ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Health Tips: ಹೊಮ್ಮಲಿ ಮೈಕಾಂತಿ- ಬಿಸಿಲಿಗೆ ಆಹಾರ ಕ್ರಮ ಹೇಗಿರಬೇಕು?

Last Updated 11 ಏಪ್ರಿಲ್ 2023, 0:15 IST
ಅಕ್ಷರ ಗಾತ್ರ

ಅಬ್ಬ ಅದೇನು ಸೆಖೆ!. ಮರದೆಲೆಯೂ ಅಲುಗದ ಬೀಸುಗಾಳಿಯ ಮುಷ್ಕರ. ನೆತ್ತಿ ಸುಡುವ ಪ್ರಖರ ಸೂರ್ಯಕಿರಣ. ಅಹೋರಾತ್ರಿಯಲ್ಲಿ ಮೋಡಗಳ ದಟ್ಟೈಸುವಿಕೆಯೇನೋ ಕಂಡೀತು. ಅಲ್ಲೊಮ್ಮೆ, ಇಲ್ಲೊಮ್ಮೆ ಸುರಿಯುವ ಹನಿ ಮಳೆಯಿಂದ ಸುಖವಿಲ್ಲ. ಅಡಿಯಿಂದ ಮುಡಿಯ ತನಕ ಪ್ರವಹಿಸುವ ಬೆವರ ಧಾರೆ. ಕೂಲರ್, ಫ್ಯಾನ್, ಎಸಿಯಂತೂ ಚರ್ಮದ ಬಿರಿತ, ನವೆ, ಗಾದರಿಯನ್ನು ಮತ್ತಷ್ಟು ಉಲ್ಬಣಿಸುವ ಹೆದ್ದಾರಿ. ಇಂತಹ ಅದೆಷ್ಟೋ ವಸಂತಗಳನ್ನು ನಮ್ಮ ನೆಲದ ಮೇಲೆ ಕಂಡವರು ನಮ್ಮ ಪೂರ್ವಿಕರು. ವಸಂತ ಋತುಚರ್ಯೆ ಬರೆದಿರಿಸಿದರು. ಆರೋಗ್ಯ ಕಾಳಜಿಯ ನೀತಿಸಂಹಿತೆಯನ್ನು ಬರೆದಿರಿಸಿದರು.

ಬೇವು ಬೆಲ್ಲದ ಕಹಿಯ ಸೇವನೆಯಷ್ಟೆ ಸಾಲದು; ಹೊಂಗೆಯ ಒಗರುತನವೂ ನಮಗೆ ಅತ್ಯವಶ್ಯ. ಮನೆಯ ಮುಂದಿನ ಹೊಂಗೆಯ ಮರ ಚಿಗುರೆಲೆಯೋ, ಉದುರಿದ ಹೂಗಳ ರಾಶಿಯೋ ಆರಿಸಿ ತನ್ನಿರಿ. ಒಗರು ತನದ ಮತ್ತೊಂದು ಹೆಸರು ಹೊಂಗೆ ಮರ. ನೆತ್ತಿ, ಮೈಕೈಗೆ ಹಚ್ಚುವ ಎಳ್ಳೆಣ್ಣೆ, ತೆಂಗಿನೆಣ್ಣೆಯ ಉಪಚಾರ ಅತ್ಯಗತ್ಯ. ಅನಂತರ ಮೀಯುವ ಉಗುರು ಬೆಚ್ಚಗೆ ನೀರಿಗೆ ಹೊಂಗೆ ಚಿಗುರು, ಹೂವಿನ ಮಿಶ್ರಣವಿರಲಿ. ಅದೆಂತಹ ಆಹ್ಲಾದದ ಸ್ನಾನವೈಭವವನ್ನು ಅನುಭವಿಸಿರಿ. ಸಕಲ ಚರ್ಮವ್ಯಾಧಿ ನಿರೋಧಕ, ನಿವರಕತನದ ಹೊಂಗೆಯ ಸೊಂಪು, ಕಂಪು ವೈರಾಣುಜನಿತ ನೆಗಡಿ, ಕೆಮ್ಮು ಸಹ ದೂರವಿಡುತ್ತದೆ. ಜನ ಮತ್ತು ಜಾನುವಾರಿನ ಚರ್ಮದ ಸಮಸ್ತ ಕಾಯಿಲೆಗೆ ಹೊಂಗೆ ಎಣ್ಣೆ ಹಚ್ಚುವ ಉಪಾಯವಂತೂ ಸುಲಭ ಸಂಜೀವಿನಿ. ಚರ್ಮದ ಆರೋಗ್ಯ ಮಾತ್ರವಲ್ಲ. ಹಿರಿ, ಕಿರಿ ಹರೆಯದವರ ಕೀಲುಗಂಟಿನ ಬಾಧೆ ದೂರೀಕರಿಸುವ ಬೇಸಿಗೆಯ ಅಗತ್ಯ.

ಬಯಲು ಸೀಮೆ, ಕರಾವಳಿಯ ಬೆಟ್ಟನಾಡಿನ ಸುಂದರ ಮರ ಕೊಂದೆ ಅಥವಾ ಕಕ್ಕೆ. ಚಿನ್ನದ ಬಣ್ಣದ ಹೂಬಿಡುವ ಕಕ್ಕೆ ಮರಕ್ಕೆ ‘ಗೋಲ್ಡನ್ ಷವರ್’ ಎಂಬ ಅನ್ವರ್ಥನಾಮ! ಅಷ್ಟು ಸುರಮ್ಯ ನೋಟದ ಮರವದು. ಉಪಯೋಗವೂ ಅಷ್ಟೆ ಪ್ರಮುಖ. ಕಕ್ಕೆ ಗುಣಪಡಿಸಲಾರದ ಚರ್ಮರೋಗವೇ ಇಲ್ಲ ಎನ್ನುತ್ತದೆ ಆಯುರ್ವೇದ ನಿಘಂಟು ಸಾಹಿತ್ಯ. ಪರಿಸರದ ಅಂತಹ ಸಂಜೀವಿನಿಯ ಹೂ, ಎಲೆ ಮತ್ತು ಉದ್ದನೆಯ ಕಾಯಿಯ ಮೇಣದ ಮನೆ ಮನೆ ಬಳಕೆ ಹೆಚ್ಚಲಿ. ಮರದ ಸಂತತಿ ಬೆಳೆಯಲಿ. ಚತುರಂಗುಲ ಎಂಬ ಹೆಸರಿನ ಕಕ್ಕೆಯ ಕಾಯಿ ಮೇಣವನ್ನು ಆಯಾ ವ್ಯಕ್ತಿಯ ನಾಕು ಬೆರಳು ಗಂಟು ಅಳತೆಯಷ್ಟು ಸೇವಿಸಿರಿ. ಬೇಸಿಗೆಯ ಮಲಬದ್ಧತೆಯಿಂದ ದೂರವಿರಿ. ‘ಆರಗ್ವಧಾದಿ ಕಷಾಯ’ ಎಂಬ ಸಿದ್ಧ ಸಿರಪ್ ಸಹ ಅಂಗಡಿಗಳಲ್ಲಿ ಲಭ್ಯ. ಸುಖಭೇದಿಗೆ ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ಎರಡು ಅಥವಾ ನಾಕು ಚಮಚೆ ದಿನಕ್ಕೆರಡು ಬಾರಿ ಸೇವಿಸಲಾದೀತು.

ಚರ್ಮದ ಒರಟುತನವೇ? ಬಿರಿತವೇ? ಕಕ್ಕೆ ಮರದ ಎಲೆಗಳನ್ನು ಸಂಗ್ರಹಿಸಿರಿ. ಹುಳಿಮಜ್ಜಿಗೆ ಸಂಗಡ ಅರೆದುಕೊಳ್ಳಿರಿ. ಒರಟು ತ್ವಚೆಯ ಮೇಲೆ ಲೇಪ ಮಾಡಲಾದೀತು. ಆಯುರ್ವೇದದ ಪ್ರಕಾರ ಚರ್ಮವು ರಸಧಾತುವಿನ ಆಶ್ರಯ ಸ್ಥಾನ. ಈ ಧಾತುವಿನ ಉತ್ಪತ್ತಿ, ಏರಿಳಿತದಿಂದ ಚರ್ಮಾರೋಗ್ಯ ಹದಗೆಡುತ್ತದೆ ರಸಧಾತುವನ್ನು ಹೆಚ್ಚಿಸುವ ಪೂರಕ ಆಹಾರಗಳ ಸೇವನೆಯೇ ವಸಂತಾರೋಗ್ಯದ ಭದ್ರ ಬುನಾದಿ. ಲಿಂಬೆ ಷರಬತ್, ಕಾಮಕಸ್ತೂರಿ ಬೀಜದ ಪಾನಕ, ಎಳನೀರು, ಆರಾರೂಟ್ ಗಂಜಿ, ಕ್ಯಾರೆಟ್, ಬೀಟ್‍ರೂಟ್ ರಸ, ಬೇಸಿಗೆಯ ಇತರ ಹಣ್ಣುಗಳೆನಿಸಿದ ಕರಬೂಜ, ಕಲ್ಲಂಗಡಿಯ ಬೆಲ್ಲದ ಪಾನಕ, ಹುಳಿಯಾಗದ ತಾಜಾ ಮಜ್ಜಿಗೆ, ಬಾದಾಮಿ, ಕೇಸರಿ ಕೂಡಿಸಿದ ಕಾದಾರಿದ ಹಾಲು, ಬೆಣ್ಣೆ, ತುಪ್ಪದ ಹಿತ ಮಿತವರಿತ ಸೇವನೆಯಿಂದ ರಸಧಾತು ಪುಷ್ಟಿ. ಬೇಸಿಗೆ ಶ್ರಾಯದ ಚರ್ಮಾರೋಗ್ಯಕ್ಕೆ ತುಷ್ಟಿ. ಹೆಸರು ಬೇಳೆಯ ಹುಗ್ಗಿ, ಖೀರು, ಪಾಯಸ, ಖಿಚಡಿಗೆ ಕೂಡಿಸಿದ ಹಸುವಿನ ತುಪ್ಪದ ಸೇವನೆಯಿಂದ ಬೇಸಿಗೆ ಬವಣೆ ನೀಗುವಿರಿ. ಕರಾವಳಿಗರಿಗೆ ಪರಿಚಿತ ಕೋಕಂ ಹಣ್ಣಿನ ಪಾನಕವೂ ಉದರಕ್ಕೆ ತಂಪು. ಹೃದಯಕ್ಕೆ ಇಂಪು.

ಓದು ಮುಗಿಸುವ ಮುನ್ನ ಒಂದು ಸಂಗತಿ ಪ್ರಸ್ತುತ. ‘ಸೋರಿಯಾಸಿಸ್’ ಎಂಬ ಚರ್ಮ ತೊಂದರೆಯಂತೂ ವೈದ್ಯರ ಅತಿ ದೊಡ್ಡ ಸವಾಲು. ಇದನ್ನು ಮನೋದೈಹಿಕ ಸ್ಥಿತಿ ಎಂದೂ ಹಲವರು ಪರಿಗಣಿಸುವರು. ಇದು ಅರ್ಧ ಸತ್ಯ. ಬೇಸಿಗೆಯ ಕಡು ಬವಣೆಯ ದಿನಗಳನ್ನು ನಿಭಾಯಿಸಲು ಮನಸ್ಸು ಗೆಲ್ಲುವ, ಖಿನ್ನತೆ ಗೆಲ್ಲುವ ಉಪಾಯಗಳನ್ನು ಕಂಡಿತ ಮರೆಯದಿರಿ. ಗುಪ್ತಯುಗದ ಗೋಷ್ಠೀ ಕಲಾಪ ಎಂಬ ಒಂದೆರಡು ಸಂಗತಿ ಅರಿಯಿರಿ. ನಿಮ್ಮೂರಿನ ಎಲ್ಲ ಜಾತ್ರೆ, ರಥೋತ್ಸವಗಳು ವಸಂತ ಮಾಸದ ಆಚರಣೆಗಳು ತಾನೇ? ಮೈಮನಗಳು ವಿಷಾದದ ಸುಳಿಗೆ ಸಿಲುಕದಿರಲಿ ಎಂಬ ಮೇಲ್ಪಂಕ್ತಿಯ ಜಾಣ್ಮೆ ಹಿರಿಯರ ಕಾಣ್ಕೆ! ಸಂಗೀತ, ಕಾವ್ಯ, ನೃತ್ಯಾದಿ ಕಲಾಪಗಳೂ ನಿಮ್ಮ ಮೈ ಮನದ ಮುದತನದ ಹಾದಿ. ಸಂಭ್ರಮಿಸಿರಿ. ನಿರೋಗಿಗಳಾಗಿರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT