ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಜಯಿಸೋಣ | ಯೋಗಿಕ ತಂತ್ರ ಅತ್ಯುತ್ತಮ ಮಾರ್ಗ

Last Updated 2 ಜುಲೈ 2020, 4:41 IST
ಅಕ್ಷರ ಗಾತ್ರ

ಕೊರೊನಾ ಹರಡುತ್ತಿರುವ ಹೊತ್ತಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಮಾನಸಿಕ ಧೈರ್ಯ ತುಂಬಿಕೊಳ್ಳಲುಯೋಗದ ತಂತ್ರಗಳು ಅತ್ಯುತ್ತಮ ಮಾರ್ಗ.

ಕೋವಿಡ್ ತಂದಿತ್ತಿರುವ‌ ಬಿಕ್ಕಟ್ಟು ಎದುರಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತರಾಗಿರುವುದು ಅಗತ್ಯ. ಸೋಂಕಿನಿಂದಾಗಿ ಮನಸ್ಸಿನ ಮೇಲೆ ಆಗುವ ಒತ್ತಡದಿಂದ ಹೊರಬರಲು, ಧನಾತ್ಮಕ ಶಕ್ತಿ ವೃದ್ಧಿಸಿಕೊಳ್ಳಲು, ಮಾನಸಿಕ ಸಮತೋಲನ ಕಾಪಾಡಲು ಯೋಗ ಪರಿಣಾಮಕಾರಿ ಮಾರ್ಗ.

ಪ್ರಾಣಾಯಾಮದಿಂದ ಕೊರೊನಾ ನಿಗ್ರಹ ಸಾಧ್ಯವಿದೆ. ‘ಉಸಿರಾಟದ ನಿಯಂತ್ರಣ’ವೇ ಪ್ರಾಣಾಯಾಮ; ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಇದು ಸಿದ್ಧ ಸೂತ್ರ. ಪ್ರಾಣಾಯಾಮದ ಮೂಲಕ ಜೀವಶಕ್ತಿಯ ಲಯದ ಮೇಲೆ ನಿಯಂತ್ರಣ ಸಾಧಿಸಿ, ದೇಹ ಹಾಗೂ ಮನಸ್ಸಿನ ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಪ್ರಾಣಾಯಾಮದಲ್ಲಿ ಭಸ್ತ್ರೀಕಾ, ನಾಡಿ ಶುದ್ದಿ (ಅನುಲೋಪ, ವಿಲೋಮ) ಭ್ರಾಮರಿ ತಂತ್ರಗಳಿವೆ. ಈಗಿನ ಸ್ಥಿತಿಯಲ್ಲಿ ಭ್ರಾಮರಿ ಪ್ರಾಣಾಯಾಮ ಅತ್ಯಂತ ಸೂಕ್ತವಾಗಿದೆ.

ಪ್ರಾಣಾಯಾಮ ಪೂರಕ ಅಥವಾ ಉಚ್ಛ್ವಾಸ (ಉಸಿರು ಒಳಗೆ ತೆಗೆದುಕೊಳ್ಳುವುದು), ಕುಂಭಕ (ಉಚ್ಛ್ವಾಸದ ಉಸಿರು ಒಳಗೇ ಹಿಡಿದಿಟ್ಟುಕೊಳ್ಳುವುದು), ರೇಚಕ ಅಥವಾ ನಿಶ್ವಾಸ (ಉಸಿರು ಹೊರಗೆ ಬಿಡುವುದು) ಎಂಬ ಅಂಶ
ಗಳಿವೆ. ನಿಧಾನಗತಿಯ ಆಳವಾದ ಉಚ್ಛ್ವಾಸದಿಂದ ದೇಹಕ್ಕೆ ಸಾಕಾಗುವಷ್ಟು ಆಮ್ಲಜನಕ ಒಳಗೆ ಎಳೆದುಕೊಳ್ಳಲು ಸಾಧ್ಯವಾಗುತ್ತದೆ.

ನಂತರ ಕುಂಭಕದ ಸ್ಥಿತಿಯಲ್ಲಿ ಉಚ್ಛ್ವಾಸದ ಉಸಿರು ಒಳಗೇ ಹಿಡಿದಿಟ್ಟುಕೊಳ್ಳುವುದರಿಂದ ದೇಹ ಅಗತ್ಯವಿರುವಷ್ಟು ಆಮ್ಲಜನಕ ಹೀರಿಕೊಳ್ಳುತ್ತದೆ. ನಿಶ್ವಾಸ ಹಂತದಲ್ಲಿ ಶ್ವಾಸಕೋಶಗಳ ಮೂಲಕ ನಿಧಾನವಾಗಿ ಬಿಡುವ ಶ್ವಾಸದಿಂದ ದೇಹದಲ್ಲಿನ ಕಲ್ಮಶಗಳು ಹೊರಹಾಕಲ್ಪಡುತ್ತವೆ.

ಯೋಗಿಕ ತಂತ್ರವಾದ ‘ನೇತಿ ಕ್ರಿಯೆ‘ ಮೂಗಿನ ಹೊರಳೆಗಳಿಂದ ಗಂಟಲಿನವರೆಗಿನ ಶಾಸ್ವಕೋಶವನ್ನು ಶುಚಿಗೊಳಿಸುತ್ತದೆ. ‘ಕಪಾಲಭಾತಿ‘ ಶ್ವಾಸ ಮಾರ್ಗವನ್ನು ಸ್ವಚ್ಛಗೊಳಿಸಿ (ಮೂಗಿನಿಂದ ಶ್ವಾಸಕೋಶದವರೆಗೆ) ಮಿದುಳಿನ ಜೀವಕೋಶಗಳನ್ನು, ಉಸಿರಾಟದ ಅವಯವಗಳು ಮತ್ತು ನರಮಂಡಲವನ್ನು ಸದಾ ಸಕ್ರಿಯವಾಗಿರಿಸುತ್ತದೆ. ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡ ಕಡಿಮೆ ಮಾಡಬಹುದು. ಆದರೆ, ಯಾವುದೇ ಯೋಗಿಕ ತಂತ್ರವನ್ನು ಯೋಗ ಶಿಕ್ಷಕರಿಂದಲೇ ಕಲಿಯುವುದು ಸೂಕ್ತ.

*
ಮರ್ಕಟವಾದ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ‘ಪ್ರಾಣ’ ಅರ್ಥಾತ್‌ ‘ಉಸಿರು’ ಮುಖ್ಯ ವಾಗುತ್ತದೆ. ಯೋಗದಲ್ಲಿ ಆಯಸ್ಸುನ್ನು ಉಸಿರಾಟ ನಿರ್ಧರಿಸುತ್ತದೆ.‌ ಹೀಗಾಗಿ, ನಿಧಾನಗತಿಯ ಉಸಿರಾಟಕ್ಕೆ ಯೋಗಿಕ ತಂತ್ರ ಸಿದ್ಧ ಸೂತ್ರ.
-ಮಾನಸ ರಾವ್‌, ಯೋಗ ಥೆರಪಿಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT