ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಡಿಜಿಟಲ್ ಕಿರಿಕಿರಿಯೇ? ವ್ಯವಸ್ಥಿತ ವೇಳಾಪಟ್ಟಿಯೇ ಪರಿಹಾರ

ರೇಷ್ಮಾ Updated:

ಅಕ್ಷರ ಗಾತ್ರ : | |

ಪದೇ ಪದೇ ಬರುವ ಮೇಲ್‌ಗಳು, ಸಂದೇಶಗಳು ಕಿರಿಕಿರಿ ಉಂಟು ಮಾಡುತ್ತವೆ. ಹಾಗಂತ ನೋಡದೇ ಇದ್ದರೆ ಮುಖ್ಯವಾದದ್ದು ಮಿಸ್ ಆದರೆ ಎಂಬ ಭಯ. ಆ ಕಾರಣಕ್ಕೆ ಡಿಜಿಟಲ್ ಸಂವಹನವನ್ನು ವ್ಯವಸ್ಥಿತವಾಗಿ ನಿಭಾಯಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ.

ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗುವುದು ಅನಿವಾರ್ಯ. ಅದರಲ್ಲೂ ಈ ಕೊರೊನಾ ಕಾಲದಲ್ಲಿ ಕಚೇರಿ ಕೆಲಸ, ಅನ್‌ಲೈನ್ ಪಾಠ ಹೀಗೆ ಪ್ರತಿಯೊಂದೂ ಮನೆಯಿಂದಲೇ ಆಗುವಾಗ ಕಂಪ್ಯೂಟರ್‌, ಮೊಬೈಲ್‌‌, ವಾಟ್ಸ್‌ಆ್ಯಪ್‌ಗಳ ಮೊರೆ ಹೋಗದಿರುವುದು ಅಸಾಧ್ಯ. ಆದರೆ ಕೆಲಸ, ಪಾಠದ ಮಧ್ಯೆ ಪದೇ ಪದೇ ಬರುವ ಇಮೇಲ್‌ಗಳು, ಎಸ್ಸೆಮ್ಮೆಸ್‌ ಸಂದೇಶಗಳು, ಆ್ಯಪ್‌ ನೋಟಿಫಿಕೇಶನ್‌ಗಳು ಇವುಗಳಿಂದ ನೀವು ಬೇಸತ್ತು ಹೋಗಿರುತ್ತೀರಿ. ಕೆಲವೊಮ್ಮೆ ಇವುಗಳ ಕಿರಿಕಿರಿಯ ನಡುವೆ ಮುಖ್ಯವಾದ ಮೇಲ್‌ ಅಥವಾ ಮೆಸೇಜ್‌ಗಳನ್ನು ಡಿಲೀಟ್ ಮಾಡಿರುತ್ತೀರಿ. ಆದರೆ ಡಿಜಿಟಲ್‌ ಸಂವಹನದ ಸಮಸ್ಯೆಗಳನ್ನು ಪರಿಹರಿಸಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬರುವಂತೆ ರೂಢಿಸಿಕೊಂಡರೆ ಕಿರಿಕಿರಿಯೂ ತಪ್ಪುತ್ತದೆ, ಯಾವುದನ್ನೂ ಮಿಸ್‌ ಆಗದಂತೆ ನೋಡಿಕೊಳ್ಳಬಹುದು. 

ನೀವೂ ಡಿಜಿಟಲ್ ಕಿರಿಕಿರಿಯಿಂದ ಬಳಲುತ್ತಿದ್ದರೆ ಇಲ್ಲಿವೆ ಕೆಲವು ಸುಲಭ ಉಪಾಯಗಳು.

* ಮನೆಯಿಂದಲೇ ಕೆಲಸ ಮಾಡುವಾಗ ಡಿಜಿಟಲ್ ವೇಳಾಪಟ್ಟಿಯನ್ನು ಸಿದ್ಧ ಮಾಡಿಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕಚೇರಿಯ ಕರೆ, ಮಗುವಿನ ಆನ್‌ಲೈನ್ ಕ್ಲಾಸ್‌, ವೈಯಕ್ತಿಕ ಕರೆ ಹಾಗೂ ಮೇಲ್‌ಗಳು ಇವುಗಳ ನಡುವೆ ಒದ್ದಾಡಬೇಕಾಗುತ್ತದೆ. ಡಿಜಿಟಲ್ ವೇಳಾಪಟ್ಟಿಯಲ್ಲಿ ಪ್ರತಿ ಕೆಲಸವನ್ನು ನಿರ್ದಿಷ್ಟ ಸಮಯಕ್ಕೆ ನಿಭಾಯಿಸಲು ಸಾಧ್ಯವಾಗುತ್ತದೆ. 

* ಕೆಲಸದ ಅವಧಿಯಲ್ಲಿ ಪದೇ ಪದೇ ಬರುವ ನೋಟಿಫಿಕೇಷನ್‌ಗಳಿಂದಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ನೋಟಿಫಿಕೇಶನ್ ಆಫ್ ಮಾಡಿ ಇಡಿ ಅಥವಾ ಕೆಲಸ ಮುಗಿಯುವವರೆಗೂ ನಿಮ್ಮ ಸಾಧನವನ್ನು ಸೈಲೆಂಟ್ ಮೋಡ್‌ನಲ್ಲಿರಿಸಿ. 

* ಹಲವರಿಗೆ ಇಮೇಲ್ ನಿಭಾಯಿಸುವುದು ಒಂದು ದೊಡ್ಡ ಕೆಲಸ. ಸಿಕ್ಕ ಸಿಕ್ಕ ಇಮೇಲ್‌ಗಳ ಮಧ್ಯೆ ಅವಶ್ಯವಿರುವ ತೀರಾ ವೈಯಕ್ತಿಕ ಇಮೇಲ್‌ಗಳು ಮಿಸ್ ಆಗುವುದು ಸಹಜ. ಆ ಕಾರಣಕ್ಕೆ ಬೇಡದ ಮೇಲ್‌ಗಳನ್ನು ಅನ್‌ಸಬ್‌ಸ್ಕ್ರೈಬ್‌ ಮಾಡುವುದು ಉತ್ತಮ. ಕೇವಲ ಒಂದೇ ಒಂದು ಟಿಕ್‌ನಿಂದ ಅನ್‌ಸಬ್‌ಸ್ಕ್ರೈಬ್‌ ಮಾಡಬಹುದು.

*ಇನ್‌ಬಾಕ್ಸ್‌ನಲ್ಲಿ ಬರುವ ಪ್ರತಿ ಮೇಲ್‌ಗಳನ್ನು ಓದುತ್ತಾ ಕೂರುವ ಬದಲು ಲೇಬಲ್‌ ಮಾಡಿಕೊಂಡು ಆಯಾಯ ಲೇಬಲ್‌ ಫೋ‌ಲ್ಡರ್‌ನಲ್ಲಿ ಹಾಕಿಟ್ಟುಕೊಂಡು ಬಿಡುವಿನ ಸಮಯದಲ್ಲಿ ಓದುವುದು ಒಳಿತು. ಜೊತೆಗೆ ಕಳುಹಿಸುವವರು, ಸ್ವೀಕರಿಸುವವರು ಹಾಗೂ ವಿಷಯದ ಆಧಾರದ ಮೇಲೆ ಮೇಲ್‌ ಅನ್ನು ವಿಂಗಡಿಸಿಕೊಳ್ಳಬಹುದು ಅಥವಾ ಮಿತಿಗೊಳಿಸಿಕೊಳ್ಳಬಹುದು. ಆಟೊಮೆಟಿಕ್ ‘ಮಾರ್ಕ್ ಇಟ್ ಆ್ಯಸ್ ರೀಡ್’ ಫಿಲ್ಟರ್‌ ಕ್ರಿಯೇಟ್ ಮಾಡಿ ಇರಿಸಿಕೊಂಡರೆ ಅದು ಅರ್ಕೈವ್‌ನಲ್ಲಿ ಇರುತ್ತದೆ ಅಥವಾ ಲೇಬಲ್‌ನಲ್ಲಿ ಇರುತ್ತದೆ. 

* ವೈಯಕ್ತಿಕ ಹಾಗೂ ಕಚೇರಿ ಮೇಲ್ ಎರಡೂ ಒಂದೇ ವಿಳಾಸಕ್ಕೆ ಬಂದು ಗೊಂದಲ ಉಂಟು ಮಾಡುತ್ತಿದೆಯೇ? ಅಲ್ಲದೇ ಮುಖ್ಯವಾದ ಮೇಲ್‌ಗಳು ಮಿಸ್‌ ಆಗುತ್ತಿವೆಯೇ? ಹಾಗಾದರೆ ‘ಫೆಚರ್ ಆಯ್ಕೆ’ಯ ಮೂಲಕ ಈ ಎರಡನ್ನೂ ಬೇರೆ ಬೇರೆ ಫೋಲ್ಡರ್‌ನಲ್ಲಿ ಸಿಗುವಂತೆ ಮಾಡಬಹುದು. ಈ ಆಯ್ಕೆ ಇಮೇಲ್‌, ಔಟ್‌ಲುಕ್ ಎರಡಲ್ಲೂ ಲಭ್ಯವಿದೆ.

*ಮೀಟಿಂಗ್ ಆಯೋಜಿಸುವುದು, ಕ್ಯಾನ್ಸಲ್ ಮಾಡುವುದು ಮುಂತಾದವಕ್ಕೆ ಸಂಬಂಧಿಸಿ ಯುಕ್ಯಾನ್‌ಬುಕ್‌ಮಿ, ಕ್ಯಾಲೆಂಡ್ಲಿಯಂತಹ ಶೇರ್ಡ್ ಕ್ಯಾಲೆಂಡರ್‌ಗಳನ್ನು ಬಳಸಬಹುದು. ಇದನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದರಿಂದ ಸುಲಭವಾಗಿ ಸಂವಹನ ಮಾಡಬಹುದು. 

* ಪ್ರತಿಬಾರಿ ಮೇಲ್ ಟೈಪ್ ಮಾಡಿ ಸಮಯ ಹಾಳು ಮಾಡಿಕೊಳ್ಳುವ ಬದಲು ಟೆಂಪ್ಲೆಟ್‌ಗಳನ್ನು ಸೆಟ್‌ ಮಾಡಿಕೊಳ್ಳಬಹುದು. ಇದರಿಂದ ಸಮಯವೂ ಉಳಿಯುತ್ತದೆ.

ಪದೇ ಪದೇ ಬರುವ ನೋಟಿಫಿಕೇಶನ್‌ಗಳಿಗೆ ಉತ್ತರ ನೀಡುವ ಅಭ್ಯಾಸದಿಂದ ದೂರವಿರಿ. ಮೊಬೈಲ್‌ನಲ್ಲೂ ತಿಂಗಳಿಗೊಮ್ಮೆ ಬೇಡದ ಆ್ಯಪ್‌ಗಳನ್ನು ಡಿಲೀಟ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಬಳಕೆಯ ಸಮಯವನ್ನು ನೋಡಿಕೊಂಡು ಅವಶ್ಯವಿರುವುದನ್ನಷ್ಟೇ ಫೋನ್‌ನಲ್ಲಿ ಇರಿಸಿಕೊಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು