ಗೌರವ ಸಂಭಾವನೆ ಪಡೆದು ಹಲವು ವರ್ಷಗಳಿಂದ ದುಡಿದಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬೀಳದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ನೈತಿಕ ಹೊಣೆಗಾರಿಕೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡುವವರಿಗೆ ‘ವಿಶ್ವವಿದ್ಯಾಲಯ ಅನುದಾನ ಆಯೋಗ’ (ಯುಜಿಸಿ) ರೂಪಿಸಿರುವ ನಿಯಮ, ರಾಜ್ಯದ ಸುಮಾರು 5,000 ಅತಿಥಿ ಉಪನ್ಯಾಸಕರ ಭವಿಷ್ಯವನ್ನು ಅತಂತ್ರಸ್ಥಿತಿಗೆ ಸಿಲುಕಿಸಿದೆ. ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಹೊಂದುವವರು ಸ್ನಾತಕೋತ್ತರ ಪದವಿಯೊಂದಿಗೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ–ಸೆಟ್) ತೇರ್ಗಡೆಯಾಗಿರಬೇಕು ಅಥವಾ ಪಿಎಚ್.ಡಿ ಪಡೆದಿರಬೇಕು ಎನ್ನುವುದು ಯುಜಿಸಿ ಗೊತ್ತುಪಡಿಸಿರುವ ಮಾನದಂಡ. ಆದರೆ, ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವವರಲ್ಲಿ ಬಹುತೇಕರು ಸ್ನಾತಕೋತ್ತರ ಪದವಿಯನ್ನಷ್ಟೇ ಹೊಂದಿದ್ದು, ಅವರೀಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ಸೂಚಿಸಿರುವ ಮಾನದಂಡಗಳನ್ನೇ ಅತಿಥಿ ಉಪನ್ಯಾಸಕರ ಆಯ್ಕೆಗೂ ಅನ್ವಯಿಸಬೇಕು ಎಂದು ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಸಮಸ್ಯೆ ಕಗ್ಗಂಟಾಗಲು ಕಾರಣವಾಗಿದೆ. ಲಭ್ಯವಿರುವ ಅತಿಥಿ ಉಪನ್ಯಾಸಕ ಸ್ಥಾನಗಳ ಸಂಖ್ಯೆಗಿಂತಲೂ ಯುಜಿಸಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಅತಿಥಿ ಉಪನ್ಯಾಸಕರ ಹುದ್ದೆ ಪಡೆದುಕೊಳ್ಳಲು ತೀವ್ರ ಪೈಪೋಟಿಯೂ ಇದೆ. ಅನುಭವ ಮತ್ತು ಅರ್ಹತೆಯ ನಡುವಿನ ಕಾನೂನು ಹೋರಾಟದಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನೂ ಗಮನಿಸಬೇಕಾಗಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ, ದೀರ್ಘ ಕಾಲದಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಮುಂದಾಗಿದೆ. 2024–25ನೇ ಸಾಲಿನಲ್ಲಿ ಯುಜಿಸಿ ನಿಗದಿ ಮಾಡಿರುವ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ಸೇವೆಯನ್ನು ಸರ್ಕಾರ ಮುಂದುವರಿಸಿತ್ತು. ಆದರೆ, ಈ ನಿರ್ಧಾರವನ್ನು ಪ್ರಶ್ನಿಸಿ ಹೊಸದಾಗಿ ಯುಜಿಸಿ ಅರ್ಹತೆ ಪಡೆದಿರುವ ಉದ್ಯೋಗಾಕಾಂಕ್ಷಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಅವಧಿಯಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಮಾನವೀಯ ದೃಷ್ಟಿಯಿಂದ ಮುಂದುವರಿಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿರುವ ಸರ್ಕಾರ, 2025–26ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಮುಂದೂಡಿದೆ.

ಆದರೆ, ಕಾನೂನು ಹೋರಾಟದಿಂದ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ; ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆ ಎದುರಾಗಿದೆ. ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪರಿಹಾರ ಸೂತ್ರವೊಂದನ್ನು ಸರ್ಕಾರ ಆದಷ್ಟು ಬೇಗ ಕಂಡುಕೊಳ್ಳಬೇಕಾಗಿದೆ. ರಾಜ್ಯದ ಶೇ 50ಕ್ಕೂ ಹೆಚ್ಚು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಗೌರವ ಸಂಭಾವನೆಯನ್ನಷ್ಟೇ ನೀಡಿ ಹತ್ತಾರು ವರ್ಷಗಳಿಂದ ದುಡಿಸಿಕೊಂಡಿರುವ ಈ ಉಪನ್ಯಾಸಕರು ಬೀದಿಪಾಲಾಗದಂತೆ ನೋಡಿಕೊಳ್ಳುವುದು ಸರ್ಕಾರದ ನೈತಿಕ ಹೊಣೆಗಾರಿಕೆಯೂ ಆಗಿದೆ.

ಕರ್ನಾಟಕ ಮಾತ್ರವಲ್ಲದೆ, ಬಹುತೇಕ ರಾಜ್ಯಗಳಲ್ಲಿನ ಉನ್ನತ ಶಿಕ್ಷಣ ಕ್ಷೇತ್ರ ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿದೆ. ಹತ್ತಾರು ವರ್ಷಗಳಿಂದ ‘ಅತಿಥಿ’ಗಳಾಗಿಯೇ ದುಡಿಯುತ್ತಿರುವ ಈ ಅನುಭವಿಗಳನ್ನು ಹೊಸ ನಿಯಮಗಳ ಚೌಕಟ್ಟಿಗೆ ಒಳಪಡಿಸುವುದರಿಂದ ಎದುರಾಗುವ ಸಮಸ್ಯೆಗಳ ಅರಿವು ‘ಯುಜಿಸಿ’ಗೆ ಇದ್ದಂತಿಲ್ಲ. ವಸ್ತುಸ್ಥಿತಿಯ ಅರಿವಿಲ್ಲದೆ ರೂಪುಗೊಳ್ಳುವ ನಿಯಮಗಳಿಂದ ಎದುರಾಗಬಹುದಾದ ಸಮಸ್ಯೆಗಳಿಗೆ, ಅತಿಥಿ ಉಪನ್ಯಾಸಕರ ಇಂದಿನ ಅತಂತ್ರ ಸ್ಥಿತಿ ಉದಾಹರಣೆಯಂತಿದೆ. ಯುಜಿಸಿ ನಿಯಮಗಳು ಹಾಗೂ ಕೋರ್ಟ್ನ ನಿರ್ದೇಶನವನ್ನು ಮೀರಲಾಗದ ಹಾಗೂ ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನೂ ಕೈಬಿಡಲಾಗದ ಧರ್ಮಸಂಕಟ ಸರ್ಕಾರದ್ದಾಗಿದೆ. ಯುಜಿಸಿ ನಿಯಮ ಪೂರ್ವಾನ್ವಯ ಮಾಡದೆ, ಅನುಭವದ ಆಧಾರದ ಮೇಲೆ ನಮ್ಮನ್ನು ಮುಂದುವರಿಸಬೇಕು ಎನ್ನುವ ಅತಿಥಿ ಉಪನ್ಯಾಸಕರ ಕೋರಿಕೆಯನ್ನು ಮಾನವೀಯತೆಯ ದೃಷ್ಟಿಯಿಂದ ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಸರ್ಕಾರ ಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಕಾನೂನು ತಜ್ಞರ ಸಲಹೆ ಪಡೆದು ತ್ವರಿತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಕಾನೂನು ಪ್ರಯತ್ನಗಳ ಜೊತೆಗೆ, ದೇಶದ ವಿವಿಧ ರಾಜ್ಯಗಳಲ್ಲಿನ ಅತಿಥಿ ಉಪನ್ಯಾಸಕರ ಸ್ಥಿತಿ–ಗತಿಯ ಬಗ್ಗೆ ಸರ್ಕಾರ ನಿರ್ದಿಷ್ಟ ಕಾಲಮಿತಿಯೊಳಗೆ ಅಧ್ಯಯನ ನಡೆಸುವುದು ಅಗತ್ಯ. ಕೆಲವು ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ, ವರ್ಷ ಪೂರ್ತಿ ಕರ್ತವ್ಯ ನಿರ್ವಹಣೆಯ ಅವಕಾಶ ಕಲ್ಪಿಸುವ ಸೇವಾಭದ್ರತೆ ಇದೆ ಎನ್ನಲಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ‘ಅತಿಥಿ’ ಬೋಧಕರ ಸಮಸ್ಯೆಗಳನ್ನು ರಾಜ್ಯ ಸರ್ಕಾರಗಳು ಹೇಗೆ ನಿರ್ವಹಿಸಿವೆ ಎನ್ನುವ ಅಧ್ಯಯನ, ಅತಿಥಿ ಉಪನ್ಯಾಸಕರ ವಾಸ್ತವಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು; ವಾಸ್ತವಿಕ ನೆಲೆಗಟ್ಟಿನಲ್ಲಿ ಹೊಸನೀತಿಯೊಂದನ್ನು ರೂಪಿಸುವಂತೆ ಯುಜಿಸಿ ಮೇಲೆ ಒತ್ತಡ ಹೇರಲಿಕ್ಕೆ ಅಗತ್ಯವಾದ ದತ್ತಾಂಶಗಳನ್ನು ದೊರಕಿಸಿಕೊಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.