ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಲಸಿಕೆ: ವಿಜ್ಞಾನಿಗಳಾದ ಕಾರಿಕೊ, ವೈಸ್‌ಮೆನ್‌ರಿಗೆ ನೊಬೆಲ್ ಪುರಸ್ಕಾರ

Published 2 ಅಕ್ಟೋಬರ್ 2023, 10:28 IST
Last Updated 2 ಅಕ್ಟೋಬರ್ 2023, 10:56 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್: ಕೋವಿಡ್–19 ಸೋಂಕು ನಿವಾರಣೆಗೆ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ದೊರೆತಿದೆ.

ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್‌ಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯ ನಡೆಸಿದೆ. ಪ್ರಶಸ್ತಿ ವಿಜೇತರಿಗೆ ₹8.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.

‘ಜಗತ್ತನ್ನೇ ಕಾಡಿದ ಕೋವಿಡ್–19ರ ಸೋಂಕು ನಿವಾರಣೆಗೆ ನ್ಯೂಕ್ಯಿಯೊಸೈಡ್‌ ಆಧಾರಿತ ಪರಿಣಾಮಕಾರಿಯಾದ ಎಂಆರ್‌ಎನ್‌ಎ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಕಾರಿಕೊ ಹಾಗೂ ವೈಸ್‌ಮೆನ್‌ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ 2023ರ ನೊಬೆಲ್ ಪುರಸ್ಕಾರವನ್ನು ಇವರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಆಯ್ಕೆ ಸಮಿತಿ ಹೇಳಿದೆ.

ಈ ವರ್ಷದ ನೊಬೆಲ್ ಪ್ರಶಸ್ತಿಯ ಘೋಷಣೆ ವೈದ್ಯಕೀಯ ಕ್ಷೇತ್ರದಿಂದ ಆರಂಭಗೊಂಡಿದೆ. ಉಳಿದ ಐದು ಪ್ರಶಸ್ತಿಗಳು ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿವೆ. 

ನೊಬೆಲ್ ಪ್ರಶಸ್ತಿಯು 1901ರಲ್ಲಿ ಮೊದಲ ಬಾರಿಗೆ ಸ್ವೀಡನ್‌ನ ಡೈನಮೈಟ್‌ ಅನ್ವೇಷಕ ಹಾಗೂ ಶ್ರೀಮಂತ ವ್ಯಾಪಾರಿ ಅಲ್ಫ್ರೆಡ್ ನೊಬೆಲ್ ಅವರು ಹುಟ್ಟುಹಾಕಿದರು. ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿತ್ತು. ನಂತರ ಅರ್ಥಶಾಸ್ತ್ರ ಕ್ಷೇತ್ರಕ್ಕೂ ನೊಬೆಲ್ ಪುರಸ್ಕಾರವನ್ನು ವಿಸ್ತರಿಸಲಾಯಿತು.

ನೊಬೆಲ್ ಅವರ 10ನೇ ಪುಣ್ಯ ಸ್ಮರಣೆಯಲ್ಲಿ ಡಿ. 10ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿದೆ. 

ಕಳೆದ ವರ್ಷ ವೈದ್ಯಕೀಯ ಕ್ಷೇತ್ರದ ಪ್ರಶಸ್ತಿಯು ಜಗತ್ತಿನಲ್ಲಿ ಸದ್ಯ ಇರುವ ಮನುಷ್ಯ ತಳಿಗೂ ಪುರಾತನ ನಿಯನ್ಯಾಂಡ್ರಿತಾಲ್‌ ತಳಿಗೂ ಇರುವ ಸಾಮ್ಯತೆಯ ವಂಶಾವಳಿ ಪತ್ತೆ ಮಾಡಿದ ಸ್ವೀಡ್ ಸ್ವಾಂತೆ ಪಾಬೊ ಅವರಿಗೆ ಲಭಿಸಿತ್ತು. ಅದಕ್ಕೂ ಪೂರ್ವದಲ್ಲಿ ಪೆನ್ಸಿಲಿನ್‌ ಚುಚ್ಚುಮದ್ದು ಕಂಡುಹಿಡಿದಿದ್ದಕ್ಕೆ ಅಲೆಕ್ಸಾಂಡರ್ ಫ್ಲೆಮಿಂಗ್ ಅವರಿಗೆ 1945ರಲ್ಲಿ, ಮನುಷ್ಯರಲ್ಲಿನ ರಕ್ತದ ಗುಂಪುಗಳನ್ನು ಪತ್ತೆ ಮಾಡಿದ ಕಾರ್ಲ್‌ ಲ್ಯಾಂಡ್‌ಸ್ಟೀನರ್‌ ಅವರಿಗೆ 1930ರಲ್ಲಿ ನೊಬೆಲ್ ಪುರಸ್ಕಾರ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT