ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ವಿಜ್ಞಾನಿ ಪ್ರತಿಮಾ ಕೊಲೆ: ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ

Published 5 ನವೆಂಬರ್ 2023, 6:26 IST
Last Updated 5 ನವೆಂಬರ್ 2023, 9:19 IST
ಅಕ್ಷರ ಗಾತ್ರ

ಬೆಂಗಳೂರು: ಗಣಿ ಮತ್ತು‌ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ (43) ಅವರನ್ನು ಉಸಿರುಗಟ್ಟಿಸಿ, ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ
ದೊಡ್ಡಕಲ್ಲಸಂದ್ರದ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿಯ ಪ್ರತಿಮಾ, 2008ರಲ್ಲಿ ಭೂ ವಿಜ್ಞಾನಿ ಆಗಿ ಕೆಲಸಕ್ಕೆ ಸೇರಿದ್ದರು. 2019ರಲ್ಲಿ ಅವರಿಗೆ ಹಿರಿಯ ಭೂ ವಿಜ್ಞಾನಿಯಾಗಿ ಬಡ್ತಿ ಸಿಕ್ಕಿತ್ತು. ಎಂಟು ವರ್ಷ
ಗಳಿಂದ ಅವರು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು.

ಪ್ರತಿಮಾ ಪತಿ ಸತ್ಯನಾರಾಯಣ ಹಾಗೂ 16 ವರ್ಷದ ಮಗ, ಸ್ವಂತ ಊರಿನಲ್ಲಿದ್ದಾರೆ. ಪ್ರತಿಮಾ ಅವರು 5 ವರ್ಷಗಳಿಂದ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿರುವ ಎರಡು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಒಂಟಿಯಾಗಿ ವಾಸವಿದ್ದರು. ಸ್ವಂತ ಊರಿನಲ್ಲಿ ಹೊಸ ಮನೆ ನಿರ್ಮಿಸಿದ್ದರು. ಇತ್ತೀಚೆಗಷ್ಟೇ ಗೃಹ ಪ್ರವೇಶ ಕಾರ್ಯಕ್ರಮ ನಡೆದಿತ್ತು. ಪತಿ ಹಾಗೂ ಮಗನ ಜೊತೆ ಪ್ರತಿಮಾ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರ ಸಹೋದರ ಪ್ರತೀಶ್, ಬನ್ನೇರುಘಟ್ಟ ರಸ್ತೆಯಲ್ಲಿರುವ ಮನೆಯಲ್ಲಿ ನೆಲೆಸಿದ್ದಾರೆ.

ಮಲಗುವ ಕೊಠಡಿಯಲ್ಲಿ ಮೃತದೇಹ: ‘ಶನಿವಾರ ಕೆಲಸ ಮುಗಿಸಿದ್ದ ಪ್ರತಿಮಾ ರಾತ್ರಿ 7.45ರ ಸುಮಾರಿಗೆ ತಮ್ಮ ಕಾರಿನಲ್ಲಿ ಮನೆಗೆ ಬಂದಿದ್ದರು. ಚಾಲಕ ಚೇತನ್, ಮನೆ ಬಳಿ ಕಾರು ನಿಲ್ಲಿಸಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯತ್ತ ತೆರಳಿದ್ದರು. ಚಾಲಕ ಸ್ಥಳದಿಂದ ಹೋಗುತ್ತಿದ್ದಂತೆ ಪ್ರತಿಮಾ ಮನೆಯತ್ತ ಹೋಗಿದ್ದರು. ಭಾನುವಾರ ಕುಟುಂಬದ ಕಾರ್ಯಕ್ರಮವಿತ್ತು. ಈ ಬಗ್ಗೆ ಮಾತನಾಡಲು ಸಹೋದರ ಪ್ರತೀಶ್, ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಮಾ ಅವರಿಗೆ ಕರೆ ಮಾಡಿದ್ದರು. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಸುಸ್ತಾಗಿ ಮಲಗಿರಬಹುದೆಂದು ಸಹೋದರ ಸುಮ್ಮನಾಗಿದ್ದರು.ಭಾನುವಾರ ಬೆಳಿಗ್ಗೆ ಪುನಃ ಕರೆ ಮಾಡಿದ್ದರು. ಆಗಲೂ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸಹೋದರ, ಮನೆಗೆ ಬಂದು ನೋಡಿದಾಗ ಬಾಗಿಲು ಅರ್ಧ ತೆರೆದಿತ್ತು. ಮಲಗುವ ಕೋಣೆಯಲ್ಲಿದ್ದ ಬೆಡ್ ಮೇಲೆ ಮೃತದೇಹ ಕಂಡಿತ್ತು. ಪ್ರತೀಶ್ ಅವರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

‘ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಪ್ರತಿಮಾ ಅವರನ್ನು ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮನೆಯಲ್ಲಿ ಯಾವುದೇ ವಸ್ತು ಚೆಲ್ಲಾಪಿಲ್ಲಿ ಆಗಿಲ್ಲ. ಕಳ್ಳತನವೂ ನಡೆದಿಲ್ಲ’ ಎಂದು ಹೇಳಿದರು.

6 ಆಯಾಮದಲ್ಲಿ ತನಿಖೆ: ‘ವೈಯಕ್ತಿಕ ಹಾಗೂ ವೃತ್ತಿ ಕಾರಣಗಳಿಗೆ ಕೊಲೆ ನಡೆದಿರುವ ಬಗ್ಗೆ ಅನು
ಮಾನ ವ್ಯಕ್ತವಾಗಿದೆ. ಕೊಲೆಗೆ ಕಾರಣವಿರಬಹುದು ಎನ್ನಲಾದ 6 ಅಂಶಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಆಯಾಮ
ದಲ್ಲೂ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದ ಸ್ಥಳ: ‘ಪ್ರತಿಮಾ ಅವರ ಮನೆ ಹಾಗೂ ಸುತ್ತಮುತ್ತ ಯಾವುದೇ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಕೃತ್ಯ ನಡೆಯುತ್ತಿದ್ದಂತೆ ಕ್ಯಾಮೆರಾಗಳಿಗಾಗಿ ಹುಡುಕಾಟ ನಡೆಸಲಾಯಿತು. ಮನೆಯಿಂದ 1 ಕಿ.ಮೀ ದೂರದಲ್ಲಿರುವ ಬೇರೆ ಸ್ಥಳಗಳಲ್ಲಿ ಕ್ಯಾಮೆರಾಗಳಿವೆ. ಎಲ್ಲ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪ್ರತಿಮಾ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

‘ಚಾಲಕ ಪರಾರಿ: ಮೊಬೈಲ್ ಸ್ವಿಚ್ ಆಫ್’

‘ಈ ಮೊದಲು ಪ್ರತಿಮಾ ಅವರ ಕಾರಿಗೆ ಕಿರಣ್ ಎಂಬಾತ ಚಾಲಕನಾಗಿದ್ದ. ವಾರದ ಹಿಂದೆಯಷ್ಟೇ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಆನಂತರ, ಚಾಲಕ ಚೇತನ್ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಈ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಕಿರಣ್ ತಲೆಮರೆಸಿಕೊಂಡಿದ್ದಾನೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಪ್ರಕರಣದಲ್ಲಿ ಆತನ ಪಾತ್ರವಿರುವ ಶಂಕೆ ಇದ್ದು, ಆತನಿಗಾಗಿ ಶೋಧ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮಿಳುನಾಡಿನಿಂದ ಬರುವ ವಾಹನ ಪರಿಶೀಲಿಸಲು ಹೇಳಿದ್ದೆ’

‘ಅಕ್ರಮವಾಗಿ ಜಲ್ಲಿಕಲ್ಲು ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿದ್ದವು. ಈ ಬಗ್ಗೆ ಚರ್ಚಿಸಲು ತಿಂಗಳ ಹಿಂದೆಯಷ್ಟೇ ಸಭೆ ನಡೆಸಿದ್ದೆ. ಈ ಸಭೆಯಲ್ಲಿ ಪ್ರತಿಮಾ ಅವರೂ ಹಾಜರಾಗಿದ್ದರು. ತಮಿಳುನಾಡಿನಿಂದ ಬರುವ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಅಕ್ರಮ ಗಣಿಗಾರಿಕೆ ತಡೆಯಲು ಕಾರ್ಯಾಚರಣೆ ನಡೆಸುವಂತೆಯೂ ಹೇಳಿದ್ದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿಮಾ, ಉತ್ತಮ ಅಧಿಕಾರಿ. ಕೆಲಸದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ, ಯಾವುದೇ ದೂರು ಬಂದಿರಲಿಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ’ ಎಂದರು.

‘ಪರವಾನಗಿ ವಿಚಾರದಲ್ಲಿ ವೈಮನಸ್ಸು’

‘ಕ್ರಷರ್‌ ಹಾಗೂ ಮರಳು ಗಣಿಗಾರಿಕೆ ಪರವಾನಗಿ ನೀಡುವ ವಿಚಾರದಲ್ಲಿ ಪ್ರತಿಮಾ ಅವರು ದಿಟ್ಟ ಕ್ರಮ  ಕೈಗೊಂಡಿದ್ದರು. ಹಲವು ಪರವಾನಗಿಗಳನ್ನು ನವೀಕರಣ ಮಾಡಿರಲಿಲ್ಲ. ಜೊತೆಗೆ, ಕೆಲ ಪರವಾನಗಿಗಳನ್ನು ರದ್ದುಪಡಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಹಾಗೂ ಕೆಲವರ ನಡುವೆ ವೈಮನಸ್ಸು ಉಂಟಾಗಿತ್ತು ಎಂಬ ಮಾಹಿತಿಯೂ ಇದೆ’ ಎಂದು ಪೊಲೀಸರು ಹೇಳಿದರು.

‘ಪ್ರತಿಮಾ ಅವರ ಮನೆಯಲ್ಲಿ ಐಫೋನ್ ಸಿಕ್ಕಿದೆ. ಅದನ್ನು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರತಿಮಾ ಅವರ ಕಚೇರಿ ಸಿಬ್ಬಂದಿ ಮತ್ತು ಇತರರನ್ನು ತನಿಖೆಗೆ ಒಳಪಡಿಸಲಾಗಿದೆ’ ಎಂದು ತಿಳಿಸಿದರು.

‘ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ, ಸುಪಾರಿ ಶಂಕೆ’

‘ಮನೆಯ ಹೊರಭಾಗದಲ್ಲಿದ್ದ ಕಬ್ಬಿಣದ ಗೇಟ್‌ ತೆರೆದಿದ್ದ ಪ್ರತಿಮಾ, ನಂತರ ಮನೆಯ ಮುಖ್ಯ ಬಾಗಿಲು ತೆರೆದು ಒಳಗೆ ಕಾಲಿಟ್ಟಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮನೆಯ ಮುಖ್ಯ ಬಾಗಿಲು ಬಳಿ ಊಟದ ಬ್ಯಾಗ್ ಹಾಗೂ ಕನ್ನಡಕ ಬಿದ್ದಿತ್ತು. ಅದೇ ಬಾಗಿಲು ಬಳಿ ದುಷ್ಕರ್ಮಿಗಳು, ಪ್ರತಿಮಾ ಅವರನ್ನು ಹಿಂದಿನಿಂದ ಹಿಡಿದುಕೊಂಡು ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದಿರುವ ಶಂಕೆ ಇದೆ. ನಂತರ, ಬೆಡ್‌ ಮೇಲೆ ಮೃತದೇಹ ಇರಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

‘ಸ್ಥಳ ಪರಿಶೀಲನೆ ನಡೆಸಿದಾಗ, ಈಗಾಗಲೇ ಕೊಲೆ ಎಸಗಿರುವ ಆರೋಪಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಜೊತೆಗೆ, ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯೂ ಇದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT