ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಾಂಗ ನೀತಿ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ನಡೆಯುತ್ತಿರುವ ಮೋದಿ: ಖರ್ಗೆ ಟೀಕೆ

Published 9 ಜನವರಿ 2024, 6:12 IST
Last Updated 9 ಜನವರಿ 2024, 6:12 IST
ಅಕ್ಷರ ಗಾತ್ರ

ಕಲಬುರಗಿ: 'ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ನೆರೆಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಂದಿರಾಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ. ಅಂತರರಾಷ್ಟ್ರೀಯ ನೀತಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದರು.

'ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ. ನಾವು ನಮ್ಮ ನೆರೆಹೊರೆಯ ದೇಶದವರನ್ನು ಬದಲಾಯಿಸಲಾಗುವುದಿಲ್ಲ. ಹಾಗಾಗಿ ಅವರೊಂದಿಗೆ ಚೆನ್ನಾಗಿರಬೇಕು. ನಾವು ಒಂದಾಗಿ ಹೋಗಬೇಕು. ಅವರು ನಮ್ಮ ಮೈಮೇಲೆ ಬಂದಾಗ ದೇಶಕ್ಕಾಗಿ ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ' ಎಂದು ಹೇಳಿದರು.

ಮೂವರು ಡಿಸಿಎಂ ಪ್ರಸ್ತಾವ ಇಲ್ಲ

ರಾಜ್ಯದಲ್ಲಿ ಮೂವರು ಡಿಸಿಎಂ ವಿಚಾರದ ಕುರಿತು ಪ್ರತಿಕ್ರಿಯಿಸಿದ ಖರ್ಗೆ ಅವರು, ಈ ವಿಚಾರ ನೀವು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿ. ನಮ್ಮ‌ ಮುಂದೆ ಇಂತಹ ಪ್ರಸ್ತಾವ ಇಲ್ಲ. ಇದೆಲ್ಲಾ ಉಹಾಪೋಹ. ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರ ಬರಬಾರದು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆಗೆ, ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. ನಮ್ಮ ಗುರಿ ಮುಟ್ಟುವರೆಗೆ ಇಂತಹದಕ್ಕೆ ಅವಕಾಶ ಕೊಡಬಾರದು' ಎಂದರು.

'ಇಂಡಿಯಾ' ಒಕ್ಕೂಟ ಒಗ್ಗಟ್ಟಾಗಿದೆ'

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ನಾಳೆ ದೆಹಲಿಯಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ತಿಳಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಹಾಕಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು. ಲೋಕಸಭಾ ಚುನಾವಣೆ ಗೆಲ್ಲಲು 'ಇಂಡಿಯಾ' ಒಕ್ಕೂಟ ಒಂದಾಗಿ, ಒಗ್ಗಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಮತ್ತು ಅದೇ ರೀತಿ ಒಂದಾಗಿ ಕೆಲಸ ನಿರ್ವಹಿಸುತ್ತೇವೆ. ನಾಳೆ ದೆಹಲಿಯಲ್ಲಿ ಪಕ್ಷದ ವಿವಿಧ ಘಟಕಗಳ ಸಭೆ ಕರೆದಿದ್ದೇವೆ. ಎಲ್ಲಾ ಮತಕ್ಷೇತ್ರಗಳಿಗೆ ಈಗಾಗಲೇ ವೀಕ್ಷಕರನ್ನು ನೇಮಕ ಮಾಡಿದ್ದೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT