತ್ತು. ಹೋಗದೇ ಇರಲಾಗಲಿಲ್ಲ. ಅದು ಶಿರಸಿ ಸಮೀಪದ ಗೋಳಿ ದೇವಸ್ಥಾನದಲ್ಲಿ. ಹೋಗಲೊ ಬೇಡ್ವೊ ಅನ್ನೋ ಯೋಚನೆ. ತಲೆಯಲ್ಲಿ ಅರ್ಧ ಇಂಚಿನಷ್ಟು ಕೂದಲು ತುಸು ದಟ್ಟವಾಗೇ ಬಂದಿತ್ತು. ಹುಬ್ಬುಗಳು ಕೂಡ ದಟ್ಟವಾದವು. ಯಾರಾದರೂ ನೋಡಿದರೆ ಕೃಷ್ಣಿ ಹೌದು ಅನ್ನೋವಷ್ಟರ ಮಟ್ಟಿಗೆ ನನ್ನ ಗುರುತು ತಿರುಗಿ ಬಂದಿತ್ತು. ತಲೆ ಮೇಲೆ ಶಾಲು ಹೊದೆಯುವುದನ್ನು ನಿಲ್ಲಿಸಿದೆ. ನನ್ನೊಳಗೆ ಒಂದು ವಿಶೇಷ ವಿಶ್ವಾಸವೊಂದು ಹುಟ್ಟಿಕೊಂಡಿತ್ತು. ಅದೇ ವಿಶ್ವಾಸದೊಂದಿಗೆ ತೇಜು ಮದುವೆಗೆ ಹೊರಟು ನಿಂತೆ. ನಾನು ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ನಾನು ಪಾಲ್ಗೊಂಡ ಮೊದಲ ಮಂಗಳಕಾರ್ಯ ಅದಾಗಿತ್ತು. ಮದುವೆಯಲ್ಲಿ ನನ್ನ ಸ್ನೇಹಿತೆಯರು, ಪರಿಚಯದವರು ಸಾಕಷ್ಟು ಮಂದಿ ಬಂದಿದ್ದರು. ಹೆಚ್ಚಿನವರಿಗೆ ನನಗೆ ಕ್ಯಾನ್ಸರ್‌ ಆಗಿದ್ದು ಗೊತ್ತಿರಲಿಲ್ಲ. ಮದುವೆ ಮನೆಯಲ್ಲಿ ಅದೂ ಬಹಿರಂಗಗೊಂಡಿತು. ಆದರೂ ನಾನು ಖುಷಿಖುಷಿಯಿಂದಲೇ ಇದ್ದೆ.

ಡಿಸೆಂಬರ್‌ ವೇಳೆಗೆ ಕೂದಲು ಒಂದಿಂಚಿನಷ್ಟು ಉದ್ದವಾದವು. ನಿಯಮಿತ ಚೆಕ್‌ಅಪ್‌ಗೆ ಹೋದಾಗ ಡಾ.ಚನ್ನಬಸಪ್ಪ ಕೋರಿ ಅವರು ಪೆಟ್‌ ಸ್ಕ್ಯಾನ್‌ಗೆ ಸಲಹೆ ನೀಡಿದರು. ಅವರ ಸಲಹೆ ಮೇರೆ ಪೆಟ್‌ ಸ್ಕ್ಯಾನ್‌ಗೆ ಒಳಪಟ್ಟೆ. ಪೆಟ್‌ ಸ್ಕ್ಯಾನ್‌ ನನಗದು ಎರಡನೇ ಅನುಭವ. ಆರಂಭದಲ್ಲಿ ಪೆಟ್‌ ಸ್ಕ್ಯಾನ್‌ ಮಾಡಿದ್ದರಿಂದ ಎರಡನೇ ಬಾರಿ ಅಷ್ಟೊಂದು ಕುತೂಹಲವಿರಲಿಲ್ಲ. ಬದಲಿಗೆ ಕೊಂಚ ಭಯವಿತ್ತು. ಮತ್ತೆ ಎಲ್ಲಿಯಾದರೂ ಕ್ಯಾನ್ಸರ್‌ ಕಣಗಳು ಉಳಿದುಬಿಟ್ಟಿದ್ದರೆ...? ಎಂಬ ಆತಂಕವಿತ್ತು. ರಿಪೋರ್ಟ್‌ ಬಂದಾಗ ಅವೆಲ್ಲ ಮಾಯವಾಗಿ ಮನಸ್ಸು ಇನ್ನಷ್ಟು ನಿರಾಳವೆನಿಸಿತು. ಏಕೆಂದರೆ ನನ್ನ ಆರೋಗ್ಯಸ್ಥಿತಿ ಎಲ್ಲವೂ ನಾರ್ಮಲ್‌ ಎಂದು ರಿಪೋರ್ಟ್‌ ಹೇಳಿತ್ತು. ಕ್ಯಾನ್ಸರ್‌ ನನ್ನ ದೇಹ ಬಿಟ್ಟು ಓಡಿ ಹೋಗಿತ್ತು. ನಾನೀಗ ಸಂಪೂರ್ಣ ಕ್ಯಾನ್ಸರ್‌ ಮುಕ್ತಳಾಗಿದ್ದೆ. ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ನನಗೆ ಸಂಪೂರ್ಣ ಗೆಲುವು ದಕ್ಕಿತ್ತು. ಚಿಕಿತ್ಸೆಯೂದ್ದಕ್ಕೂ ಪಟ್ಟ ಯಾತನೆ, ಕಷ್ಟಗಳೆಲ್ಲವೂ ಲೆಕ್ಕಕ್ಕಿಲ್ಲದಂತಾಯಿತು. ಇದರಿಂದ ನನ್ನ ಮನಸ್ಸಿಗೆಷ್ಟು ಖುಷಿಯಾಯ್ತು ಎಂಬುದು ನನಗಷ್ಟೇ ಗೊತ್ತು. ಚಿಕಿತ್ಸೆ ಮುಗಿದ ಮೇಲೂ ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳಬೇಕಿತ್ತು. ಎರಡು ತಿಂಗಳು, ನಂತರ ಮೂರು ತಿಂಗಳು, ನಾಲ್ಕು ತಿಂಗಳಿಗೊಮ್ಮೆ ಚೆಕ್‌ಅಪ್‌ಗೆ ಹೋಗಿ ಬಂದೆ. ಹಾರ್ಮೊನ್‌ ಟ್ಯಾಬ್ಲೆಟ್‌ ಜಾರಿಯಲ್ಲಿತ್ತು.

ದಿನದಿಂದ ದಿನಕ್ಕೆ ನನ್ನ ಆರೋಗ್ಯ ಸುಧಾರಿಸುತ್ತ ಸಾಗಿತು. ಗಾಯತ್ರಿ ಮುದ್ರೆ, ಓಂಕಾರ, ಪ್ರಾಣಾಯಾಮದ ಜೊತೆ ವಾಕ್‌ ಮುಂದುವರಿಸಿದ್ದೆ. ಜೊತೆಗೆ ಯೋಗವನ್ನು ಶಾಸ್ತ್ರೀಯವಾಗಿ ಕಲಿಯುವ ಹಂಬಲ ಉಂಟಾಯಿತು. 2018ರ ಜೂನ್‌ ತಿಂಗಳಲ್ಲಿ ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ 11 ದಿನಗಳ ಉಚಿತ ಯೋಗ ಶಿಬಿರಕ್ಕೆ ಸೇರಿಕೊಂಡೆ. ಅದು ಮುಗಿದ ಮೇಲೂ ವಿನಾಯಕ ತಲಗೇರಿಯವರು ಯೋಗ ತರಗತಿ ನಡೆಸುತ್ತಿದ್ದ ಧನ್ಯೋಸ್ಮಿ ಯೋಗ ಕೇಂದ್ರಕ್ಕೆ ಸೇರಿಕೊಂಡೆ. ಬರಬರುತ್ತ ಕಚೇರಿ ಕೆಲಸ ರಾತ್ರಿ 9.30ರವರೆಗೂ ಸಾಗಿತು. ಬೆಳಗಿನ ವಾಯುವಿಹಾರದ ಜೊತೆ ಈಗ ಯೋಗ ತರಗತಿಗೆ ಸಮಯವನ್ನು ಹೊಂದಿಸಿಕೊಳ್ಳಬೇಕಾಯಿತು. 5.30ಕ್ಕೆ ಎದ್ದು 6ರಿಂದ–6.30ರವರೆಗೆ ನಡಿಗೆ ಮುಗಿಸಿ, 6.45ರಿಂದ 8 ಗಂಟೆವರೆಗೆ ಯೋಗ ತರಗತಿಯಲ್ಲಿರುತ್ತಿದ್ದೆ. ಅಕ್ಟೋಬರ್‌ವರೆಗೂ ಯೋಗ ತರಗತಿಗೆ ನಿಯಮಿತವಾಗಿ ಹೋದೆ. ನಂತರ ಒಂದಷ್ಟು ಯೋಗ ಕರಗತವಾದ ಮೇಲೆ ಮನೆಯಲ್ಲೇ ಅದನ್ನು ಮುಂದುವರಿಸಿದೆ. ನನ್ನದೇ ಒಂದು ಫ್ಯೂಷನ್‌ ಯೋಗ ಮಾಡಿಕೊಂಡೆ. ಬೆಳಗಿನ 2 ತಾಸು ಅದಕ್ಕೆಂದೇ ಮೀಸಲಿಟ್ಟೆ. ಒಂದು ತಾಸು ನಡಿಗೆ ಮುಗಿಸಿದ ಮೇಲೆ ಒಂದಷ್ಟು ಲಘು ವ್ಯಾಯಾಮ, ಕರಾಟೆಯ ಕೆಲವು ವ್ಯಾಯಾಮಗಳು, ಪ್ರಾಣಾಯಾಮ, ಯೋಗಾಸನಗಳು, ಗಾಯತ್ರಿ ಮುದ್ರೆ ಕೊನೆಯದಾಗಿ ಧ್ಯಾನ ಇವಿಷ್ಟನ್ನು ಒಳಗೊಂಡ ಒಂದು ಯೋಗ ಪ್ಯಾಕೇಜ್‌ ಅನ್ನು ನಿತ್ಯವೂ ಮಾಡಲು ಆರಂಭಿಸಿದೆ. ಇದರಿಂದ ನನ್ನೊಳಗೆ ಸಾಕಷ್ಟು ಬದಲಾವಣೆ ಆಗುತ್ತ ಹೋಯಿತು. ಮನಸ್ಸು, ದೇಹ ಮೊದಲಿಗಿಂತಲೂ ಸ್ವಸ್ಥ, ಸದೃಢವಾದಂತೆ ಭಾಸವಾಯಿತು. ಆತ್ಮಸ್ಥೈಯ ವೃದ್ಧಿಯಾಯಿತು.

 2019ರ ಜನವರಿಯಲ್ಲಿ ಮತ್ತೆ ಪೆಟ್‌ ಸ್ಕ್ಯಾನ್‌ ಮಾಡಿಸಿಕೊಂಡೆ. ಆಗ ಕೂಡ ನಾರ್ಮಲ್‌ ಎಂಬ ರಿಪೋರ್ಟ್ ಬಂದಿತು. ಮೊದಲಿಗಿಂತಲೂ ಹೆಚ್ಚು ಫಿಟ್‌ ಆ್ಯಂಡ್‌ ಫ್ರೆಶ್‌ ನಾನು ಅಂತ ಅನುಭವಕ್ಕೆ ಬಂದಿತ್ತು. ಕ್ಯಾನ್ಸರ್‌ ಎಂಬ ಬೇಡದ ಅತಿಥಿ ನನ್ನ ಬದುಕಿನಲ್ಲಿ ಬಂದುಹೋದ ಮೇಲೆ ನನ್ನ ಜೀವನ ಕ್ರಮವೇ ಬದಲಾಗಿತ್ತು. ಕೂದಲನ್ನು ಉದ್ದಕ್ಕೆ ಬೆಳೆಸಲಿಲ್ಲ. ಬಾಯ್‌ಕಟ್‌ಗೆ ಸೀಮಿತಗೊಳಿಸಿದೆ.

ನನ್ನ ಕ್ಯಾನ್ಸರ್‌ ಜರ್ನಿಯಲ್ಲಿ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳು ನಡೆದವು. ಕಿಮೊಥೆರಪಿ ಜಾರಿಯಲ್ಲಿದ್ದ ಸಂದರ್ಭವದು. ಭರತನಾಟ್ಯ ಕಲಾವಿದೆಯೂ ಆದ ನನ್ನ ಸ್ನೇಹಿತೆ ಸಹನಾ ಭಟ್ಟರು ಫೋನ್‌ ಮಾಡಿದ್ದರು, ‘ಕೃಷ್ಣಿ ಒಂದು ಸುದ್ದಿ ಇತ್ತು. ವಾಟ್ಸ್‌ಆ್ಯಪ್‌ಗೆ ಹಾಕಿದ್ರೆ ಸಾಕಾ; ಮೇಲ್‌ ಮಾಡ್ಲಾ’ ಎಂದು ಕೇಳಿದರು. ‘ನೀವು ಆಫೀಸ್‌ ಮೇಲ್‌ ಐಡಿಗೆ ಕಳಿಸಿ. ನಾನು ರಜೆ ಮೇಲಿದ್ದೇನೆ’ ಅಂದೆ. ‘ಇಲ್ಲಾ, ಎರಡು ದಿನ ಬಿಟ್ಟು ಬಂದ್ರೂ ತೊಂದರೆ ಇಲ್ಲ’ ಅಂದ್ರು. ‘ಇಲ್ಲ; ನಾನು ಲಾಂಗ್‌ ಲೀವ್‌ನಲ್ಲಿದ್ದೇನೆ’ ಅಂದೆ. ಅಷ್ಟಕ್ಕೇ, ‘ಓ ಹೌದಾ; ಕಂಗ್ರಾಟ್ಸ್‌, ಸಿಹಿ ಸುದ್ದಿ ಕೊಟ್ಟಿದ್ದಕ್ಕೆ’ ಅನ್ನಬೇಕೆ? ‘ಹೂಂ, ಸಿಹಿನೋ ಕಹಿನೋ’ ಅಂದೆ. ಅದ್ಕೆ ಯಾಕೆ ಅಂದಾಗ, ಹೇಳಿದೆ. ‘ಇಲ್ಲ ನಂಗೆ ಕ್ಯಾನ್ಸರ್‌ ರಿಪೋರ್ಟ್‌ ಪಾಸಿಟಿವ್‌ ಬಂದಿದೆ. ಕಿಮೊಥೆರಫಿ ನಡಿತಿದೆ’ ಅಂದೆ. ಅಷ್ಟಕ್ಕೇ ಆ ಕಡೆಯಿಂದ ನಿಶಬ್ದ. ಅವರ ಬಾಯಿಯಿಂದ ಮಾತುಗಳೇ ಹೊರಡದಾಯಿತು. ಸ್ವಲ್ಪ ಹೊತ್ತು ಬಿಟ್ಟು, ‘ಸಾರಿ ಕೃಷ್ಣಿ, ನಾನೀನ ಬೆಂಗಳೂರಿನಲ್ಲಿದ್ದೇನೆ. ಬಂದವಳೇ ಮನೆಗೆ ಬರ್ತೆ’ ಅಂತ ಫೋನ್‌ ಇಟ್ರು. ಬೆಂಗಳೂರಿನಿಂದ ಬಂದ ದಿನವೇ ವನಿತಾ ಮಹಾಲೆ ಜೊತೆಗೂಡಿ ಮನೆಗೆ ಬಂದ್ರು. ಅವರಿಗೆ ನನ್ನ ಜೊತೆ ಮುಖತಃ ಮಾತಾಡಿದ ಮೇಲೆಯೇ ಸಮಾಧಾನ ಆಗಿದ್ದು. ಸುದ್ದಿ ತಿಳಿದ ದಿನ ಅವರು ನಿದ್ದೆ ಮಾಡಿಲ್ಲ ಅಂತ ಅವರ ಪತಿ ಪ್ರದೀಪ ಭಟ್‌ ಹೇಳಿದರು. ನಂತರ ನಾನೇ ಅವರನ್ನು ಸಮಾಧಾನ ಮಾಡಿದೆ.

ಇದು ಕಿಮೊ ನಡೆಯುತ್ತಿರುವಾಗಿನ ಘಟನೆಯಾದರೆ, ಮೊತ್ತೊಂದು ಘಟನೆ ಟ್ರೀಟ್‌ಮೆಂಟ್‌ ಎಲ್ಲ ಮುಗಿದ ನಂತರ ನಡೆದಿದ್ದು. ಅಂದ್ರೆ ತಲೆಯಲ್ಲಿ ಕೂದಲು ಬಂದು ಬಾಯ್‌ಕಟ್‌ ಆಗಿತ್ತು. ಶಿರಸಿಯಲ್ಲಿರುವ ಪ್ರಗತಿಪರ ಕೃಷಿಕ ರಾಮು ಕಿಣಿ ಅವರು ಯಾವುದೋ ಸುದ್ದಿಯ ಕಟಿಂಗ್ಸ್‌ ಅನ್ನು ನನ್ನ ವಾಟ್ಸ್‌ಆ್ಯಪ್‌ಗೆ ಕಳಿಸಿದ್ದರು. ಎರಡು ದಿನ ಬಿಟ್ಟು ಫೋನ್‌ ಮಾಡಿದ್ರು. ಅವರು ನನಗಿಂತ ಎಷ್ಟೋ ಹಿರಿಯರಾದರೂ ನನ್ನನ್ನು ಪ್ರೀತಿಯಿಂದ ಕೃಷ್ಣಕ್ಕ ಅಂತಾನೇ ಕರೆಯೋದು. ಆ ದಿನ ಕೂಡ ಫೋನ್‌ ರಿಸೀವ್‌ ಮಾಡಿ, ಹಲೋ ಅಂದ ಕೂಡಲೇ, ‘ಹೂಂ. ಕೃಷ್ಣಕ್ಕ ಎಷ್ಟು ಬ್ಯುಸಿ ಇರ್ತಾರೆ ಅನ್ನೋದು ವಾಟ್ಸ್‌ಆ್ಯಪ್‌ ಡಿಪಿ ನೋಡಿದಾಗಲೇ ಗೊತ್ತಾಯ್ತು’ ಅಂದ್ರು. ‘ಅದ್ಯಾಕೆ ಹಂಗ್‌ ಹೇಳ್ತೀರಿ?’ ಅಂದೆ. ‘ಏನಿಲ್ಲ, ತಲೆ ಬಾಚಿಕೊಳ್ಳದಷ್ಟು ಬ್ಯುಸಿ ಇರಬೇಕು. ಅದಕ್ಕೆ ಬಾಯ್‌ಕಟ್‌ ಮಾಡಿಕೊಂಡಿದ್ರಲ್ಲ; ಅದಕ್ಕೆ ಹೇಳಿದೆ’ ಅಂದ್ರು. ‘ಬ್ಯುಸಿ ಲೈಫ್‌ ಇರ್ಬಹುದು. ಆದರೆ ಅದಕ್ಕಂತ ಕೂದಲಿಗೆ ಕತ್ತರಿ ಹಾಕಿಲ್ಲ. ತಲೆ ಪೂರ್ತಿ ಬಾಲ್ಡಿ ಆದ ಮೇಲೆ ಈಗ ಮತ್ತೆ ಕೂದಲು ಬಂದಿದೆಯಷ್ಟೆ’ ಅಂದೆ. ಅದಕ್ಕೆ ಗೊಂದಲಕ್ಕೊಳಗಾದ ಅವರು, ಏನಾಯ್ತು ಅಂದರು. ಏನಿಲ್ಲ; ಕ್ಯಾನ್ಸರ್‌ ಆಗಿತ್ತು. ಈಗ ಟ್ರೀಟ್‌ಮೆಂಟ್‌ ಎಲ್ಲ ಮುಗಿದಿದೆ ಅಂದೆ. ಅಷ್ಟಕ್ಕೆ ಮಾತೇ ಬಂದಾಯಿತು. ಅವರು ಮಾತೇ ಆಡಲಿಲ್ಲ. ಹಾಗೇ ಕಾಲ್‌ ಕಟ್‌ ಮಾಡಿದರು. ಮಾರನೇ ದಿನ ಮತ್ತೆ ಫೋನ್‌ ಮಾಡಿ, ‘ಸ್ಸಾರಿ ಕೃಷ್ಣಕ್ಕ, ನಾನು ಹಾಗೇ ಹೇಳಬಾರ್ದಿತ್ತು. ಮನಸ್ಸಿಗೆ ತುಂಬಾ ಬೇಜಾರಾಯಿತು. ನಿನ್ನೆ ನನಗೆ ಮಾತು ಮುಂದುವರಿಸಲು ಆಗ್ಲಿಲ್ಲ. ಸ್ಸಾರಿ, ಕಾಲ್‌ ಕಟ್ ಮಾಡಿದೆ’ ಎಂದು ಮಾತು ಮುಂದುವರಿಸಿದರು. ಆರೋಗ್ಯ ವಿಚಾರಿಸಿದರು. ಈಗೆಲ್ಲ ಏನು ತೊಂದರೆಯಿಲ್ಲ. ಆರಾಮಾಗಿದ್ದೇನೆ ಅಂದ ಮೇಲೆ ಅವರಿಗೆ ಸಮಾಧಾನವಾಗಿದ್ದು. ಇಂಥ ಒಂದಷ್ಟು ಸ್ವಾರಸ್ಯಕರ ಸಂಗತಿಗಳು ನನ್ನ ಸ್ನೇಹಿತರು, ಆತ್ಮೀಯರ ನಡುವೆ ನಡೆದಿದೆ.

ದಿನದಿಂದ ದಿನಕ್ಕೆ ನನ್ನಲ್ಲಿ ಉಲ್ಲಾಸ, ಉತ್ಸಾಹ ಹೆಚ್ಚುತ್ತಲೇ ಸಾಗಿತು. ಫೇಸ್‌ಬುಕ್‌ನಲ್ಲಿ ಒಂದೊಂದು ಪ್ರೊಫೈಲ್‌ ಪಿಕ್ಚರ್‌ ಹಾಕಿದಾಗ ಎಲ್ಲರೂ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ಸಾಗಿ ಬಿಟ್ಟರು. ಅವೆಲ್ಲ ನನ್ನ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದಕ್ಕೆ ಸಂದ ಮೆಚ್ಚುಗೆಯಾಗಿದ್ದವು. 

(ಮುಂದಿನ ವಾರ: ಅತಿಯಾಸೆ ಗತಿಗೇಡು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು