ಭಾನುವಾರ, ಜನವರಿ 24, 2021
18 °C
ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣೆ

ಕಾಂಗ್ರೆಸ್‌ನಿಂದ 12 ಜನ ವೀಕ್ಷಕರ ನೇಮಕ: ಕರ್ನಾಟಕದ ಮೂವರು ಮುಖಂಡರಿಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬರುವ ಏಪ್ರಿಲ್‌–ಮೇನಲ್ಲಿ ಐದು ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ 12 ಜನ ಹಿರಿಯ ಮುಖಂಡರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ.

ಇಬ್ಬರು ಮುಖ್ಯಮಂತ್ರಿಗಳು, ಕರ್ನಾಟಕದ ಮೂವರು ಮುಖಂಡರು ಈ ವೀಕ್ಷಕರ ತಂಡದಲ್ಲಿ ಇದ್ದಾರೆ. ಚುನಾವಣಾ ತಂತ್ರಗಾರಿಕೆ, ರಾಜ್ಯ ಮತ್ತು ಕೇಂದ್ರ ನಾಯಕರ ನಡುವೆ ಸಮನ್ವಯ ಸಾಧಿಸಿ, ಪಕ್ಷ ಗೆಲುವಿನ ದಡ ಸೇರುವಂತೆ ನೋಡಿಕೊಳ್ಳುವುದು ಈ ವೀಕ್ಷಕರ ಜವಾಬ್ದಾರಿಯಾಗಿದೆ.

ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ರಾಜ್ಯಗಳು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಹಿರಿಯ ಮುಖಂಡ ಲಿಜಿನ್ಹೊ ಫೆಲಿರೊ ಅವರನ್ನು ಕೇರಳದ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಅನ್ನು ಅಧಿಕಾರದಿಂದ ಕಿತ್ತೊಗೆದು, ಪುನಃ ಅಡಳಿತದ ಚುಕ್ಕಾಣಿ ಹಿಡಿಯುವ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿದೆ.

ಅಸ್ಸಾಂನಲ್ಲಿ ಸಹ ಗೆದ್ದು ಬೀಗಬೇಕು ಎಂಬ ಉದ್ದೇಶದಿಂದ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಚುನಾವಣಾ ತಂತ್ರಗಾರಿಕೆ ಹೆಣೆಯುವ ಹೊಣೆಯನ್ನು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ಹಾಗೂ ಹಿರಿಯ ಮುಖಂಡ ಶಕೀಲ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸಲಾಗಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ ಎಂ.ಎಂ.ಪಲ್ಲಂ ರಾಜು, ಮಹಾರಾಷ್ಟ್ರ ಸಚಿವ ನಿತಿನ್‌ ರಾವುತ್‌ ಅವರನ್ನು ತಮಿಳುನಾಡು ಹಾಗೂ ಪುದುಚೇರಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಹಿರಿಯ ಮುಖಂಡರಾದ ಬಿ.ಕೆ.ಹರಿಪ್ರಸಾದ್‌,  ಆಲಂಗೀರ್‌ ಆಲಂ, ವಿಜಯ ಇಂದರ್‌ ಸಿಂಗ್ಲಾ ಅವರು ಪಶ್ಚಿಮ ಬಂಗಾಳದ ವೀಕ್ಷಕರಾಗಿ ಕಾರ್ಯ ನಿರ್ವಹಿಸುವರು.

ಪಶ್ಚಿಮ ಬಂಗಾಳದಲ್ಲಿ ಸಿಪಿಎಂನೊಂದಿಗೆ ಚುನಾವಣಾ ಹೊಂದಾಣಿಕೆಗೆ ಮುಂದಾಗಿರುವ ಕಾಂಗ್ರೆಸ್‌, ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಅನ್ನು ಕುರ್ಚಿಯಿಂದ ಕೆಳಗಿಳಿಸಲು ಹೋರಾಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು