ಸೋಮವಾರ, ಏಪ್ರಿಲ್ 19, 2021
23 °C
ವಿಶ್ವ ಆರೋಗ್ಯ ದಿನಾಚರಣೆ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹೊಣೆ

World Health Day: ಕೊರೊನಾ ಗೆಲ್ಲಲು ಆರೋಗ್ಯಕರ ಜೀವನಶೈಲಿಯೇ ಅಸ್ತ್ರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಜಾಗತಿಕ ಕಾಲಘಟ್ಟದಲ್ಲಿ ಅಭಿವೃದ್ಧಿಯೇ ಮೂಲ ಮಂತ್ರವೆಂದು ಜಪಿಸುತ್ತಾ ಶರವೇಗದಲ್ಲಿ ಓಡುತ್ತಿದ್ದ ಇಡೀ ಪ್ರಪಂಚವನ್ನು ಕೊರೊನಾ ಎಂಬ ಸಣ್ಣ ಸೋಂಕು ತಡೆದು ನಿಲ್ಲಿಸಿಬಿಟ್ಟಿದೆ. ಆರೋಗ್ಯದ ಹೊರತು ಬೇರಾವುದೂ ಮುಖ್ಯವಲ್ಲ ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾಗತೊಡಗಿದೆ. ‘ಏಪ್ರಿಲ್ 7’ ವಿಶ್ವ ಆರೋಗ್ಯ ದಿನ. ನಾವೆಲ್ಲಾ ‍‘ಆರೋಗ್ಯವೇ ಭಾಗ್ಯ’ ಎಂಬ ನುಡಿಮುತ್ತನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಕಳೆದ 50 ವರ್ಷಗಳಿಂದ ಈ ದಿನದಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಆರೋಗ್ಯದ ಮಹತ್ವ ಸಾರಲು ಒಂದೊಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಅರ್ಥ ಪೂರ್ಣವನ್ನಾಗಿ ಆಚರಿಸುತ್ತಿದೆ. ಈ ವರ್ಷ ಕೂಡ ‘ಉತ್ತಮ ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಿದೆ. ಕಳೆದ ಒಂದು ವರ್ಷದಿಂದ ಕೊರೊನಾ ನಮ್ಮನ್ನೆಲ್ಲಾ ಕಾಡುತ್ತಿದೆ. ಈ ವೈರಸ್ ಹೋಗಲಾಡಿಸುವುದಕ್ಕಿಂತ ಇದರೊಂದಿಗೆ ಆರೋಗ್ಯವಾಗಿರಲು ನಾವು ಮಾಡಬೇಕಾದ ಕೆಲಸಗಳೇನು ಎಂಬುದರತ್ತ ಗಮನಕೊಡಬೇಕು.

ವಿಶ್ವದೆಲ್ಲೆಡೆ ಕೊರೊನಾ ಕೆನ್ನಾಲಿಗೆ ಚಾಚಿದೆ. ಇದರಿಂದ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು, ವೈದ್ಯಕೀಯ ಸೌಲಭ್ಯದ ಜೊತೆಗೆ, ಉತ್ತಮ ಆರೋಗ್ಯ ರೂಪಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ . ಹೀಗಾಗಿ ಆಸ್ಪತ್ರೆಗೆ ತೆರಳುವುದಕ್ಕಿಂತ, ಕೊರೊನಾ ಬರದಂತೆಯೇ ತಡೆಯುವುದು ಹೇಗೆ ಎಂಬುದರತ್ತ ನಾವೆಲ್ಲರೂ ಗಮನಹರಿಸಬೇಕು. ಆರೋಗ್ಯವೆಂದಾಕ್ಷಣ ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಒಂದೇ ನಾಣ್ಯದ ಎರಡು ಮುಖಗಳಂತಿರುವ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈಗಾಗಲೇ 2021ರ ವರ್ಷಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಈ ವರ್ಷವಾದರೂ ಉತ್ತಮ ಆರೋಗ್ಯ ಹೊಂದಲು ಕೆಲ ಸಿದ್ಧ ಸೂತ್ರಗಳನ್ನ ಅಳವಡಿಸಿಕೊಳ್ಳೋಣ.

ನೀರು ಕುಡಿಯಿರಿ, ಆರೋಗ್ಯವಾಗಿರಿ

ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಮತ್ತು ಕೀಲುಗಳನ್ನು ನಯಗೊಳಿಸುವಲ್ಲಿ ನೀರಿನ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹ ಶೇ.70 ರಷ್ಟು ನೀರಿನಿಂದಲೇ ಕೂಡಿರುತ್ತದೆ, ಹೀಗಾಗಿ ನೀರು ಕುಡಿಯುವುದು ಅತ್ಯವಶ್ಯಕ. ಬೇಸಿಗೆಯಾದ್ದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಬಹುದು. ಜೊತೆಗೆ, ನೀರು ಕುಡಿಯುವುದರಿಂದ ಬಹುತೇಕ ಕಾಯಿಲೆಗಳಿಂದ ದೂರ ಇರಬಹುದು. ಹೀಗಾಗಿ ನೀರು ಕುಡಿಯುವುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಪ್ರತಿದಿನ ಕನಿಷ್ಠ 8  ಗ್ಲಾಸ್ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ನೀರು ಕುಡಿಯುವುದನ್ನೇ ಮರೆಯುತ್ತೇನೆಂದರೆ, ನೆನಪಿಸುವುದಕ್ಕಾಗಿಯೇ ಒಂದಷ್ಟು ಮೊಬೈಲ್ ಆಪ್‍ಗಳು, ನೀರು ಕುಡಿಯುವುದನ್ನು ರಿಮೈಂಡ್ ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ. ಅದರ ಪ್ರಯೋಜನ ಪಡೆದುಕೊಳ್ಳಿ.

ಕೂರುವ ಭಂಗಿಯೂ ಮುಖ್ಯ

ಕೊರೊನಾ ಮಹಿಮೆಯಿಂದ ಬಹುತೇಕರು ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮನೆಯಲ್ಲಿ ಕೆಲಸ ಮಾಡುವುದೆಂದರೆ, ನಮ್ಮಿಚ್ಛೆಯಂತೆ ಕೂತುಕೊಂಡು ಕೆಲಸ ಮಾಡುತ್ತೇವೆ. ಇದರಿಂದ ಬೆನ್ನು ನೋವು ಹೆಚ್ಚು ಬಾಧಿಸುವುದರಲ್ಲಿ ಅನುಮಾನವಿಲ್ಲ. ನಾವು ಹೆಚ್ಚು ಸಮಯ ಹೇಗೆ ಕೂರುತ್ತೇವೆ ಎನ್ನುವುದರಿಂದಲೂ ನಮ್ಮ ಆರೋಗ್ಯ ನಿಂತಿರುತ್ತದೆ. ಹೀಗಾಗಿ ಮನೆಯಲ್ಲಿ ಕೆಲಸ ಮಾಡುವ ಭಂಗಿ ಯಾವಾಗಲೂ ಸರಿಯಾಗಿಯೇ ಇರಬೇಕು, ಇಲ್ಲವಾದಲ್ಲಿ ಹಲವು ರೋಗಗಳಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ.

ನಿಯಮಿತ ವ್ಯಾಯಾಮ

ಈಗಂತೂ ಮನೆಯಲ್ಲಿಯೇ ಇರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿಬಿಟ್ಟಿವೆ. ಇದರಿಂದ ನಮ್ಮ ದೇಹ ರೋಗಗಳ ತವರೂರಾಗಬಹುದು. ಹೀಗಾಗಿ ನಮ್ಮ ದೇಹಕ್ಕೆ ನಿಯಮಿತ ವ್ಯಾಯಾಮ ಅತ್ಯಂತ ಅವಶ್ಯಕ. ಕನಿಷ್ಠ 30 ನಿಮಿಷಗಳಾದರೂ ಜೋರಾಗಿ ನಡೆಯುವ ಅಭ್ಯಾಸ ಇಟ್ಟುಕೊಳ್ಳಬೇಕು, ಜಿಮ್, ಯೋಗ, ಇತರೆ ದೈಹಿಕ ಚಟುವಟಿಕೆಯನ್ನು ರೂಢಿಸಿಕೊಳ್ಳಲು ತಡ ಮಾಡಬೇಡಿ. ಏಕೆಂದರೆ ನಮ್ಮ ಸುಂದರ ದೇಹ, ಆರೋಗ್ಯವಾಗಿದ್ದರಷ್ಟೇ ನೋಡಲು ಚೆಂದ.

ಆರೋಗ್ಯಕರ ಆಹಾರ ಸೇವನೆ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವನೆ ಅತಿ ಮುಖ್ಯ. ಬೆಳಗಿನ ಉಪಾಹಾರ ದಿನದ ಪ್ರಮುಖ ಊಟವಾಗಿರುತ್ತದೆ. ಉತ್ತಮ ಉಪಾಹಾರ ದಿನದ ಮನಸ್ಥಿತಿಯನ್ನು ಖುಷಿಯಾಗಿರುವಂತೆ ಮಾಡುತ್ತದೆ. ನೀವು ಎದ್ದ ಎರಡು ಗಂಟೆ ಅವಧಿಯಲ್ಲಿ ನಿಮ್ಮ ಉಪಹಾರ ಮುಗಿಸಿಕೊಳ್ಳಿ.  ಬೆಳಗಿನ ಉಪಾಹಾರದಿಂದ ನಿಮ್ಮ ಮಿದುಳು ಚುರುಕುಗೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ, ತರಕಾರಿ, ಹಣ್ಣು, ಬೆಳೆ-ಕಾಳುಗಳನ್ನು ಯಥೇಚ್ಚವಾಗಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ವಿಟಮಿನ್‌ಗಳು ಸಿಗುವುದರಿಂದ ನೀವು ಆರೋಗ್ಯವಾಗಿರಬಹುದು. ಆದಷ್ಟು ಜಂಕ್ ಫುಡ್‍ನಿಂದ ದೂರವಿರಿ. 

ಮಾನಸಿಕ ವ್ಯಾಯಾಮ

ದೈಹಿಕ ಆರೋಗ್ಯದ ಸರಿಸಮವಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಮಾನಸಿಕ ಆರೋಗ್ಯಕ್ಕೆ ಧ್ಯಾನ ಮದ್ದು. ದಿನದಲ್ಲಿ 10 ನಿಮಿಷಗಳ ಕಾಲ ಧ್ಯಾನ ಮಾಡಿದರೂ ನಿಮ್ಮ ಮನಸ್ಸಿಗೆ ವ್ಯಾಯಾಮವಾಗಲಿದೆ. ಅರೇ, ಮನಸ್ಸಿಗೂ ವ್ಯಾಯಾಮವೇ ಎಂದುಕೊಳ್ಳಬೇಡಿ, ಮನಸ್ಸು ಖುಷಿಯಾಗಿದ್ದರಲ್ಲವೇ ನಮ್ಮ ಮೂಡ್ ಸಹ ಖುಷಿಯಾಗಿರಲು ಸಾಧ್ಯ. ಇಡೀ ದಿನದ ಖುಷಿಯಾಗಿರಲು 10 ನಿಮಿಷ ಇಡಬಹುದಲ್ಲವೇ.

ಇವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮಾಡಲೇ ಬೇಕಾದ, ಅನುಸರಿಸಲೇ ಬೇಕಾದ ಕೆಲವು ಟಿಪ್ಸ್. ಕೊರೊನಾ ಭಯ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಕೊರೊನಾ ಗೆಲ್ಲಲು ನಮ್ಮ ಬಳಿ ಇರುವ ಈ ಅಸ್ತ್ರವನ್ನು ನಾವು ಬಳಸಿ, ಈ ಯುದ್ಧದಲ್ಲಿ ಗೆಲ್ಲೋಣ.

– ಡಾ.ಪೃಥು ನರೇಂದ್ರ ಧೇಕನೆ, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು