ಶುಕ್ರವಾರ, ಜುಲೈ 1, 2022
21 °C

ಕೊರೊನಾ ಒಂದಿಷ್ಟು ತಿಳಿಯೋಣ: ಎರಡನೇ ಡೋಸ್‌ ಲಸಿಕೆಗೆ ಮುನ್ನವೇ ಸೋಂಕು ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ಕ್ಕೆ ಲಸಿಕೆಯ ಮೊದಲ ಡೋಸ್‌ ತೆಗೆದುಕೊಂಡ ನಂತರ ವೈರಸ್‌ ಸೋಂಕು ತಗಲಬಹುದು ಎಂದು ಲಸಿಕೆ ತಯಾರಿಕೆ ಕಂಪನಿಗಳು ಈಗಾಗಲೇ ಎಚ್ಚರಿಸಿವೆ. ಈ ಮಧ್ಯೆ ಅಮೆರಿಕದಲ್ಲಿ ನರ್ಸ್‌ ಒಬ್ಬರಿಗೆ ಫೈಜರ್‌ ಲಸಿಕೆಯ ಮೊದಲ ಡೋಸ್‌ ತೆಗೆದುಕೊಂಡ 8 ದಿನಗಳ ನಂತರ ಕೋವಿಡ್‌–19 ದೃಢಪಟ್ಟಿದೆ. ಆದರೆ ಈ ಬಗ್ಗೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ಲಸಿಕೆ ಪರಿಣಾಮಕಾರಿಯಲ್ಲ ಎಂದೂ ಅರ್ಥೈಸಬೇಕಾಗಿಲ್ಲ ಎಂಬುದಾಗಿ ಫೈಜರ್‌ ಲಸಿಕೆ ತಯಾರಿಕಾ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿದೆ.

ಹಾಗಾದರೆ ಮೊದಲ ಡೋಸ್‌ ಹಾಕಿಸಿಕೊಂಡರೆ ಕೋವಿಡ್‌–19 ಎದುರಿಸುವಷ್ಟು ಶಕ್ತಿ ದೇಹಕ್ಕೆ ಲಭಿಸುವುದಿಲ್ಲವೇ ಎಂಬ ಪ್ರಶ್ನೆ ಏಳಬಹುದು. ಇದಕ್ಕೆ ಫೈಜರ್‌ ಕಂಪನಿ ಕೊಟ್ಟಿರುವ ವಿವರಣೆ ಪ್ರಕಾರ, ಮೊದಲ ಡೋಸ್‌ ಹಾಕಿಸಿಕೊಂಡ 21 ದಿನಗಳ ಬಳಿಕ ಎರಡನೇ ಡೋಸ್‌ ಹಾಕಿಸಿಕೊಳ್ಳಬೇಕು. ಫೈಜರ್‌ ಹಾಗೂ ಮೋಡರ್ನಾ ಈ ಎರಡೂ ಬಗೆಯ ಲಸಿಕೆಗಳಲ್ಲಿ ಜೀವಂತ ಅಥವಾ ಸತ್ತ ವೈರಸ್‌ ಇಲ್ಲ. ಬದಲಾಗಿ ಈ ಲಸಿಕೆ ನಿರಪಾಯಕಾರಿ ಪ್ರೊಟೀನ್‌ ತಯಾರಿಸುವಂತೆ ದೇಹಕ್ಕೆ ಸೂಚನೆ ನೀಡುತ್ತದೆ. ಲಸಿಕೆ ತೆಗೆದುಕೊಂಡ ವ್ಯಕ್ತಿಗೆ ಕೊರೊನಾ ವೈರಸ್‌ ತಗಲಿದರೆ, ಅದರ ವಿರುದ್ಧ ಹೋರಾಡಲು ದೇಹ ಸಜ್ಜಾಗಿರುತ್ತದೆ. ಆದರೆ ಲಸಿಕೆಯ ಎರಡೂ ಡೋಸ್‌ ತೆಗೆದುಕೊಂಡಾಗ ಮಾತ್ರ ಈ ಸಾಮರ್ಥ್ಯ ದೇಹಕ್ಕೆ ಲಭ್ಯವಾಗುತ್ತದೆ ಎಂದು ವಿವರಣೆ ನೀಡಲಾಗಿದೆ.

ಒಂದು ಡೋಸ್‌ ಪಡೆದಾಗ ಈ ದಕ್ಷತೆಯ ಪರಿಣಾಮ ಶೇ 50ರಷ್ಟು ಮಾತ್ರ. ಹೀಗಾಗಿ ಒಂದು ಲಸಿಕೆಯ ನಂತರ ಕೋವಿಡ್‌–19 ತಗಲಬಹುದಾದ ಸಾಧ್ಯತೆ ಶೇ 50ರಷ್ಟು. ಹಾಗೆಯೇ ಈ ಲಸಿಕೆಯ ಎರಡೂ ಡೋಸ್‌ ತೆಗೆದುಕೊಂಡ ನಂತರ ದಕ್ಷತೆಯ ದರ ಶೇ 95ರಷ್ಟು. ಅಂದರೆ ಮತ್ತೆ ಸೋಂಕು ತಗಲುವ ಸಾಧ್ಯತೆ ಶೇ 5ರಷ್ಟು.

ಹೀಗಾಗಿ ಲಸಿಕೆ ತೆಗೆದುಕೊಂಡವರು ತಕ್ಷಣಕ್ಕೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಿಲ್ಲ. ಮಾಸ್ಕ್‌ ಹಾಕುವುದು, ಗುಂಪಿನಲ್ಲಿ ಬೆರೆಯದಿರುವುದು, ಒಳಾಂಗಣದಲ್ಲಿ ಹೆಚ್ಚು ಜನ ಸೇರದಿರುವುದು.. ಇವೆಲ್ಲ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕಾಗಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು