ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶದ ಸಂಸದ ಅನಾರ್‌ ಕೊಲೆ ಪ್ರಕರಣ: ದೇಹದ ಭಾಗಗಳಿಗಾಗಿ ಶೋಧ

Published 6 ಜೂನ್ 2024, 4:26 IST
Last Updated 6 ಜೂನ್ 2024, 4:26 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಭಾಗಗಳಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಗ್ಜೋಳ ಕಾಲುವೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಅನಾರ್‌ ದೇಹದ ಭಾಗಗಳನ್ನು 80 ತುಂಡುಗಳಾಗಿ ಕತ್ತರಿಸಿ, ಕೆಲವು ತುಂಡುಗಳಿಗೆ ಅರಿಶಿನ ಲೇಪಿಸಿ, ಕೊಲ್ಕತ್ತದ ನ್ಯೂ ಟೌನ್‌ನ ಸುತ್ತಮುತ್ತಲಿನ ಕಾಲುವೆ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಫ್ಲ್ಯಾಟ್‌ನ ಸೆಪ್ಟಿಕ್ ಟ್ಯಾಂಕ್‌ನಿಂದ ಹೊರ ತೆಗೆದಿದ್ದ ಮೃತದೇಹದ ತುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ದೇಹದ ಭಾಗಗಳನ್ನು ತುಂಡರಿಸಲು ಬಳಸಲಾಗಿದ್ದ ಚಾಕುಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.

ಅನ್ವರುಲ್ ಅಜೀಂ ಅನಾರ್‌ ಅವರು ಚಿಕಿತ್ಸೆಗೆಂದು ಕೋಲ್ಕತ್ತಕ್ಕೆ ಬಂದು ಮೇ 18ರಂದು ಕಾಣೆಯಾಗಿದ್ದರು. ಅವರ ಮೃತದೇಹ ಮೇ 22ರಂದು ಕೋಲ್ಕತ್ತದ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು. ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಮಹಿಳೆಯೊಬ್ಬರು ಅನಾರ್ ಅವರನ್ನು ಮೇ 16ರಂದು ಕೋಲ್ಕತ್ತದ ನ್ಯೂ ಟೌನ್ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಹಿಂದೆ ಇದ್ದ ಫ್ಲ್ಯಾಟ್‌ಗೆ ವ್ಯಕ್ತಿಯೊಬ್ಬ ಹೋಗಿದ್ದ. ಮಾರನೇ ದಿನ ಅನಾರ್ ಅವರು ಹೊರಗೆ ಬರುವುದು ಸಿಸಿಟಿವಿಯಲ್ಲಿ ಕಂಡಿಲ್ಲ. ನಂತರ ಮಹಿಳೆ ಹಾಗೂ ಆ ವ್ಯಕ್ತಿ ಅಷ್ಟೇ ದೊಡ್ಡ ಬ್ಯಾಗ್‌ ಸಮೇತ ಹೊರಗೆ ಬಂದಿರುವುದು ಕಂಡಿದೆ ಎಂದು ಪೊಲೀಸರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT