ಗುರುವಾರ , ಫೆಬ್ರವರಿ 25, 2021
19 °C

ಕೊರೊನಾ ಒಂದಿಷ್ಟು ತಿಳಿಯೋಣ: ದೇಹದ ಉಷ್ಣಾಂಶ ಅಳೆಯಲು ಸ್ಮಾರ್ಟ್‌ ‘ಉಂಗುರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲ, ಆರೋಗ್ಯವಾಗಿದ್ದೇವೆ ಎಂದು ನಿಮ್ಮ ಮನಸ್ಸಿಗೆ ಅನಿಸಬಹುದು. ಆದರೆ ನೀವು ಕೈಗೆ ಧರಿಸಿರುವ ದೇಹದ ಉಷ್ಣಾಂಶ ಅಳೆಯುವ ಸಾಧನದ ಮೇಲೆ ಒಮ್ಮೆ ಕಣ್ಣು ಹಾಯಿಸಿ, ಅದು ತಾಪಮಾನವನ್ನು ಸರಾಸರಿಗಿಂತ ಹೆಚ್ಚೇ ತೋರಿಸಬಹುದು. ಅಂದರೆ ಇದು ನಿಮಗೆ ಜ್ವರ ಬರುತ್ತಿದೆ ಎಂಬುದರ ಸಂಕೇತ; ಕೋವಿಡ್‌–19 ಪರೀಕ್ಷೆ ಕೂಡ ಮಾಡಿಸಿ ಎಂಬ ಸಂದೇಶವನ್ನು ನೀಡಬಹುದು.

ಇತ್ತೀಚೆಗೆ ಅಮೆರಿಕದ ಸೈಂಟಿಫಿಕ್‌ ರಿಪೋರ್ಟ್ಸ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿಯೊಂದು ಜ್ವರದ ಮೇಲೆ ನಿಗಾ ಅಳೆಯಲು ಇಂತಹ ಸ್ಮಾರ್ಟ್‌ ಸಾಧನಗಳನ್ನು ಬಳಸುವುದರ ಮೇಲೆ ಬೆಳಕು ಚೆಲ್ಲಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆ್ಯಪ್‌ (ಭಾರತದಲ್ಲಿ ಆರೋಗ್ಯ ಸೇತು ಆ್ಯಪ್‌ ಉಲ್ಲೇಖಿಸಬಹುದು) ಗಳನ್ನು ಬಳಸಿದಂತೆ ಇಂತಹ ಸಾಧನಗಳ ಬಳಕೆ ಈಗಿನ ಅನಿವಾರ್ಯ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬಯೊಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಬೆಂಜಮಿನ್‌ ಸ್ಮಾರ್‌ ವರದಿಯಲ್ಲಿ ಹೇಳಿದ್ದಾರೆ.

ಕಂಪನಿಯೊಂದು ಸಿದ್ಧಪಡಿಸಿದ ದೇಹದ ತಾಪಮಾನ ದಾಖಲಿಸುವ ಉಂಗುರದಂತಹ ಸಾಧನವನ್ನು ಬೆರಳಿಗೆ ಧರಿಸಿದವರ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದಲ್ಲಿ ಭಾಗವಹಿಸಿದ್ದವರಲ್ಲಿ ಶೇ 76ರಷ್ಟು ಮಂದಿ ತಮ್ಮ ಅನಾರೋಗ್ಯದ ಲಕ್ಷಣ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆ ಎಂದು ಹೇಳಿದ್ದರು. ಈ ಸಾಧನ ಧರಿಸಿದ ಕೆಲವರಲ್ಲಿ ತಾಪಮಾನ ಸರಾಸರಿಗಿಂತ ಹೆಚ್ಚಾದ ನಂತರ ಪರೀಕ್ಷೆ ಮಾಡಿಸಿಕೊಂಡಾಗ ಕೋವಿಡ್‌–19 ದೃಢಪಟ್ಟಿತ್ತು. ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ಸುಸ್ತು ಮೊದಲಾದವುಗಳನ್ನು ದಾಖಲಿಸಿ ಪಟ್ಟಿ ತಯಾರಿಸುವುದು ಕೂಡ ಈ ಅಧ್ಯಯನದ ಉದ್ದೇಶವಾಗಿತ್ತು.

ಈ ಉಂಗುರದಂತಹ ಸಾಧನವನ್ನು ಬೆರಳಿಗೆ ಧರಿಸಿದಾಗ ಅದರಲ್ಲಿರುವ ಸೆನ್ಸರ್‌ ಬೆರಳಿನ ರಕ್ತನಾಳದಲ್ಲಿ ಹರಿಯುವ ರಕ್ತದ ತಾಪಮಾನದ ಜೊತೆಗೆ ಹೃದಯದ ಬಡಿತ, ಉಸಿರಾಟದ ವೇಗವನ್ನೂ ದಾಖಲಿಸುತ್ತದೆ. ಬೇರೆ ಬೇರೆ ಸಮಯದಲ್ಲಿ ದಾಖಲಾದ ಈ ಉಷ್ಣಾಂಶವನ್ನು ಪರಿಶೀಲಿಸಿ ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯಾವುದೇ ಲಕ್ಷಣಗಳಿಲ್ಲದೇ ಹಾಗೂ ಅನಾರೋಗ್ಯ ಅನುಭವಕ್ಕೆ ಬರದೆ ಕೋವಿಡ್‌ಗೆ ತುತ್ತಾದವರಿದ್ದಾರೆ. ಆದರೆ ದೇಹದ ತಾಪಮಾನದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಇಂಥವರು ತಾವೇ ದೇಹದ ಉಷ್ಣಾಂಶದ ಮೇಲೆ ನಿಗಾ ಇಟ್ಟುಕೊಂಡು ವೈದ್ಯರನ್ನು ಸಂಪರ್ಕಿಸಬಹುದು. ದೇಹದ ಉಷ್ಣಾಂಶವು ದಿನವಿಡೀ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಅದು ನಿಮ್ಮ ಚಟುವಟಿಕೆ ಹಾಗೂ ರಕ್ತ ಪರಿಚಲನೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ ಸತತ ನಿಗಾ ಅವಶ್ಯಕ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಫ್ಲು ಇದ್ದಾಗಲೂ ದೇಹದ ತಾಪಮಾನ ಹೆಚ್ಚಿರುತ್ತದೆ. ಆ ಸಂದರ್ಭದಲ್ಲೂ ಎಚ್ಚರಿಕೆ ವಹಿಸಲು ಇಂತಹ ಸಾಧನೆ ನೆರವಿಗೆ ಬರುತ್ತದೆ. ಈ ಸಂಶೋಧನೆ ಆರಂಭಿಕ ಹೆಜ್ಜೆಯಾಗಿದ್ದು, ಈ ನಿಟ್ಟಿನಲ್ಲಿ ಆಳವಾದ ಅಧ್ಯಯನ ನಡೆಸಬೇಕಾಗಿದೆ. ಇಂತಹ ಸಾಧನಗಳ ಆವಿಷ್ಕಾರವಾದಾಗ ತಂತ್ರಜ್ಞಾನವು ಎಲ್ಲಾ ಸ್ತರದ ಜನರನ್ನು ತಲುಪವಂತಾಗಬೇಕು ಎಂದು ಪ್ರೊ. ಬೆಂಜಮಿನ್‌ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು