ಭಾನುವಾರ, ಜೂನ್ 20, 2021
20 °C

ಪ್ರಶ್ನೋತ್ತರ: ಕೋವಿಡ್-19 ಬಗ್ಗೆ ಇರುವ ತಪ್ಪು ಕಲ್ಪನೆಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಜಾಗತಿಕವಾಗಿ ಹರಡುತ್ತಿದ್ದು ಇದರ ಬಗ್ಗೆ ದಿನ ಪತ್ರಿಕೆಗಳು ಸೇರಿದಂತೆ ಸಾಮಾಜಿಕ
ಜಾಲತಾಣಗಳು ಹಲವಾರು ವಿಷಯಗಳು ಭಿತ್ತರವಾಗುತ್ತಲಿವೆ. ಆದಾಗ್ಯೂ ಸಾರ್ವಜನಿಕರು ಕೋವಿಡ್‌–19 ಸೋಂಕಿನ
ಕುರಿತಂತೆ ನಿಖರವಾದ ಮಾಹಿತಿ ತಿಳಿಯಲು, ತಪ್ಪು ಕಲ್ಪನೆಗಳನ್ನು ದೂರಮಾಡಲು ಅಧ್ಯಯನ ಅಥವಾ ಸಂಶೋಧನೆಯ ಮಾಹಿತಿಯನ್ನು ಅವಲಂಭಿಸುವುದು ಅಗತ್ಯ. ಆಗ ಕಲ್ಪಿತ ಮಾಹಿತಿಯಿಂದ ದೂರ ಇರಲು ಸಾಧ್ಯ.  

ಜನರಲ್ಲಿ ಕೋವಿಡ್-19 ಬಗ್ಗೆ ಇರುವ ತಪ್ಪು ಕಲ್ಪನೆಗಳ ಕುರಿತಂತೆ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಎಂಬ ಸಂಸ್ಥೆ ಅಧ್ಯಯನ ನಡೆಸಿದೆ. ಆ ತಪ್ಪು ಕಲ್ಪನೆಗಳ ಪ್ರಶ್ನೋತ್ತರ ರೂಪದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

* ಅಂಗಡಿಗಳಿಂದ ಖರೀದಿಸಿದ ದಿನಸಿ ಪದಾರ್ಥಗಳನ್ನು ಒರಸಿ ಸೋಂಕುರಹಿತ ಮಾಡುವುದು ಅವಶ್ಯಕವೇ ?

ಪ್ರಸ್ತುತ ಅಧ್ಯಯನಗಳ ಪ್ರಕಾರ ಆಹಾರ, ಪ್ಯಾಕೇಜಿಂಗ್, ದಿನಸಿ ವಸ್ತುಗಳಿಂದ  ಕೋವಿಡ್-19 ಹರಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಪ್ಯಾಕೇಜಿಂಗ್ ಇಲ್ಲದ ಆಹಾರ ಪದಾರ್ಥಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ
ಸ್ವಚ್ಛಮಾಡುವುದರಿಂದ ಆಹಾರದ ಮೂಲಕ ಸೋಂಕು ನಿವಾರಕ ರಾಸಾಯನಿಕಗಳು ಶರೀರ ಸೇರುವ ಸಂಭವ ಹೆಚ್ಚು.

ಈ ಹಿನ್ನೆಲೆಯಲ್ಲಿ ಅಡಿಗೆ ಮಾಡುವ ಸ್ಥಳ ಅಥವಾ ಅಡುಗೆ ಕೌಂಟರ್‌ಗಳನ್ನು ಪದೇ ಪದೇ ಸ್ವಚ್ಛಗೊಳಿಸುವುದು ಉತ್ತಮ
ಉಪಾಯ.

* ಸಾರ್ವಜನಿಕ ಕುಡಿಯುವ ನೀರು ಸರಬರಾಜಿನಿಂದ ಕೋವಿಡ್-19 ಹರಡಬಹುದೇ ?

ಸಾರ್ವಜನಿಕ  ನೀರು ಸರಬರಾಜಿನಿಂದ ಖಂಡಿತವಾಗಿಯೂ ಕೋವಿಡ್-19 ಹರಡಲು ಸಾಧ್ಯವಿಲ್ಲ. ನೀರು ಸರಬರಾಜು
ಮಾಡುವ ಮೊದಲು ನೀರನ್ನು ಶುದ್ಧಿಕರಿಸುವ ಪ್ರಕ್ರಿಯೆ ನಡೆಯುವುದರಿಂದ ಕೊರೊನಾ ವೈರಸ್‌ ಹರಡುವುದಿಲ್ಲ.

* ಕೋವಿಡ್-19 ರೋಗ ಲಕ್ಷಣಗಳಿಲ್ಲದಿದ್ದರೂ ಮಾಸ್ಕ್ ಧರಿಸಬೇಕೆ ?

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅತ್ಯವಶ್ಯಕ. ಬಟ್ಟೆಯ ಮಾಸ್ಕ್ ಧರಿಸುವುದರಿಂದ ತಮ್ಮಲ್ಲಿನ ಸೋಂಕನ್ನು ಬೇರೆಯವರಿಗೆ ಹರಡುವುದನ್ನು ತಡೆಯಬಹುದು.  ಹಾಗೂ ಸಮುದಾಯದ ಆರೋಗ್ಯಕ್ಕಾಗಿ ಮಾಸ್ಕ್‌ ಧರಿಸುವುದು ಉತ್ತಮ 

* ಕೋವಿಡ್-19 ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಸೋಂಕನ್ನು ಅನ್ಯರಿಗೆ ಹರಡಬಹುದೇ?

ಸೋಂಕಿತ ವ್ಯಕ್ತಿಗೆ ರೋಗ ಲಕ್ಷಣಗಳು ಕಾಣಿಸದಿದ್ದರೂ ಅವರು  ಅನ್ಯರಿಗೆ ಸೋಂಕನ್ನು ಹರಡಬಲ್ಲವರಾಗಿರುತ್ತಾರೆ.
ಮಾತನಾಡಿದಾಗ, ಕೆಮ್ಮಿದಾಗ, ಉಗುಳಿದಾಗ ಸೋಂಕು ಹರಡಬಹುದು.

* ಸಾಕು ಪ್ರಾಣಿಗಳಿಂದ ಕೋವಿಡ್-19 ಸೋಂಕು ಹರಡಬಹುದೇ ?

ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಸೋಂಕು ಹರಡಬಹುದು. ಆದರೆ ಸಾಕು ಪ್ರಾಣಿಯಿಂದ ಮನುಷ್ಯರಿಗೆ ಕೋವಿಡ್‌ ಸೋಂಕು ಹರಡಿರುವ ಪುರಾವೆಗಳಿಲ್ಲ. ಆದರೂ ಸಾಕು ಪ್ರಾಣಿಗಳನ್ನು ಮುಟ್ಟಿದ ನಂತರ ಸಾಬೂನು ಹಾಗೂ
ನೀರಿನಿಂದ ಕೈಗಳನ್ನು ತೊಳೆದುಕೊಳ್ಳುವುದು ಉತ್ತಮ.

* ಕೋವಿಡ್-19 ಸೋಂಕು ಬೇಸಿಗೆಯಲ್ಲಿ ಕಡಿಮೆಯಾಗಬಹುದೇ ?

ಸಾಧಾರಣವಾಗಿ ಹೆಚ್ಚಿನ ತಾಪಮಾನದಲ್ಲಿ ವೈರಾಣು ಬದುಕಲು ಸಾಧ್ಯವಿಲ್ಲ. ಆದರೆ ಹೊರಾಂಗಣ ವಾತಾವರಣದ
ತಾಪಮಾನವು ಕೋವಿಡ್-19 ಹರಡುವಿಕೆಯನ್ನು ತಡೆಯಲಾಗುವುದಿಲ್ಲವೆಂಬುದು ಅಧ್ಯಯನಗಳು ತಿಳಿಸಿವೆ.

* ಕೋವಿಡ್-19 ವೈರಾಣುವು ವಸ್ತುಗಳ ಮೇಲ್ಮೈ ಮೇಲೆ ಅನೇಕ ದಿನಗಳು ಜೀವಂತವಾಗಿರುತ್ತವೆ. 

ವಿಶ್ವ ಆರೋಗ್ಯ ಸಂಸ್ಥೆಯ  ಪ್ರಕಾರ ವೈರಾಣುವು ವಸ್ತುಗಳ ಮೇಲ್ಮೈ ಮೇಲೆ ಕೆಲ ಗಂಟೆಗಳಿಂದ ಕೆಲ ದಿನಗಳ ತನಕ
ಇರಬಹುದಾಗಿದೆ. ವಸ್ತುಗಳ ಮೇಲೆ ವೈರಾಣುವು ಕಣದ ರೂಪದಲ್ಲಿದ್ದು ವೃದ್ಧಿಸಲು ಸಾಧ್ಯವಿಲ್ಲ. ಒಂದು ಜೀವಿಯ
ಒಳಹೊಕ್ಕಾಗ ಮಾತ್ರ ವೈರಾಣು ವೃದ್ಧಿಯಾಗಬಹುದಾಗಿದೆ. ಆದ್ದರಿಂದ ವಸ್ತುಗಳ ಮೇಲ್ಮೈಯನ್ನು ಸೋಂಕುರಹಿತ
ಮಾಡುವುದು ಅತ್ಯವಶ್ಯಕ.

* ಜಠರದ ಸಮಸ್ಯೆಯು ಕೋವಿಡ್-19 ಸೋಂಕಿನಲ್ಲಿ ಕಾಣಿಸಬಹುದೇ ?

ಕೋವಿಡ್ ಸೋಂಕಿತ ವ್ಯಕ್ತಿಯು ಸಾಮಾನ್ಯವಾಗಿ ಕೆಮ್ಮು, ಶೀತ, ಗಂಟಲು ನೋವು, ತಲೆನೋವು, ಜ್ವರ  ಮುಂತಾದ
ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ವಾಂತಿ, ಬೇಧಿ ಮುಂತಾದ ಜಠರ ಸಮಸ್ಯೆಯಿಂದ ಬಳಲುವುದು ಅತಿ ವಿರಳ.

* ಕೆಲಸಕ್ಕೆ ಹೊರಗಡೆ ಹೋಗುವ ಸಮಯದಲ್ಲಿ ಧರಿಸುವ ಬಟ್ಟೆಯಿಂದ ಸೋಂಕು ಹರಡಬಹುದೇ ?

ಇಲ್ಲಿಯ ತನಕ ಕೆಲಸಕ್ಕೆ ಹೋಗುವಾಗ ಧರಿಸಿದ ಬಟ್ಟೆಗಳಿಂದ ಕೋವಿಡ್ ಸೋಂಕು ಹರಡಿರುವ ಪುರಾವೆಗಳಿಲ್ಲ.
ಆದರೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಉತ್ತಮ.

* ಮನೆ ಮದ್ದುಗಳು ಕೋವಿಡ್-19 ಸೋಂಕನ್ನು ಗುಣಪಡಿಸಬಹುದೇ ? 

ಮನೆ ಮದ್ದುಗಳು ಆಂತರಿಕ ಶಕ್ತಿಯನ್ನು ವೃದ್ಧಿಸಿ ಕಾಯಿಲೆಯಿಂದ ಬೇಗ ಗುಣಮುಖವಾಗಲು ಸಹಾಯ ಮಾಡಬಹುದೇ ಹೊರತು ಕಾಯಿಲೆ ಬರದಂತೆ ತಡೆಯಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ.  ಅಂತರ, ವೈಯಕ್ತಿಕ ಸ್ವಚ್ಛತೆ  
ಔಷಧಿಗಳ ಸೇವನೆ ಅತಿ ಮುಖ್ಯ.

* ಮಧ್ಯಪಾನ ಮಾಡುವುದರಿಂದ ಕೋವಿಡ್-19 ಸೋಂಕನ್ನು ತಡೆಯಬಹುದೇ ?

ಆಲ್ಕೋಹಾಲ್‍ ಅನ್ನು ಕೈ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದರೆ ಮಧ್ಯಪಾನ ಸೇವನೆಯಿಂದ ದೇಹದ ಆಂತರಿಕ
ಶಕ್ತಿ ಕುಂದುವುದರಿಂದ ಸೋಂಕನ್ನು ಹೊರಹಾಕಲು ಕಷ್ಟವಾಗಬಹುದು.

* ಈಜುಕೊಳಗಳಲ್ಲಿ ಈಜುವುದರಿಂದ ಕೋವಿಡ್-19 ಸೋಂಕು ಹರಡಬಹುದೇ ?

ಈಜುಕೊಳಗಳಲ್ಲಿ ಸೋಂಕು ಹರಡಿದ ಪುರಾವೆಗಳಿಲ್ಲ. ಈಜುಕೊಳಗಳನ್ನು ಕ್ಲೋರಿನ್ ಅಥವಾ ಬ್ರೋಮಿನ್‍ನಿಂದ ತೊಳೆಯುವುದರಿಂದ ವೈರಾಣು ನಾಶವಾಗುತ್ತದೆ.

ಕೊರೊನಾ ಗುಣಮುಖವಾಗುವ ಸೋಂಕಾಗಿದೆ. ಜನರು ತಪ್ಪು ಕಲ್ಪನೆಗಳಿಂದ ಹೊರಬರಬಂದು,  ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆದುಕೊಳ್ಳುವುದು, ವೈಯಕ್ತಿಕ ಸ್ವಚ್ಛತೆ, ಮಾಸ್ಕ್‌ ಧರಿಸುವುದು ಸೇರಿದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕೊರೊನಾ ಸೋಂಕನ್ನು ತಡೆಯಬಹುದಾಗಿದೆ.   

ಬರೆದವರು: ಡಾ. ಸ್ಮಿತಾ ಜೆ.ಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು