ಬರ್ಲಿನ್: ಇಲ್ಲಿ ನಡೆದ ಯುರೋಪಿಯನ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ತಂಡ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇನ್ನೊಂದೆಡೆ 1966ರ ವಿಶ್ವಕಪ್ ಗೆದ್ದ ನಂತರ ಪುರುಷರ ವಿಭಾಗದ ಮೊದಲ ಪ್ರಮುಖ ಪ್ರಶಸ್ತಿ ಗೆಲ್ಲಲು ತುದಿಗಾಲಲ್ಲಿ ನಿಂತಿದ್ದ ಇಂಗ್ಲೆಂಡ್ ತಂಡ ನಿರಾಸೆ ಅನುಭವಿಸಿತು.
ಪಂದ್ಯದ ಆರಂಭದಿಂದ ಪ್ರಾಬಲ್ಯ ಮೆರೆದ ಸ್ಪೇನ್ ತಂಡವು ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವಿನ ನಗೆ ಬೀರಿತು.
ಸ್ಪೇನ್ ಆಡಿರುವ ಆರೂ ಪಂದ್ಯಗಳಲ್ಲಿ ಜಯಗಳಿಸಿದ್ದು ಫೈನಲ್‌ನಲ್ಲೂ ಗೆಲ್ಲುವ ನೆಚ್ಚಿನ ತಂಡವೆನಿಸಿತ್ತು. 1964 ಮತ್ತು 2008ರಲ್ಲಿ ಚಾಂಪಿಯನ್ ಆಗಿದ್ದ ಸ್ಪೇನ್ ಕೊನೆಯ ಬಾರಿ ಯುರೊ ಕೂಟ ಗೆದ್ದಿದ್ದು 2012ರಲ್ಲಿ. ಆ ಬಾರಿ ಇಟಲಿ ಮೇಲೆ ಜಯಗಳಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಇಂಗ್ಲೆಂಡ್ 2021ರಲ್ಲಿ (2020ರಲ್ಲಿ ನಿಗದಿಯಾಗಿತ್ತು) ನಡೆದ ಯುರೊ ಫೈನಲ್ ತಲುಪಿತ್ತು. ಆದರೆ ಶೂಟೌಟ್‌ನಲ್ಲಿ ಇಟಲಿಗೆ ಮಣಿದಿತ್ತು.
ಗರೆತ್ ಸೌತ್‌ಗೇಟ್ ಅವರು ತಂಡದ ನಿರ್ವಹಣೆ ವಿಷಯದಲ್ಲಿ ಟೀಕೆಗಳನ್ನೆದುರಿಸಿದರೂ, ಅವರು ತಂಡದೊಳಗಿನ ಶಿಸ್ತು ಮೂಡಿಸಿದ್ದಾರೆ. 2016ರಲ್ಲಿ ಕೋಚ್ ಆದ ನಂತರ ಇಂಗ್ಲೆಂಡ್ 2018ರ ವಿಶ್ವಕಪ್ ಸೆಮಿಫೈನಲ್ ತಲುಪಿತ್ತು. ಈಗ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಬಾರಿ ಫೈನಲ್ ತಲುಪಿತ್ತು.