ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Food Day 2022 | ಮಹಿಳೆಯರ ಆಹಾರ ಸೇವನೆ ಮಿಥ್ಯೆ–ತಥ್ಯ

Last Updated 14 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಮಹಿಳೆಯರ ಜೈವಿಕ ಬದುಕಿನಲ್ಲಿ ಋತುಮತಿಯಾಗುವುದು, ಬಸುರಿ, ಬಾಣಂತನಗಳು ಬಹಳ ಪ್ರಮುಖ ಘಟ್ಟಗಳು. ಹಲವು ತಪ್ಪುಕಲ್ಪನೆಗಳಿಂದ ಮಹಿಳೆಯರಿಗೆ ಸತ್ವಯುತ ಆಹಾರ ಸಿಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂಥ ಸಮಸ್ಯೆಗಳು ಕಾಡುತ್ತವೆ. ಇದರ ಅಂಗವಾಗಿ ಮಹಿಳೆಯರು ಸೇವಿಸುವ ಆಹಾರದ ಸುತ್ತ ಇರುವ ಹಲವು ಮಿಥ್ಯೆಗಳ ಬಗ್ಗೆ ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿಯವರು ಇಲ್ಲಿ ಚರ್ಚಿಸಿದ್ದಾರೆ.

ಅವತ್ತು ಬೆಳಿಗ್ಗೆ ಬೆಳಿಗ್ಗೆಯೇ ಫೋನ್ ಮಾಡಿದ ಸುನಂದಮ್ಮ, ‘ಡಾಕ್ಟ್ರೆ, ಬಾಣಂತಿಯರು ಹೆಚ್ಚು ನೀರು ಕುಡಿಯಬಾರದು ಅಂತ ಹೇಳಿದರೂ ಸೊಸೆ ಮಾತೇ ಕೇಳೋದಿಲ್ಲ.ಬಾಳೆಹಣ್ಣು ತಿನ್ನಬಾರದು; ಹಸಿ ಮೈಯ ಬಾಣಂತಿ ಅಂದ್ರೂ ಕೇಳೋದಿಲ್ಲ’ ಅಂತ ಆತಂಕ ಹೇಳಿಕೊಂಡರು.

‘ಬಾಣಂತಿಯರು ನೀರು ಕುಡಿಯಬಾರದು ಅಂತ ಯಾರು ಹೇಳಿದ್ದು ನಿಮಗೆ’ ಅಂತ ಮರು ಪ್ರಶ್ನೆ ಹಾಕಿದೆ. ಅದಕ್ಕೆ ಸುನಂದಮ್ಮ ಅವರಮ್ಮ, ಅಜ್ಜಿ ಅಂತೆಲ್ಲ ಕತೆ ಹೇಳಿದ್ದರು.

ಇಂಥದ್ದೇ ಹತ್ತು ಹಲವು ಮಿಥ್ಯೆಗಳು ಆಹಾರ ಸುತ್ತ ಇವೆ. ಹೆಣ್ಣುಮಕ್ಕಳ ಜೈವಿಕ ಪ್ರಕ್ರಿಯೆಯಲ್ಲಿ ಋತುಮತಿಯಾಗುವುದು, ಬಸುರಿ, ಬಾಣಂತನಗಳು ಬಹಳ ಪ್ರಮುಖ ಘಟ್ಟಗಳು. ಆದರೆ, ಇಂಥ ಮಿಥ್ಯೆಗಳಿಂದಾಗಿ ಸರಿಯಾದ ಪ್ರಮಾಣದಲ್ಲಿ ಆಹಾರದ ಸತ್ವಗಳು ಸಿಗದೇ ಜೀವನಪರ್ಯಂತ ದೇಹದಲ್ಲಿ ಒಂದಲ್ಲ ಒಂದು ಕಡೆ ನೋವು ಅನುಭವಿಸುವುದು ಸಾಮಾನ್ಯವಾಗಿದೆ.

3 ಲೀಟರ್ ನೀರು ಕುಡಿಯಿರಿ

ನೀರು ಜೀವಜಲ. ಬಾಣಂತಿಯರನ್ನು ಇದರಿಂದ ದೂರ ಮಾಡಿದರೆ ಹೇಗೆ?. ಬಾಣಂತಿಯರು ಕನಿಷ್ಠ 3 ಲೀಟರ್ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ಎದೆಹಾಲಿನ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಜತೆಗೆಮಲಬದ್ಧತೆ, ಮೂಲವ್ಯಾಧಿಯಂಥ ಸಮಸ್ಯೆಗಳು ಕಾಡಬಹುದು.

ಬಾಳೆಹಣ್ಣು, ದ್ರಾಕ್ಷಿ ಸೇವನೆ ಕೂಡ ಬಾಣಂತನ ದಲ್ಲಿ ಮುಖ್ಯ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಮತ್ತು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಇದೆ. ಇವು ದೇಹಕ್ಕೆ ಪೋಷಣೆ ನೀಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನನ್ನ ಎರಡೂ ಬಾಣಂತನದಲ್ಲಿಯೂ ನಿತ್ಯ ಮೂರು ಲೀಟರ್ ನೀರು ಕುಡಿಯುತ್ತಿದ್ದೆ. ಬಾಳೆಹಣ್ಣು ದ್ರಾಕ್ಷಿ ತಿಂದಿದ್ದೇನೆ.

ಇದೊಂದು ಉದಾಹರಣೆಯಷ್ಟೆ. ಇಂಥದ್ದೇ ಹಲವಾರು ತಪ್ಪು ತಿಳಿವಳಿಕೆ ಗಳು ಅದರಲ್ಲೂ ಮಹಿಳೆಯರ ಆಹಾರ ಪದ್ಧತಿಯಲ್ಲಿ ತುಸು ಹೆಚ್ಚಾಗಿಯೇ ಇವೆ. ಸಸ್ಯಾಹಾರ ಮತ್ತು ಮಾಂಸಾಹಾರ ಸೇವನೆಯಲ್ಲೂ ಇಂಥ ತಪ್ಪು ತಿಳಿವಳಿಕೆಗಳು ಸಾಮಾನ್ಯ ಎನಿಸಿವೆ.

ಹಾರ್ಮೋನ್‌ನಲ್ಲಿ ವ್ಯತ್ಯಾಸವಾಗದು

ಋತುಸ್ರಾವದ ಆರಂಭದ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಮಾಂಸಾಹಾರ ನೀಡಬಾರದು. ಕೊಬ್ಬಿನಾಂಶ ಹೆಚ್ಚಿರುವುದರಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಯ ಉಂಟಾಗುತ್ತದೆ ಎನ್ನುವುದೆಲ್ಲ ಬರಿಯ ಊಹೆ.

ಋತುಸ್ರಾವದ ಆರಂಭದ ದಿನಗಳಲ್ಲಿ ದೇಹದ ಬೆಳವಣಿಗೆ ಕ್ಷಿಪ್ರವಾಗಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರೊಟೀನ್, ಮೇದಸ್ಸು ಬೇಕಾಗುತ್ತದೆ. ಮಾಂಸಾಹಾರ ಸೇವನೆಯಿಂದ ಇವೆಲ್ಲ ಸಿಗುತ್ತದೆ. ಜತೆಗೆ ವ್ಯಾಯಾಮ, ಆಟ, ಯೋಗದಲ್ಲಿ ಯಾವುದಾದರೂ ಒಂದನ್ನು ನಿಯಮಿತವಾಗಿ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಮೀನು ಮೊಟ್ಟೆಯಿಂದ ತಾಮಸ ಹೆಚ್ಚಲ್ಲ

‘ಗರ್ಭಿಣಿಯರು ಮೀನು, ಮೊಟ್ಟೆ ತಿಂದರೆ ಮಗು ಮಂದವಾಗುತ್ತದೆ. ತಾಮಸ ಹೆಚ್ಚುತ್ತದೆ’ ಎನ್ನುವುದು ಕೂಡ ಒಂದು ಮಿಥ್ಯೆ. ಗರ್ಭಿಣಿಯರು ಇಷ್ಟಪಟ್ಟರೆ ಮಾಂಸಾಹಾರ ಖಂಡಿತಾವಾಗಿಯೂ ಸೇವಿಸಬಹುದು. ಮಾಂಸಾಹಾರ ಅಭ್ಯಾಸವಿರುವ ಗರ್ಭಿಣಿಯರು ದೇಹದ ಪೋಷಣೆಗೆ ಮತ್ತು ಭ್ರೂಣದ ಬೆಳವಣಿಗೆಗೆ ನಾಲ್ಕನೇ ತಿಂಗಳಲ್ಲಿ ಮಾಂಸ ಸೇವನೆ ಮಾಡಬೇಕೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದರಿಂದ ಮಗುವಿನಲ್ಲಿ ತಾಮಸ ಗುಣವಾಗಲಿ ಮಂದವಾಗುವುದಾಗಲಿ ಯಾವುದೂ ಆಗುವುದಿಲ್ಲ.

‘ಗರ್ಭಿಣಿ ಮೊಟ್ಟೆ ತಿಂದರೆ, ಹುಟ್ಟುವ ಮಗುವಿನ ತಲೆಯಲ್ಲಿ ಕೂದಲಿರುವುದಿಲ್ಲ’ ಎನ್ನುವುದು ಇಂಥದ್ದೇ ಮತ್ತೊಂದು ತಪ್ಪು ಕಲ್ಪನೆ. ಅಂಥದ್ದೇನೂ ಇಲ್ಲ. ಮೊಟ್ಟೆಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಮೊಟ್ಟೆ ಸೇವಿಸಿದರೆ ಗರ್ಭಿಣಿಗೆ ಪೋಷಕಾಂಶ ದೊರೆಯುವುದರ ಜತೆಗೆ ಮಗುವಿನಲ್ಲಿ ಮೂಳೆ, ಚರ್ಮ, ಕೂದಲು ಬೆಳವಣಿಗೆ ಉತ್ತಮವಾಗಿರುತ್ತದೆ.

ಗರ್ಭಿಣಿಯರು ಪಪ್ಪಾಯ ತಿನ್ನಬಹುದು

ಗರ್ಭಿಣಿಯರು ಖಂಡಿತಾಗಿಯೂ ಪಪ್ಪಾಯ ಹಣ್ಣು ತಿನ್ನಬಹುದು. ಆದರೆ, ಯಾವ ತಿಂಗಳಿನಿಂದ ತಿನ್ನಬೇಕು ಎನ್ನುವುದರ ಬಗ್ಗೆ ಅರಿವಿರಬೇಕು. ಗರ್ಭ ಧರಿಸಿ ಆರಂಭದ ಮೂರು ತಿಂಗಳನ್ನು ಹೊರತುಪಡಿಸಿ ಉಳಿದ ತಿಂಗಳಲ್ಲಿ ಪಪ್ಪಾಯ ಹಣ್ಣು ತಿನ್ನಬಹುದು. ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಪ್ರತಿ ನಿತ್ಯ ಮನೆಯಲ್ಲಿಯೇ ಬೆಳೆದ ರುಚಿಕರ ಪಪ್ಪಾಯ ಹಣ್ಣನ್ನು ತಿಂದಿದ್ದೇನೆ. ನೈಸರ್ಗಿಕವಾಗಿಯೇ ಹೆರಿಗೆಯಾಯಿತು. ದಷ್ಟಪುಷ್ಟ ಮಗುವೂ ಜನಿಸಿತು.

ಆಹಾರ ಅಲರ್ಜಿ ಬಗ್ಗೆ ಎಚ್ಚರವಿರಲಿ

ಸಸ್ಯಾಹಾರಿಯಾಗಿರಲಿ, ಮಾಂಸಾಹಾರಿ ಯಾಗಿರಲಿ ಕೆಲವೊಂದು ಆಹಾರ ಪದಾರ್ಥಗಳು ದೇಹಕ್ಕೆ ಒಗ್ಗುವುದಿಲ್ಲ. ಪ್ರತಿ ಮನುಷ್ಯನೂ ಭಿನ್ನ. ಹಾಗಾಗಿ ಮಹಿಳೆಯರು ಆಹಾರ ಅಲರ್ಜಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಕೆಲವರಿಗೆ ಕಡಲೆಬೀಜ ಆದರೆ, ಇನ್ನು ಕೆಲವರಿಗೆ ಎಳ್ಳು ಆಗುವುದಿಲ್ಲ.ದೇಹದ ಒಗ್ಗದಿರುವ ಆಹಾರ ಪದಾರ್ಥ ಸೇವಿಸಿದಾಗ ಹಿಸ್ಟಮಿನ್ ಉತ್ಪತ್ತಿ ಅಧಿಕವಾಗಿ ತಕ್ಷಣ ದೇಹ ಪ್ರತಿಕ್ರಿಯೆ ತೋರಿಸುತ್ತದೆ.

ಆಹಾರ ಸೇವನೆ ವಿಚಾರದಲ್ಲಿ ಉಹಾಪೋಹ ಗಳಿಗೆ ಕಿವಿಗೊಡಬೇಡಿ. ಏನೇ ಸಂಶಯಗಳಿದ್ದರೂ ವೈದ್ಯರೂ, ಆಹಾರತಜ್ಞರನ್ನು ಸಂಪರ್ಕಿಸಿ ಪರಿಹರಿಸಿ ಕೊಳ್ಳಿ. ಯಾರದ್ದೋ ಮಾತನ್ನು ನಂಬಿ ಇಷ್ಟವಿಲ್ಲದ ಆಹಾರವನ್ನು ಸೇವಿಸುವುದಾಗಲಿ, ಇಷ್ಟವಿರುವ ಆಹಾರವನ್ನು ವರ್ಜ್ಯಿಸುವುದಾಗಲಿ ತಪ್ಪು.

ಎರಡರಲ್ಲೂ ಪ್ರೊಟೀನ್ ಇದೆ

‘ಡಾಕ್ಟ್ರೆ, ನನ್ನ ತಂಗಿ ಜಿಮ್‌ಗೆ ಹೋಗ್ತಾಳೆ. ದೇಹಕ್ಕೆ ಹೆಚ್ಚು ಪ್ರೊಟೀನ್‌ ಬೇಕಾಗುತ್ತದೆ, ಅದಕ್ಕೆ ಕೆಲವರು ಮೊಟ್ಟೆ ತಿನ್ನಿ ಅಂತ ಸಲಹೆ ನೀಡುತ್ತಾರಂತೆ. ನಾವು ಮೊಟ್ಟೆ ತಿನ್ನುವುದಿಲ್ಲ. ಸಸ್ಯಾಹಾರದಲ್ಲಿ ಹೆಚ್ಚು ಪ್ರೊಟೀನ್ ಸಿಗುವುದಿಲ್ಲವೇ ?’ ಇದು ಸಸ್ಯಾಹಾರಿಯೊಬ್ಬರ ಪ್ರಶ್ನೆ.

ಮಾಂಸಾಹಾರದಲ್ಲಿರುವಷ್ಟು ಸಸ್ಯಾಹಾರದಲ್ಲಿ ಪ್ರೊಟೀನ್ ಇರುವುದಿಲ್ಲ ಎನ್ನುವುದೇ ತಪ್ಪು ತಿಳಿವಳಿಕೆ. ಸಸ್ಯಾಹಾರ, ಮಾಂಸಾಹಾರ ಎರಡರಲ್ಲಿಯೂ ಇರುವ ಅಮೈನೊ ಆಮ್ಲಗಳನ್ನು ತನಗೆ ಬೇಕಾದಂತೆ ತನ್ನ ಆರೋಗ್ಯಕ್ಕೆ ಪೂರಕವಾಗಿ ಮಾರ್ಪಡಿಸಿಕೊಳ್ಳುವ ಚಾಣಕ್ಷತೆ ದೇಹಕ್ಕಿದೆ.

ದೇಹದಲ್ಲಿ ಹಾರ್ಮೋನುಗಳು, ಕಿಣ್ವಗಳು, ಕೊಲಾಜನ್‌ಗಳು, ಎಲಾಸ್ಟಿನ್‌ ಗಳು ರಚನೆಯಾಗಲು ಪ್ರೊಟೀನ್‌ನಲ್ಲಿರುವ ಅಮೈನೊ ಆಮ್ಲಗಳೇ ಕಾರಣ. ಪ್ರೊಟೀನ್ ಗುಣಮಟ್ಟವು ಅದರಲ್ಲಿರುವ ಅಮೈನೊ ಆಮ್ಲಗಳ ಪ್ರಮಾಣದ ಮೇಲೆ ನಿಂತಿದೆ.

ಮೊಟ್ಟೆ ಮತ್ತು ಹಾಲು ಎರಡರಲ್ಲೂ ಹೆಚ್ಚು ಅವಶ್ಯಕ ಅಮೈನೊ ಆಮ್ಲಗಳಿವೆ. ದೇಹಕ್ಕೆ ಸುಮಾರು 25ಕ್ಕೂ ಹೆಚ್ಚು ಅಮೈನೋ ಆಮ್ಲಗಳು ಬೇಕು. ಪ್ರತಿ ಜೀವಕಣಗಳ ಬೆಳವಣಿಗೆಗಳ ಇವು ಅವಶ್ಯ. ಉದಾ: ಮಾಂಸ, ಮೊಟ್ಟೆಗಳಲ್ಲಿರುವ ಅರ್ಜಿನೈನ್ ಅಮೈನೊ ಆಮ್ಲ, ಕುಸುಬಲಕ್ಕಿ, ಬಟಾಣಿ, ಹೆಸರುಕಾಳು, ಕಡಲೆಬೀಜ(ಶೇಂಗಾ)ದಲ್ಲಿಯೂ ಇರುತ್ತದೆ. ಹಂದಿ ಮಾಂಸದಲ್ಲಿರುವ ಹಿಸ್ಟಡಿನ್, ಚೀಸ್, ಎಳ್ಳು, ಕುಸುಬಲಕ್ಕಿ, ತೊಗರಿಬೇಳೆ. ಮೊಟ್ಟೆಯಲ್ಲಿರುವ ಸಿಸ್ಟಿನ್, ಟೈರೊಸಿನ್, ಥ್ರಿಂಯೋನೈನ್‌ಗಳು ಕಡಲೆಬೀಜ, ಹಾಲು, ಬಾದಾಮಿ, ಗೋಧಿಹಿಟ್ಟು, ರಾಗಿ, ಎಳ್ಳುಗಳಲ್ಲಿಯೂ ದೊರೆಯುತ್ತದೆ. ಹೀಗೆ ಅನೇಕ ಅಮೈನೊ ಆಮ್ಲಗಳು ಸಸ್ಯಹಾರದಲ್ಲಿಯೂ ದೊರೆಯುತ್ತವೆ. ಅವರವರ ದೇಹದ ತೂಕಕ್ಕನುಗುಣವಾಗಿ ಒಂದು ಕೆ.ಜಿಗೆ ಒಂದು ಗ್ರಾಂ ಪ್ರೊಟೀನ್ ಬೇಕು. ಆನೆ ಅತ್ಯಂತ ಬಲಶಾಲಿ. ಅದು ಸಸ್ಯಾಹಾರಿ ಅಲ್ಲವೇ?

ಸಮತೋಲಿತ ಆಹಾರ ಅಗತ್ಯ

ಮಹಿಳೆಯರಲ್ಲಿ ಅಪೌಷ್ಟಿಕತೆ, ರಕ್ತಹೀನತೆಯ ಸಮಸ್ಯೆಗಳು ಅಧಿಕ. ದೇಶದಲ್ಲಿ ಪ್ರತಿ ನೂರು ಮಹಿಳೆಯರಲ್ಲಿ 42 ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ, ಸಮತೋಲನ ಆಹಾರ ಸೇವಿಸುವುದು ಕಡಿಮೆಯಾಗಿರುವುದು.

ಸಾಮಾನ್ಯ ಮಹಿಳೆಯರಿಗಿಂತ ಗರ್ಭಿಣಿ, ಬಾಣಂತಿಯರಿಗೆ ಇನ್ನೂ ಹೆಚ್ಚಿನ ಆಹಾರಾಂಶಗಳು ಬೇಕಾಗುತ್ತವೆ. ಇಂಥ ಸಮಯದಲ್ಲಿ ದೇಹಕ್ಕೆ ಪೋಷಕಾಂಶಗಳು ಸರಿಯಾಗಿ ಪೂರೈಕೆಯಾಗದೇ ರಕ್ತಹೀನತೆ, ವಿಟಮಿನ್‌ಗಳ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಕಡ್ಡಾಯವಾಗಿ ಸಮತೋಲಿತ ಆಹಾರ ಸೇವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT