ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸುಸ್ತಿಗೆ ಪರಿಹಾರಗಳು

Last Updated 7 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

‘ಈಚೆಗೆ ಕೋವಿಡ್ ಹೊಸ ತಳಿಯ ಸೋಂಕು ಉಂಟಾಯಿತು. ಪುಣ್ಯಕ್ಕೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಲಿಲ್ಲ. ಒಂದು ವಾರದೊಳಗೆ ಜ್ವರ ನಿಂತು, ಚೇತರಿಸಿಕೊಂಡೆ. ಆದರೆ, ಸುಸ್ತು ಮಾತ್ರ ಹಾಗೆಯೇ ಇದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸ್ವಲ್ಪ ನಿದ್ರೆ ಮಾಡೋಣವೆನಿಸುತ್ತದೆ. ಮೊದಲಿನ ಹಾಗೆ ಚುರುಕಿಲ್ಲ. ಇದಿನ್ನೂ ಎಷ್ಟು ಕಾಲ ಇರುತ್ತದೆ?’ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತವೆ. ಕೋವಿಡ್ ಚೇತರಿಕೆಯ ನಂತರ ಈ ಸುಸ್ತು ಏಕಾಗುತ್ತಿದೆ? ಇದಕ್ಕೆ ಪರಿಹಾರಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ ನಡೆಯುತ್ತಿದೆ.

ಕೋವಿಡ್ ಕಾಯಿಲೆಗೆ ತುತ್ತಾದವರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಚೇತರಿಕೆಯ ನಂತರವೂ ಸುಸ್ತಿನ ಲಕ್ಷಣಗಳು ಕಾಣುತ್ತವೆ. ಇಂತಹ ಬಹುತೇಕ ಮಂದಿ ಸುಮಾರು ಮೂರು ವಾರಗಳಲ್ಲಿ ಸಂಪೂರ್ಣವಾಗಿ ಗುಣ ಹೊಂದುತ್ತಾರೆ. ಆದರೆ, ತೀವ್ರ ಕಾಯಿಲೆಗೆ ತುತ್ತಾದ ಕೆಲವರಲ್ಲಿ ಈ ಸುಸ್ತು ದೀರ್ಘಕಾಲಿಕ ಸಮಸ್ಯೆಯಾಗಿ ಕಾಡುತ್ತದೆ. ಕೋವಿಡ್-19 ಮನುಷ್ಯರ ಪಾಲಿಗೆ ಹೊಚ್ಚಹೊಸ ಕಾಯಿಲೆ. ನಮ್ಮ ಶರೀರಕ್ಕೆ ಇದನ್ನು ನಿರ್ವಹಿಸುವ ಕಲೆ ಇನ್ನೂ ಸಂಪೂರ್ಣವಾಗಿ ಸಿದ್ಧಿಸಿಲ್ಲ. ಹೀಗಾಗಿ, ಇದರ ವಿರುದ್ಧ ಸೆಣಸಲು ಶರೀರ ನಡೆಸುವ ಸಿದ್ಧತೆಯ ಭಾಗವಾಗಿ ಸುಸ್ತು ಕಾಣಬಹುದು. ಜೊತೆಗೆ, ಕೋವಿಡ್-ಪೂರ್ವದಲ್ಲಿ ಇದ್ದ ವೈಯಕ್ತಿಕ ಆರೋಗ್ಯ ಪರಿಸ್ಥಿತಿ, ಶಾರೀರಿಕ ವ್ಯಾಯಾಮ, ವಿಶ್ರಾಂತಿಯ ಅನುಕೂಲತೆ, ನಿದ್ರೆ, ಕೆಲಸದ ಒತ್ತಡಗಳು, ಸಾಮಾಜಿಕ ಜವಾಬ್ದಾರಿಗಳು, ಕೌಟುಂಬಿಕ ಸಮಸ್ಯೆಗಳು, ಆತಂಕ – ಇವುಗಳೆಲ್ಲವೂ ಆರೋಗ್ಯದ ಪುನಶ್ಚೇತನದಲ್ಲಿ ಪಾತ್ರ ವಹಿಸುತ್ತವೆ.

ಕೋವಿಡ್ ನಂತರದ ಸುಸ್ತನ್ನು ನಿರ್ವಹಿಸುವುದು ಹೇಗೆ? ಈ ಸುಸ್ತು ವಾಸ್ತವ ಎಂಬ ಸತ್ಯವನ್ನು ಮನಗಾಣಬೇಕು. ಅನೇಕ ವೈರಸ್ ಸೋಂಕುಗಳು ಇಂತಹ ಸುಸ್ತನ್ನು ಉಂಟುಮಾಡುತ್ತವೆ. ಅದೇ ರೀತಿಯಲ್ಲಿ ಪ್ರಸ್ತುತ ಕೋವಿಡ್ ಕೂಡ. ಇದರಿಂದ ಸುಧಾರಿಸಿಕೊಳ್ಳಲು ಮೈ-ಮನಸ್ಸುಗಳಿಗೆ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ, ತೀರಾ ಒತ್ತಡದ, ಶ್ರಮವನ್ನು ಬಯಸುವ ಕೆಲಸಗಳನ್ನು ಮುಂದೂಡಬೇಕು. ಸಾಕಷ್ಟು ನಿದ್ರೆ, ವಿಶ್ರಾಂತಿಗಳ ಮೂಲಕ ಚೇತರಿಕೆಗೆ ಅವಕಾಶ ನೀಡಬೇಕು.

ಸುಸ್ತಿನ ವೇಳೆ ತೀವ್ರತರವಾದ ವ್ಯಾಯಾಮ ಸಲ್ಲದು. ಸರಳವಾದ ಯೋಗ, ಪ್ರಾಣಾಯಾಮ, ಒಳ್ಳೆಯ ಕೃತಿಗಳ ಓದು, ಧ್ಯಾನಗಳು ದೇಹದ ಚೇತರಿಕೆಯ ಅಗತ್ಯಗಳಿಗೆ ಪೂರಕವಾಗುತ್ತವೆ. ದೈನಂದಿನ ಸ್ನಾನದಿಂದ ಮಾಂಸಖಂಡಗಳ ಸೆಡವು ಕಡಿಮೆಯಾಗುತ್ತದೆ; ವಿಶ್ರಾಂತಿಗೆ ಬೇಕಾದ ಹಿನ್ನೆಲೆ ದೊರೆಯುತ್ತದೆ. ಶರೀರಕ್ಕೆ ಸಾಮಾನ್ಯವಾಗಿ ಅಗತ್ಯವಿರುವ ಚಟುವಟಿಕೆಗಳನ್ನು ತಪ್ಪದೇ ಮಾಡುವುದು ಸರಿಯಾದ ವಿಧಾನ. ಇದನ್ನು ಕ್ರಮೇಣ, ಹಂತಹಂತವಾಗಿ ಹೆಚ್ಚಿಸುತ್ತಾ ಹೋಗಬೇಕು. ಸಮತೋಲಿತ ಆಹಾರ, ಸಾಕಷ್ಟು ನೀರಿನ ಸೇವನೆ ಮುಖ್ಯ.

ದಿನನಿತ್ಯದಲ್ಲಿ ನಮಗೆ ತಿಳಿಯದಂತೆಯೇ ಸಾಕಷ್ಟು ಸಂಕೀರ್ಣವಾದ ಕೆಲಸಗಳನ್ನು ಮಾಡುತ್ತಿರುತ್ತೇವೆ. ಇದರ ಅರಿವು ಮೂಡುವುದು ಸುಸ್ತಿನ ಸ್ಥಿತಿಯಲ್ಲಿಯೇ. ಇಂತಹ ಸಂಕೀರ್ಣ ಕೆಲಸಗಳನ್ನು ಘಟಕಗಳಾಗಿ ವಿಂಗಡಿಸಿ, ಒಂದೊಂದಾಗಿ ಮಾಡಬೇಕು. ಉದಾಹರಣೆಗೆ, ಮೆಟ್ಟಿಲು ಹತ್ತಬೇಕಾದಾಗ ಬದಿಯಲ್ಲಿರುವ ಆಸರೆಯನ್ನು ಬಳಸಿಕೊಳ್ಳಬೇಕು; ಕೆಲವು ಮೆಟ್ಟಿಲುಗಳನ್ನು ಹತ್ತಿದ ನಂತರ ಒಂದೆಡೆ ನಿಂತು, ಹತ್ತಾರು ಬಾರಿ ದೀರ್ಘವಾಗಿ ಉಸಿರಾಡಿ, ನಂತರ ಮುಂದುವರೆಯಬೇಕು; ಒಮ್ಮೆಗೇ ಎರಡು-ಮೂರು ಮಹಡಿ ಹತ್ತಬೇಕಾದ ಸಂದರ್ಭದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಸ್ವಲ್ಪ ಕಾಲ ತಡೆಯುವುದು ಸೂಕ್ತ. ಹೀಗೆ, ಒಂದು ಸಂಕೀರ್ಣ ಕೆಲಸವನ್ನು ಅನೇಕ ಭಾಗಗಳಾಗಿ ವಿಂಗಡಿಸಿ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ.

ಸುಸ್ತು ಎನ್ನುವುದು ಕೇವಲ ಶರೀರದ ಭೌತಿಕ ಕ್ರಿಯೆಗಳ ಪರಿಣಾಮ ಮಾತ್ರವಲ್ಲ; ಅದು ಮಾನಸಿಕ ಸ್ಥಿತಿಗೂ ಸಂಬಂಧಿಸಿದ್ದು. ‘ಮುಂದೇನಾಗುವುದೋ’ ಎಂಬ ಆಲೋಚನೆಯೇ ಹಲವರಲ್ಲಿ ಸುಸ್ತಿನ ಲಕ್ಷಣಗಳನ್ನು ಕಾಣಿಸುತ್ತದೆ. ಹೀಗಾಗಿ, ಆಯಾ ದಿನದ ಚಟುವಟಿಕೆಗಳನ್ನು ಸಾಧ್ಯವಾದಷ್ಟೂ ಯೋಜಿಸಿಕೊಳ್ಳಬೇಕು. ಯಾವ ಕೆಲಸಗಳನ್ನು ಕುಟುಂಬದ ಅಥವಾ ಕಚೇರಿಯ ಇತರರು ಮಾಡಬಹುದೋ, ಅದನ್ನು ಅವರಿಗೆ ವಹಿಸಬೇಕು. ತೀರಾ ಅಗತ್ಯ ಅನಿಸಿದ ಕೆಲಸಗಳನ್ನು ಮಾತ್ರ ಪ್ರಾಮುಖ್ಯಕ್ಕೆ ಅನುಸಾರವಾಗಿ ಮಾಡಬೇಕು. ಸಾಮಾನ್ಯ ದಿನಚರಿಯ ಧಾಂ-ಧೂಂ ಮಾದರಿಯ ಕೆಲಸಗಳನ್ನು ದೂರವಿಡಬೇಕು. ಎಲ್ಲೆಲ್ಲಿ ಭೌತಿಕ ಶ್ರಮದ ಅಗತ್ಯವಿಲ್ಲವೋ, ಅಲ್ಲಿ ಅದನ್ನು ಮಾಡದಿರುವುದೇ ಲೇಸು. ಆಯಾ ದಿನ ಮಾಡಿದ ಕೆಲಸಗಳನ್ನು ಒಂದೆಡೆ ನಮೂದಿಸುವುದು ಒಳಿತು. ಇದರಿಂದ ಯಾವ ಕೆಲಸ ಶ್ರಮದಾಯಕ; ಯಾವ ಕೆಲಸವನ್ನು ಇತರರಿಗೆ ವಹಿಸಬಹುದು; ಎಷ್ಟು ಶ್ರಮ ಸಹಿಸಲು ನಮಗೆ ಸಾಮರ್ಥ್ಯವಿದೆ; ಕೆಲಸ ಮಾಡುವ ಶಕ್ತಿ ಹೇಗೆ ಹೆಚ್ಚು/ಕಡಿಮೆ ಆಗುತ್ತಿದೆ ಎಂಬ ಮಾಹಿತಿಗಳು ದೊರೆಯುತ್ತವೆ. ಇವನ್ನೆಲ್ಲಾ ಅನುಸರಿಸಿದ ನಂತವೂ ಒಂದು ವೇಳೆ ಸುಸ್ತಿನ ಪ್ರಮಾಣ ಹೆಚ್ಚುತ್ತಲೇ ಇದ್ದರೆ, ವೈದ್ಯರನ್ನು ಭೇಟಿ ಮಾಡಬೇಕು.

ಸುಸ್ತಿನ ಪರಿಹಾರದಲ್ಲಿ ಮಾನಸಿಕ ಸಿದ್ಧತೆ ಬೇಕು. ಚೇತರಿಕೆ ಎಂಬುದು ಸ್ಪರ್ಧೆಯ ವಿಷಯವಲ್ಲ. ಯಾರು ಎಷ್ಟು ಬೇಗ ಚೇತರಿಸಿಕೊಂಡರು ಎನ್ನುವುದು ತುಲನೆ ಮಾಡುವ ಸಂಗತಿಯಲ್ಲ. ಹೀಗಾಗಿ, ಇತರರ ಜೊತೆ ಹೋಲಿಕೆ ಬೇಕಿಲ್ಲ. ಸುಧಾರಿಕೊಳ್ಳುವ ಪ್ರಕ್ರಿಯೆಯಲ್ಲಿ ಹಲವಾರು ಅಂಶಗಳು ಕಾರ್ಯಗತವಾಗುತ್ತವೆ. ಇದು ಪ್ರತಿಯೊಬ್ಬರಲ್ಲೂ ವಿಭಿನ್ನ. ಹೀಗಾಗಿ, ಯಾರೊಡನೆಯೂ ಹೋಲಿಸಿಕೊಂಡು ಬೇಸರಿಸಬೇಕಿಲ್ಲ. ಕೋವಿಡ್ ನಂತರದ ಸುಸ್ತು ಬಹುಮಟ್ಟಿಗೆ ತಾನೇತಾನಾಗಿ ಸರಿಹೋಗುವ ವಿಷಯ. ಈ ಪ್ರಕ್ರಿಯೆಯಲ್ಲಿ ಶರೀರ ಮತ್ತು ಮನಸ್ಸುಗಳಿಗೆ ಕಾಲಾವಕಾಶ ಮತ್ತು ಸಾಂತ್ವನ ನೀಡುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT