2025ರ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯು ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಎಂಬುದು ಈಗ ಸ್ಪಷ್ಟವಾಗಿದೆ. ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಇಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ. ಕೇಜ್ರಿವಾಲ್ ನಿಲುವಿಗೆ ಎಎಪಿಯ ಇತರ ಮುಖಂಡರೂ ಸಹಮತ ವ್ಯಕ್ತಪಡಿಸಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸಿ ಜಯ ಗಳಿಸಿರುವ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ತನಗೆ ಇಲ್ಲ ಎಂದು ಎಎಪಿ ಹೇಳಿದೆ.

ಎಎಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡತೊಡಗಿವೆ. ಸಂಸದರಾಗಿದ್ದ ಸಂದೀಪ್ ದೀಕ್ಷಿತ್ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹುರಿಯಾಳಾಗಿ, ಎಎಪಿಯ ಕೇಜ್ರಿವಾಲ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಿಂದ ಗೊತ್ತಾಗುತ್ತದೆ. ದೆಹಲಿಯ ಉಪಮುಖ್ಯಮಂತ್ರಿ ಆಗಿದ್ದ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಕ್ಷೇತ್ರ ಬದಲಾವಣೆ ಮಾಡಿದ್ದು, ಸುರಕ್ಷಿತ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಈ ನಡೆಯು ಟೀಕೆಗಳಿಗೂ ಆಹಾರವಾಗಿದೆ. ದೆಹಲಿಯ ಇತರ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದಿಂದ ಯಾರು ಕಣದಲ್ಲಿ ಇರಲಿದ್ದಾರೆ ಎಂಬುದು ಶೀಘ್ರವೇ ಸ್ಪಷ್ಟವಾಗಲಿದೆ.

ವಿಧಾನಸಭಾ ಚುನಾವಣೆಯು ಫೆಬ್ರುವರಿಯಲ್ಲಿ ನಡೆಯುವ ನಿರೀಕ್ಷೆ ಇದೆ. ಆದರೆ ಚುನಾವಣಾ ಪ್ರಚಾರ ಈಗಾಗಲೇ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಿತ್ರಪಕ್ಷಗಳಾಗಿ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಮತ್ತು ಎಎಪಿ ಈಗ ಎದುರಾಳಿಗಳಾಗಿ ಕಣದಲ್ಲಿ ಇರಲಿವೆ. ಬಹುಶಃ, ಮೈತ್ರಿಯು ಎರಡೂ ಪಕ್ಷಗಳಿಗೆ ಹೆಚ್ಚಿನ ಲಾಭ ತಂದುಕೊಡದ ಕಾರಣಕ್ಕೆ ಅವು ಈ ತೀರ್ಮಾನಕ್ಕೆ ಬಂದಿರಬಹುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೆಹಲಿಯ ಎಲ್ಲ ಏಳು ಸ್ಥಾನಗಳಲ್ಲಿ ಗೆದ್ದಿದೆ, ಅಂದಾಜು ಶೇಕಡ 55ರಷ್ಟು ಮತಗಳನ್ನು ಪಡೆದಿದೆ. ಕಾಂಗ್ರೆಸ್ ಮತ್ತು ಎಎಪಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಇವೆಯಾದರೂ ಅವುಗಳ ನಡುವೆ ಪರಸ್ಪರ ಸಹಕಾರಕ್ಕಿಂತ ಸ್ಪರ್ಧೆಯೇ ಹೆಚ್ಚಿತ್ತು.

ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಯಿಂದ ತನಗೆ ನಿರ್ದಿಷ್ಟವಾಗಿ ಸಿಗಬಹುದಾದ ಪ್ರಯೋಜನ ಏನು ಎಂಬುದು ಎಎಪಿಗೆ ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ತನ್ನ ಕೆಲವು ಮತದಾರರು ದೂರ ಸರಿಯಬಹುದು ಎಂದು ಎಎಪಿಗೆ ಅನ್ನಿಸಿರಬಹುದು. ಕೆಲವು ವಿಷಯಗಳಲ್ಲಿ ನಿರ್ದಿಷ್ಟವಾದ ನಿಲುವು ತಳೆಯುವ ಮೂಲಕ ಹಿಂದೂ ಮತಬ್ಯಾಂಕ್ ಸೆಳೆಯುವ ಯತ್ನವನ್ನು ಎಎಪಿ ನಡೆಸಿದೆ. ಆ ಮತಗಳನ್ನು ಎಎಪಿ ಕಳೆದುಕೊಂಡರೆ ಅದರ ಲಾಭ ಬಿಜೆಪಿಗೆ ಸಿಗಬಹುದು. ತನ್ನ ನೇತೃತ್ವದ ಸರ್ಕಾರದ ಸಾಧನೆಗಳು, ತನ್ನ ಮುಖಂಡರನ್ನು ಕೇಂದ್ರದ ತನಿಖಾ ಸಂಸ್ಥೆಗಳು ಕಿರುಕುಳಕ್ಕೆ ಗುರಿಪಡಿಸಿದ್ದುದು, ಕೇಂದ್ರ ಸರ್ಕಾರದ ಜೊತೆಗಿನ ಸಂಘರ್ಷವನ್ನು ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಎಎಪಿ ತೀರ್ಮಾನಿಸಿರುವಂತೆ ಕಾಣುತ್ತಿದೆ.

ಅಧಿಕಾರಕ್ಕೆ ಮರಳಿದರೆ ಮಹಿಳೆಯರಿಗೆ ಕೆಲವು ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಕೆಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಎಎಪಿ ಘೋಷಿಸಿದೆ. ಹಾಲಿ ಶಾಸಕರ ಪೈಕಿ ಮೂರನೆಯ ಒಂದರಷ್ಟು ಮಂದಿಯನ್ನು ಕೈಬಿಟ್ಟಿರುವ ಎಎಪಿಯು ಬಿಜೆಪಿ ಹಾಗೂ ಕಾಂಗ್ರೆಸ್ಸಿನಿಂದ ಬಂದಿರುವ ಕೆಲವರಿಗೆ ಟಿಕೆಟ್ ನೀಡಿದೆ. ತತ್ವ ಆಧಾರಿತ ರಾಜಕಾರಣ ತನ್ನದು ಎಂದು ಎಎಪಿ ಹೇಳಿಕೊಳ್ಳುತ್ತದೆ ಯಾದರೂ ಇಂತಹ ಕೆಲವು ಹೊಂದಾಣಿಕೆಗಳನ್ನು ಆ ಪಕ್ಷವು ಮಾಡಿಕೊಂಡಿದೆ.

ಆಡಳಿತವಿರೋಧಿ ಅಲೆ, ಎಎಪಿ ನೇತೃತ್ವದ ಸರ್ಕಾರದ ವಿರುದ್ಧವಾಗಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಪ್ರಯೋಜನವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಯತ್ನ ನಡೆಸಿವೆ. ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ. ಹೀಗಾಗಿ ಅಲ್ಲಿ ಅಸ್ತಿತ್ವ ಸ್ಥಾಪನೆಗೆ ಕಾಂಗ್ರೆಸ್ ಯತ್ನ ನಡೆಸಲಿದೆ. ಆದರೆ ಬಿಜೆಪಿ ಹೆಚ್ಚು ಮಹತ್ವಾಕಾಂಕ್ಷೆ ಹೊಂದಿದೆ. ಅದು ಎಎಪಿಗೆ ಪ್ರಬಲ ಪೈಪೋಟಿ ನೀಡಲು ಎಲ್ಲ ಬಗೆಯ ಪ್ರಯತ್ನ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.