ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಆ್ಯಸಿಡ್ ಸಂತ್ರಸ್ತೆಗೆ ಪೊಲೀಸರಿಂದ ರಕ್ತದಾನ

Published : 16 ಜೂನ್ 2022, 16:22 IST
ಫಾಲೋ ಮಾಡಿ
Comments

ಬೆಂಗಳೂರು: ಆ್ಯಸಿಡ್ ದಾಳಿಯಿಂದ ತೀವ್ರ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ 24 ವರ್ಷದ ಯುವತಿಯ ಶಸ್ತ್ರಚಿಕಿತ್ಸೆಗಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರಕ್ತದಾನ ಮಾಡಿದ್ದು, ಇವರ ಕೆಲಸಕ್ಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತನ್ನನ್ನು ಮದುವೆಯಾಗಲು ನಿರಾಕರಿಸಿದರೆಂಬ ಕಾರಣಕ್ಕೆ ಆರೋಪಿ ನಾಗೇಶ್ ಬಾಬು (30) ಯುವತಿ ಮೇಲೆ ಏಪ್ರಿಲ್ 28ರಂದು ಆ್ಯಸಿಡ್ ಎರಚಿದ್ದ. ಆತನ ಕಾಲಿಗೆ ಗುಂಡು ಹೊಡೆದು, ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಯುವತಿಗೆ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯುವತಿಯ ಮುಖ ಹಾಗೂ ದೇಹದ ಹಲವು ಭಾಗಗಳಿಗೆ ತೀವ್ರ ಗಾಯವಾಗಿದೆ. ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ತೀರ್ಮಾನಿಸಿದ್ದರು. ಅದಕ್ಕೆ ರಕ್ತದ ಅವಶ್ಯತೆ ಇತ್ತು. ರಕ್ತದಾನಿಗಳಿಗಾಗಿ ಪೋಷಕರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಯದಾಗಿ ಇನ್‌ಸ್ಪೆಕ್ಟರ್‌ ಎಂ. ಪ್ರಶಾಂತ್ ಹಾಗೂ ಸಿಬ್ಬಂದಿ ಬಳಿ ಗೋಳು ಹೇಳಿಕೊಂಡಿದ್ದರು.

ಪೋಷಕರ ನೋವಿಗೆ ಸ್ಪಂದಿಸಿದ ಪ್ರಶಾಂತ್, ಪ್ರೊಬೇಷನರಿ ಪಿಎಸ್‌ಐ ವಿಶ್ವನಾಥ್ ರೆಡ್ಡಿ, ಸಿಬ್ಬಂದಿ ಮೋಹನ್‌ಕುಮಾರ್, ಚಂದ್ರಯ್ಯ ಹಾಗೂ ನಟರಾಜ್ ಅವರು ಆಸ್ಪತ್ರೆಗೆ ಗುರುವಾರ ಹೋಗಿ ಐದು ಬಾಟಲಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಯುವತಿಯ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು ನೆರವಾಗಿದ್ದು, ಈ ಬಗ್ಗೆ ವೈದ್ಯರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಆ್ಯಸಿಡ್ ದಾಳಿ ಪ್ರಕರಣದ ತನಿಖೆಯನ್ನು ಚುರುಕಿನಿಂದ ಮಾಡಿ ಆರೋಪಿಯನ್ನು ಬಂಧಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು, ಇದೀಗ ಸಂತ್ರಸ್ತ ಯುವತಿಗೆ ವೈದ್ಯರ ಸಲಹೆಯಂತೆ ರಕ್ತದಾನ ಮಾಡಿದ್ದಾರೆ. ಅಪರಾಧ ಭೇದಿಸುವುದಷ್ಟೇ ಅಲ್ಲ, ಸಾರ್ವಜನಿಕರ ಜೀವ ಉಳಿಸುವುದೂ ಪೊಲೀಸರ ಕೆಲಸ ಎಂಬುದನ್ನು ತೋರಿಸಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT