ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌: ಝಪೊರಿಝಿಯಾ ಅಣುವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ದಾಳಿ

Published 8 ಏಪ್ರಿಲ್ 2024, 14:44 IST
Last Updated 8 ಏಪ್ರಿಲ್ 2024, 14:44 IST
ಅಕ್ಷರ ಗಾತ್ರ

ಕೀವ್: ರಷ್ಯಾದ ನಿಯಂತ್ರಣದಲ್ಲಿ ಇರುವ ಝಪೊರಿಝಿಯಾ ಅಣುವಿದ್ಯುತ್ ಸ್ಥಾವರದ ಮೇಲೆ ನಡೆದಿರುವ ಡ್ರೋನ್ ದಾಳಿಯು ‘ದೊಡ್ಡ ಅಣುಶಕ್ತಿ ದುರ್ಘಟನೆ ನಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸಿದೆ’ ಎಂದು ವಿಶ್ವಸಂಸ್ಥೆಯ ಅಣುಶಕ್ತಿ ಕಣ್ಗಾವಲು ಸಂಸ್ಥೆಯ ಮುಖ್ಯಸ್ಥ ರಫೇಲ್ ಮರಿಯಾನೊ ಗ್ರಾಸಿ ಹೇಳಿದ್ದಾರೆ.

ಅಣುವಿದ್ಯುತ್ ಸ್ಥಾವರದ ಮೇಲೆ ಕನಿಷ್ಠ ಮೂರು ನೇರ ದಾಳಿಗಳು ಆಗಿವೆ ಎಂಬುದನ್ನು ಗ್ರಾಸಿ ಅವರು ಎಕ್ಸ್‌ ಮೂಲಕ ಖಚಿತಪಡಿಸಿದ್ದಾರೆ. ಈ ರೀತಿ ಆಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

ಅಣು ವಿಕಿರಣಕ್ಕೆ ಕಾರಣವಾಗಬಲ್ಲ ಗಂಭೀರ ಸ್ವರೂಪದ ಅವಘಡ ತಪ್ಪಿಸಬೇಕು ಎಂದಾದರೆ ಪಾಲಿಸಬೇಕಿರುವ ಐದು ಮೂಲಭೂತ ತತ್ವಗಳನ್ನು ತಾವು 2022ರ ನವೆಂಬರ್‌ನಲ್ಲಿ ಪಟ್ಟಿಮಾಡಿದ ನಂತರದಲ್ಲಿ ನಡೆದಿರುವ ಇಂತಹ ಮೊದಲ ದಾಳಿ ಇದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಾವರದ ಮೇಲಿನ ದಾಳಿಯಿಂದ ಭೌತಿಕವಾಗಿ ಆಗಿರುವ ಪರಿಣಾಮಗಳನ್ನು ಖಚಿತಪಡಿಸಿ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಹೇಳಿಕೆ ನೀಡಿದೆ. ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿಯೂ ಅದು ಹೇಳಿದೆ. ‘ಸ್ಥಾವರದ ಆರನೆಯ ಘಟಕಕ್ಕೆ ಆಗಿರುವ ಹಾನಿಯು ಸುರಕ್ಷತೆಗೆ ಧಕ್ಕೆ ತಂದಿಲ್ಲ. ಆದರೆ ಅದು ಅಣುವಿಕಿರಣವನ್ನು ತಡೆಯುವ ವ್ಯವಸ್ಥೆಗೆ ಧಕ್ಕೆ ತರುವ ಸಾಮರ್ಥ್ಯ ಹೊಂದಿತ್ತು’ ಎಂದು ಐಎಇಎ ಹೇಳಿದೆ.

ಸ್ಥಾವರದ ಮೇಲೆ ಉಕ್ರೇನ್ ಮಿಲಿಟರಿಗೆ ಸೇರಿದ ಡ್ರೋನ್ ದಾಳಿ ಭಾನುವಾರ ನಡೆದಿದೆ ಎಂದು ಝಪೊರಿಝಿಯಾ ಅಣುವಿದ್ಯುತ್ ಸ್ಥಾವರದ ಅಧಿಕಾರಿಗಳು ಹೇಳಿದ್ದಾರೆ.

ದಾಳಿ ನಿರಾಕರಿಸಿದ ಉಕ್ರೇನ್: ಯುರೋಪಿನ ಅತಿದೊಡ್ಡ ಅಣುವಿದ್ಯುತ್ ಸ್ಥಾವರವಾದ ಝಪೊರಿಝಿಯಾ ಮೇಲೆ ಉಕ್ರೇನ್‌ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಮಾಡಿರುವ ಆರೋಪವನ್ನು ಉಕ್ರೇನ್‌ನ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಕೆಲವೇ ದಿನಗಳಲ್ಲಿ ಈ ಸ್ಥಾವರವನ್ನು ರಷ್ಯಾ ವಶಕ್ಕೆ ತೆಗದುಕೊಂಡಿದೆ. ಉಕ್ರೇನ್ ಮಿಲಿಟರಿಯ ಗುಪ್ತಚರ ವಿಭಾಗದ ವಕ್ತಾರ ಆ್ಯಂಡ್ರಿ ಯುಸೊವ್ ಅವರು ದಾಳಿ ನಡೆದೇ ಇಲ್ಲ ಎಂದು ಹೇಳಿದ್ದಾರೆ. ರಷ್ಯಾದ ಅಧಿಕಾರಿಗಳು ಆ ಸ್ಥಾವರದ ಮೇಲಿನ ದಾಳಿ ವಿಚಾರವಾಗಿ ವಾಸ್ತವ ತಿರುಚುವ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT