ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಲೇಖನ: ನೆಮ್ಮದಿಗಾಗಿ ವಿಹಂಗಮಯೋಗ

Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

’ಯೋಗವನ್ನು ಯೋಗಾದೊಂದಿಗೆ ಗೊಂದಲ ಮಾಡಿಕೊಳ್ಳಬೇಡಿ. ಯೋಗವೆಂದರೆ ಒಂದಾಗುವುದು. ಆದರೆ ಈಚೆಗೆ ಕಸರತ್ತುಗಳಿಗೆ, ದೇಹದಂಡನೆಗೆ ಸೀಮಿತವಾಗಿದೆ. ‘ಯೋಗ’ವೆಂದರೆ ದೇಹ ಮತ್ತು ಮನಸ್ಸನ್ನು ಒಗ್ಗೂಡಿಸುವುದು. ಆತ್ಮವನ್ನು ಪರಮಾತ್ಮನೊಂದಿಗೆ ಒಗ್ಗೂಡಿಸುವುದು ವಿಹಂಗಮಯೋಗ‘ ಎಂದು ಸದ್ಗುರು ಸ್ವತಂತ್ರದೇವ ಮಹಾರಾಜ ಅವರು ವಿವರಿಸಿದರು.

ಈಚೆಗೆ ವಾರಾಣಸಿಯಿಂದ ಬೆಂಗಳೂರಿಗೆ ಭೇಟಿ ನೀಡಿದ್ದ ಅವರು, ವಿಹಂಗಮಯೋಗದ ಕುರಿತು ಪ್ರಜಾವಾಣಿಗೆ ವಿವರಿಸಿದರು.

ಸದ್ಯ ಎಲ್ಲರಿಗೂ ಧಾವಂತವಿದೆ. ತಮ್ಮನ್ನೇ ತಾವು ಮರೆತಂತೆ ಜನ ದೈನಂದಿನ ಬದುಕಿನಲ್ಲಿ ಕಳೆದುಹೋಗಿದ್ದಾರೆ. ಅದೇ ಕಾರಣದಿಂದ ಚಿಂತೆ, ರೋಗ, ಮಧುಮೇಹ, ಒತ್ತಡ, ಖಿನ್ನತೆ ಮುಂತಾದವುಗಳಿಂದ ಬಳಲುತ್ತಿದ್ದಾರೆ. ಕೆಲಸ ಮಾಡುವುದು, ವಿರಮಿಸುವುದು, ಊಟ ಮಾಡುವುದು, ಸಂಚರಿಸುವುದನ್ನೇ ಜೀವನವೆಂದು ಭಾವಿಸಿದ್ದಾರೆ. ಈ ಭೋಗಜೀವನವೇ ಜೀವನವಲ್ಲ. ಮನುಷ್ಯನ ಬದುಕಿಗೆ ಒಂದು ಅರ್ಥವಿದೆ. ಮನುಷ್ಯನ ಇರುವಿಕೆಗೆ ಒಂದು ಅರ್ಥವಿದೆ. ಅದನ್ನು ಅರಿಯುವುದೇ ವಿಹಂಗಮ ಯೋಗವಾಗಿದೆ.

ಆಂತರಿಕ ಶಾಂತಿಯ ಶೋಧ ಮತ್ತು ಸ್ಥಾಪನೆಯೇ ವಿಹಂಗಮಯೋಗದ ಮೂಲ ಉದ್ದೇಶ. ಈ ಪಥದಲ್ಲಿ ಮನುಷ್ಯರು ಸರ್ವಶಕ್ತ ಸೃಷ್ಟಿಕರ್ತನೊಂದಿಗೆ ಸಂಪರ್ಕ ಸಾಧಿಸುತ್ತಾರೆ. ವಿಹಂಗಮಯೋಗದ ಮೊದಲ ಹೆಜ್ಜೆ ಅಲ್ಲಿ ಇಲ್ಲಿ ಚಂಚಲವಾಗಿರುವ, ಮರ್ಕಟದಂತಿರುವ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ. ಈ ಯೋಗವು ಅಭ್ಯಾಸದಿಂದ ಮಾತ್ರ ಸಾಧಿಸಬಲ್ಲೆವು. ನಿಮ್ಮ ದೃಷ್ಟಿಯನ್ನು ಮೂಗಿನ ತುದಿಯ ಮೇಲೆ ಕೇಂದ್ರೀಕರಿಸಿ, ಅಲೆದಾಡುವ ಮನವನ್ನು ಹಿಡಿದು ತರಬೇಕಿದೆ. ಈ ನಿಯಂತ್ರಣ, ಈ ಕಡಿವಾಣ ಕ್ರಮೇಣ ಸಾಧ್ಯವಾಗುತ್ತದೆ. ಹಾಗೆ ಸಾಧ್ಯವಾದ ನಂತರ ಎರಡನೆಯ ಹಂತಕ್ಕೆ ಪ್ರವೇಶಿಸುತ್ತೀರಿ. ಅಲ್ಲಿ ಅಂತರ್ಮುಖಿಯಾಗುತ್ತ ಹೋಗುತ್ತೀರಿ. ಅಂತರ್ಮುಖಿಯಾದಾಗ, ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟುತ್ತವೆ. ನಾನು ಯಾರು? ಯಾಕಾಗಿ ಈ ಜನ್ಮ ಎಂದು. ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸಾಧನೆ. ಆದರೆ ಈ ಪ್ರಶ್ನೆಗಳಿಂದ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. 

ಯಾರಿಗೂ ಕೇಡನ್ನು ಬಯಸುವುದಿಲ್ಲ. ಒಳಿತನ್ನೇ ಮಾಡುತ್ತೀರಿ. ನಿಮ್ಮೊಳಗೆ ಅಮಿತವಾದ ಪ್ರೀತಿ, ಅಚಲವಾದ ವಿಶ್ವಾಸ ಹುಟ್ಟುತ್ತದೆ. ಅದು ಬೃಹತ್‌ ಬೆಳಕೊಂದನ್ನು ನೀಡುತ್ತದೆ. ಆ ಬೆಳಕು, ನಿಮ್ಮ ಒಳಹೊರಗನ್ನೂ ಬೆಳಗತೊಡಗುತ್ತದೆ. 

ಯೋಗವೆಂದರೆ ಇದೇನೆ. ನಿಮ್ಮನ್ನು ನಿಮ್ಮ ಮನಸ್ಸು, ಆತ್ಮದೊಂದಿಗೆ ಬೆಸೆಯುತ್ತ, ದೇಹವನ್ನೂ ಒಂದೇ ಶ್ರುತಿಗೆ ತರುವುದಾಗಿದೆ. ಈ ದಿನಗಳಲ್ಲಿ ವ್ಯಕ್ತಿಗಳು ಅಶಾಂತರಾಗಲು ಕಾರಣವೆಂದರೆ ನಾವು ಮನಸ್ಸಿನ ಗುಲಾಮರಾಗಿದ್ದೇವೆ. ದೇಹವನ್ನು ಮನಸ್ಸು ನುಡಿದಂತೆ ನಡೆಯಲು ಬಿಟ್ಟಿದ್ದೇವೆ. ಮನಸ್ಸಿಗೆ ಯಾವ ಲಂಗುಲಗಾಮುಗಳೂ ಇರುವುದಿಲ್ಲ. ಅದರ ಬೇಕುಗಳಿಗೆ ಕೊನೆ ಇರುವುದಿಲ್ಲ. ಆದರೆ ಮನಸ್ಸನ್ನು ನಿಗ್ರಹಿಸಲು ಕಲಿತರೆ, ಮನಸ್ಸು ಆತ್ಮದ ಗುಲಾಮನಾಗಿಸಲು ವಿಹಂಗಮಯೋಗ ಪ್ರಬಲ ಸಾಧನವಾಗಿದೆ. ವಿಹಂಗಮ ಯೋಗದ ಅಭ್ಯಾಸ ಆರಂಭವಾದರೆ ಮಾನಸಿಕವಾಗಿಯೂ ದೈಹಿಕವಾಗಿಯೂ ಸದೃಢರಾಗುತ್ತೇವೆ. ಈ ಕಾರಣದಿಂದಲೇ ವಿಹಂಗಮಯೋಗ ಈಗ ಜನಪ್ರಿಯವಾಗುತ್ತಿದೆ. ಜನರಿಗೆ ಅಗತ್ಯವಿರುವ ಮಾನಸಿಕ ಶಾಂತಿ, ನೆಮ್ಮದಿಯ ಮೂಲಸೆಲೆ ವಿಹಂಗಮ ಯೋಗದಲ್ಲಿದೆ. ಅದನ್ನು ಅರಸಿಕೊಂಡು ಹೆಚ್ಚು ಜನರು ಈ ಯೋಗದ ಅಭ್ಯಾಸಿಗಳಾಗುತ್ತಿದ್ದಾರೆ.

ಈ ಧ್ಯಾನದಿಂದ, ನೈಜ ನೆಮ್ಮದಿ ಸಂತೋಷ ದಕ್ಕುವುದರೊಂದಿಗೆ, ವಿಶ್ವಶಾಂತಿ ಮೂಡುತ್ತದೆ. ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಯಾವ ಧರ್ಮದವರಾದರೂ ಇದನ್ನು ಅನುಸರಿಸಬಹುದಾಗಿದೆ. ವೈಯಕ್ತಿಕ ಶಾಂತಿ, ನೆಮ್ಮದಿ ಮೂಡುವುದರೊಂದಿಗೆ ವಿಶ್ವಶಾಂತಿ ಹಾಗೂ ಸಮಷ್ಟಿಪ್ರೀತಿ ಮೂಡುತ್ತದೆ. ‘ವಸುಧೈವ ಕುಟುಂಬಕಮ್’ ಎಂಬ ಭಾವ ಒಡಮೂಡುತ್ತದೆ. ಜಗತ್ತಿನಾದ್ಯಂತ ವಿಹಂಗಮ ಯೋಗದ ಅಭ್ಯಾಸ ಹೆಚ್ಚಾದರೆ ಸಮರಗಳಿಗೆ ಆಸ್ಪದವಿರದೆ, ಸೌಹಾರ್ದವೇ ಮೂಡುತ್ತದೆ. 

ಪ್ರತಿದಿನವೂ ಹತ್ತು ನಿಮಿಷಗಳ ಅಭ್ಯಾಸ ನಿಮ್ಮನ್ನು ವಿಹಂಗಮಯೋಗದ ಹಲವು ಸ್ತರಗಳಿಗೆ ಕರೆದೊಯ್ಯಬಲ್ಲದು. ಜ್ಞಾನದ ಬೆಳಕು ಎಲ್ಲರನ್ನೂ ಆವರಿಸಲಿ ಎಂಬುದು ನಮ್ಮ ಆಶಯ. ಮನಃಶಾಂತಿಗೆ ಮನೋನಿಗ್ರಹ ಸಾಧಿಸಬೇಕು. ಇದಕ್ಕೆ ವಿಹಂಗಮಯೋಗವೇ ಸಾಧನವಾಗಿದೆ ಎನ್ನುತ್ತ ತಮ್ಮ ಮಾತಿಗೆ ಪೂರ್ಣವಿರಾಮವಿರಿಸಿದರು.  

ಈ ಯೋಗದ ಮರ್ಮವೇನು?

ಹತ್ತೊಂಬತ್ತನೆಯ ಶತಮಾನದಿಂದೀಚೆಗೆ ಸದ್ಗುರು ಸದಾಫಲ ದೇವ ಗುರುಜಿ ಅವರು ವಿಹಂಗಮಯೋಗದಲ್ಲಿ ಸಾಧನೆ ಮಾಡಿದರು. ಯಾವುದೇ ಪ್ರಚಾರವಿಲ್ಲದೆ, ವಿಹಂಗಮ ಯೋಗಿಗಳಾಗಲು, ಯೋಗವನ್ನು ಅಭ್ಯಾಸ ಮಾಡುವಲ್ಲಿ ಆಸಕ್ತಿ ಇರುವವರಿಗೆ ಕಲಿಸುತ್ತಹೋದರು. ಸದ್ಯ ಸದ್ಗುರು ಸ್ವತಂತ್ರದೇವ ಮಹಾರಾಜ್ ಅವರು ಈ ಯೋಗವನ್ನು ಹೇಳಿಕೊಡುತ್ತಿದ್ದಾರೆ. ಛತ್ತಿಸ್‌ಗಢದಲ್ಲಿ ವಿಹಂಗಮ ಯೋಗ ಅತ್ಯಂತ ಜನಪ್ರಿಯವಾದ ಅಭ್ಯಾಸವಾಗಿದೆ. ವಾರಾಣಸಿಯಲ್ಲಿ 128 ಕಮಲದಳಗಳ ವಿನ್ಯಾಸದಲ್ಲಿರುವ ಸ್ವರವೇದ ಮಂದಿರದಲ್ಲಿ ಏಕಕಾಲಕ್ಕೆ 20000 ಜನರು ವಿಹಂಗಮಯೋಗದಲ್ಲಿ ತೊಡಗಿಕೊಳ್ಳುತ್ತಾರೆ.

ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಬಿಹಾರ ಮೂಲದ ಅಭಿಮನ್ಯು ಕುಮಾರ್‌ ಅವರ ಪ್ರಕಾರ, ‘ವಿಹಂಗಮಯೋಗ ನಮ್ಮಲ್ಲಿ ಜ್ಞಾನದ ಹಸಿವನ್ನು ಬಿತ್ತುತ್ತದೆ. ವಿದ್ಯಾರ್ಥಿಗಳು ಓದು ಮತ್ತು ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಕೊಳ್ಳಲು ಇದು ಸಹಾಯ ಮಾಡುತ್ತದೆ.’

ಗುರುವಿನ ಮುಖೇನ ದೊರೆಯುವ ಈ ವಿಹಂಗಮಯೋಗದ ಅಭ್ಯಾಸ ನಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಸುಖ–ಶಾಂತಿಯ ನಿಜವಾದ ಅರ್ಥಗಳು ದಕ್ಕುತ್ತ ಹೋಗುತ್ತವೆ.
–ಕುಮಾರ್‌ ಹೇಮಂತ್‌ ಸಿಂಗ್‌, ಭೂವಿಜ್ಞಾನ ವಿಭಾಗ, ಐಐಟಿ ಬಾಂಬೆ
ಸ್ವತಂತ್ರ ದೇವ ಮಹಾರಾಜ್

ಸ್ವತಂತ್ರ ದೇವ ಮಹಾರಾಜ್

-ಪ್ರಜಾವಾಣಿ ಚಿತ್ರ/ ರಂಜು ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT