ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲೂ ಇದೆ ಒತ್ತಡ ನಿರ್ವಹಣೆ ಸೂತ್ರ

Last Updated 11 ನವೆಂಬರ್ 2020, 16:33 IST
ಅಕ್ಷರ ಗಾತ್ರ

ಈ ವರ್ಷ ಎದುರಾಗಿರುವ ಬಿಕ್ಕಟ್ಟು ಎಂತಹ ಗಟ್ಟಿ ಮನಸ್ಸಿನವರಲ್ಲೂ ಒತ್ತಡವನ್ನು ತುಂಬಿ ಬಿಟ್ಟಿದೆ. ಒತ್ತಡವನ್ನು ಹೇಗೋ ಪರಿಹರಿಸಿಕೊಳ್ಳಬಹುದು ಎಂದುಕೊಳ್ಳಿ. ಆದರೆ ಇದರಿಂದ ಉಂಟಾಗುವ ಹತ್ತಾರು ದುಷ್ಪರಿಣಾಮಗಳು ಇವೆಯಲ್ಲ, ಅವುಗಳನ್ನು ಒಂದೊಂದಾಗಿ ಕಡಿಮೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಅವುಗಳಲ್ಲೊಂದು ಒತ್ತಡದಿಂದ ಉಂಟಾಗುವ ತಿನ್ನುವ ಚಪಲ. ಇದು ನಮ್ಮನ್ನು ಎಂತಹ ಪರಿಸ್ಥಿತಿಗೆ ದೂಡುತ್ತದೆಂದರೆ ಮನಸ್ಸು ಜಂಕ್‌ ಫುಡ್‌ ಅನ್ನು ಹುಡುಕಲು ಶುರು ಮಾಡುತ್ತದೆ.

ಈ ಒತ್ತಡದಿಂದ ಕಾರ್ಟಿಸಾಲ್‌ ಎಂಬ ಹಾರ್ಮೋನ್‌ ಉತ್ಪಾದನೆ ಹೆಚ್ಚಾಗಿ ಈ ಹಸಿವೆಂಬ ಹೊಟ್ಟೆಯೊಳಗಿನ ಬೆಂಕಿ ಅಥವಾ ಹಸಿವಾಗದಿದ್ದರೂ ತಿನ್ನಬೇಕೆಂಬ ಬಯಕೆ ಧಗ್ಗನೆ ಉರಿಯುವಂತೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಆದರೆ ಈ ಕ್ಷಣಿಕ ಭಾವನಾತ್ಮಕ ತೃಪ್ತಿ ಪಡೆಯಲು ಖಾದ್ಯ ಸೇವನೆ ಮಾಡುತ್ತೇವಲ್ಲ.. ಅದು ನಮ್ಮ ದೇಹಕ್ಕೆ ಘಾಸಿ ಮಾಡುವುದೇ ಹೆಚ್ಚು. ಹಾಗಾಗದಂತೆ ಕೊಂಚ ಎಚ್ಚರಿಕೆ ವಹಿಸಿ ತಿಂದರೆ ಒತ್ತಡವನ್ನೂ ಕಡಿಮೆ ಮಾಡಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ದೈಹಿಕವಾಗಿ ಆರಾಮವಾಗಿ ಇರಬಹುದು.

ಆರೋಗ್ಯಕರ ತಿನಿಸು ಬಳಿಯಿರಲಿ: ತಿನ್ನಬೇಕೆಂಬ ಬಯಕೆಗೂ, ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಎನ್ನುವುದು ತಜ್ಞರ ಅಭಿಮತ. ‘ನಿಮ್ಮ ಒತ್ತಡ ನಿವಾರಣೆ ಮತ್ತು ಆಹಾರ ಸೇವನೆ ಒಂದಕ್ಕೊಂದು ಪೂರಕವಾಗಿರಬೇಕು. ಅಂದರೆ ಒತ್ತಡ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ತಿನಿಸನ್ನೂ ಬಳಿಯೇ ಇಟ್ಟುಕೊಂಡಿರಬೇಕು. ಏಕೆಂದರೆ ಒತ್ತಡ ತಡೆಯಲಾರದೇ ಏನನ್ನಾದರೂ ತಿನ್ನಲೇಬೇಕು ಎಂಬ ಆಸೆಯಾದಾಗ ಮನಸ್ಸು ಯೋಚಿಸುವುದು ಜಂಕ್‌ ಫುಡ್‌ ಕುರಿತು’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ.ಟಿ.ಎಸ್‌.ತೇಜಸ್‌.

ಆದರೆ ಕ್ಯಾಲರಿ ಕಡಿಮೆ ಇರುವ, ಕೊಲೆಸ್ಟರಾಲ್‌ ಜಾಸ್ತಿ ಇರುವ ಜಂಕ್‌ ಆಹಾರ ಕೇವಲ ಕೊಬ್ಬಿನ ಶೇಖರಣೆ ಹಾಗೂ ಬೊಜ್ಜಿಗೆ ಕಾರಣವಾಗುವುದಲ್ಲದೇ, ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಇನ್ನು ಕೆಲವೊಮ್ಮೆ ಸುಸ್ತಾಗಿ ಆಲಸ್ಯವಾಗುವುದು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಅನುಭವಕ್ಕೆ ಬಂದಿರಬಹುದು. ಉದಾಹರಣೆಗೆ ಮದುವೆ ಊಟ ಮಾಡಿ ಬಂದವರು ‘ಹೊಟ್ಟೆಯೆಲ್ಲ ಭಾರ. ಏನೂ ಕೆಲಸ ಮಾಡುವುದೇ ಬೇಡ ಎನಿಸುತ್ತದೆ’ ಎಂದು ಸಂಭಾಷಣೆ ಶುರು ಮಾಡುವುದು ಸಾಮಾನ್ಯ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಊಟದಲ್ಲಿ ಸಿಹಿ ತಿನಿಸು, ಕರಿದ ತಿಂಡಿಗಳು ಯಥೇಚ್ಚವಾಗಿರುವುದು ಇದಕ್ಕೆ ಕಾರಣ. ನಾಲಿಗೆ ಚಪಲಕ್ಕೆ ತಿಂದ ಖಾದ್ಯಗಳು ಕೆಲವೊಮ್ಮೆ ಸರಿಯಾಗಿ ಜೀರ್ಣವಾಗದೇ ದೇಹದಲ್ಲಿ ಲವಲವಿಕೆ ಇಲ್ಲದಂತೆ ಮಾಡಿಬಿಡುತ್ತವೆ.

ಸಂತೃಪ್ತಿ ತಾತ್ಕಾಲಿಕ: ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಕರಿದ, ಟ್ರಾನ್ಸ್‌ ಕೊಬ್ಬು ಜಾಸ್ತಿ ಇರುವ ತಿನಿಸುಗಳನ್ನು ಸೇವಿಸುವವರೂ ಜಾಸ್ತಿಯಾಗಿದ್ದಾರೆ. ಇಂತಹ ಅನಾರೋಗ್ಯಕರ ಖಾದ್ಯ ತಯಾರಿಸುವಾಗಲೂ ಕೆಲವರಿಗೆ ತತ್‌ಕ್ಷಣಕ್ಕೆ ತೃಪ್ತಿಕರ ಭಾವನೆ ಮೂಡುವುದು ವಿಚಿತ್ರವಾದ ಸಂಗತಿಯೇನೂ ಅಲ್ಲ. ಸಿಹಿ ತಯಾರಿಸಿ ತಿನ್ನುವುದು, ಕರಿದ ಬೋಂಡಾ, ಬಜ್ಜಿ ಬಾಯಿಗೆ ಹಾಕಿಕೊಂಡು ಖುಷಿ ಪಡುವುದು ಆ ಕ್ಷಣಕ್ಕೆ ಖುಷಿ ಕೊಟ್ಟರೂ ಅದು ತಾತ್ಕಾಲಿಕ.

‘ಅನಾರೋಗ್ಯಕರ ಆಹಾರ ಇನ್ಸುಲಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಇದು ದೇಹ ಹಾಗೂ ಮನಸ್ಸಿನ ಮೇಲೆ ಇನ್ನಷ್ಟು ಒತ್ತಡ ಹೇರುತ್ತದೆ’ ಎನ್ನುತ್ತಾರೆ ಡಾ.ತೇಜಸ್‌.

ಹಾಗಾದರೆ ಒತ್ತಡ ಉಂಟಾದಾಗ ತಿನ್ನಿ, ಆದರೆ ಆರೋಗ್ಯಕರ ಆಹಾರ ತಿಂದರೆ ಒತ್ತಡ, ಆತಂಕ ಎಲ್ಲವೂ ಕಡಿಮೆಯಾಗುತ್ತದೆ. ಒತ್ತಡದ ಹಾರ್ಮೋನ್‌ ಕಾರ್ಟಿಸಾಲ್‌ ಕಡಿಮೆ ಮಾಡುವಂತಹ ಝಿಂಕ್‌ ಹಾಗೂ ವಿಟಮಿನ್‌ ಸಿ, ಇ ಯುಕ್ತ ಆಹಾರ ಸೇವಿಸಿ ಎಂದು ಅವರು ಸಲಹೆ ನೀಡುತ್ತಾರೆ.

‘ಅರಿಸಿನದ ಪುಡಿ, ಶುಂಠಿಯನ್ನು ಪದಾರ್ಥಗಳಲ್ಲಿ ಹಾಕಿ ತಿನ್ನುವುದರಿಂದ ತೃಪ್ತಿಕರ ಭಾವನೆ ಹೊಂದಬಹುದು. ಕೊತ್ತಂಬರಿ, ಜೀರಿಗೆ ಹಾಕಿ ಕುದಿಸಿದ ಕಷಾಯ ಕುಡಿದರೂ ಒಳ್ಳೆಯದೇ. ಹಾಗೆಯೇ ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ನಿಮ್ಮದಾಗುತ್ತದೆ’ ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ.ಸರಸ್ವತಿ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT