ಸೋಮವಾರ, ಜುಲೈ 26, 2021
21 °C

ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ: ಮಮತಾ ಬ್ಯಾನರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 12 ವರ್ಷದವರೆಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎಂದು ಬುಧವಾರ ಹೇಳಿದ್ದಾರೆ.

ಗುರುವಾರದಿಂದ ರಾಜ್ಯದಲ್ಲಿ ಪ್ರತಿದಿನ ಕನಿಷ್ಠ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

'ನಾವು ಮೂರನೇ ಅಲೆಯನ್ನು ಎದುರಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಎರಡನೇ ಅಲೆಯು ಸೋಂಕಿತರ ಪ್ರಮಾಣವನ್ನು ಏರಿಕೆಮಾಡಿದೆ. ಹೀಗಾಗಿ 0 ಯಿಂದ 12 ವರ್ಷದವರೆಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವುದಕ್ಕೆ ನಾವು ನಿರ್ಧರಿಸಿದ್ದೇವೆ. ಹೀಗೆ ಮಾಡುವುದರಿಂದಾಗಿ ತಾಯಂದಿರಿಂದ ಮಕ್ಕಳು ಸೋಂಕಿತರಾಗುವುದನ್ನು ತಡೆಯಬಹುದು' ಎಂದಿದ್ದಾರೆ.

'ರಾಜ್ಯದಲ್ಲಿ ಈವರೆಗೂ ಕನಿಷ್ಠ ಎರಡು ಕೋಟಿ ಜನರಿಗೆ ಕೋವಿಡ್ ವಿರುದ್ಧದ ಲಸಿಕೆ ನೀಡಲಾಗಿದೆ. ಗುರುವಾರದಿಂದ (ಜೂ.24) ದಿನಕ್ಕೆ ಸರಾಸರಿ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡಲು ನಾವು ತೀರ್ಮಾನಿಸಿದ್ದೇವೆ' ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕನಿಷ್ಠ 26,000 ಕೋವಿಡ್-19 ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಿದೆ. ಅಲ್ಲದೆ, 90 ದಿನಗಳಿಂದ 12 ವರ್ಷದೊಳಗಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳನ್ನು ಹೊಂದಿರುವ ಮಕ್ಕಳ ಪ್ರಕರಣಗಳಿಗೆ ಸುಮಾರು 10,000 ಸಾಮಾನ್ಯ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಸೋಂಕಿತರಾಗುವ 1 – 90 ದಿನಗಳ ಮಕ್ಕಳಿಗೆ ನವಜಾತ ಶಿಶುಗಳ ಐಸಿಯುವಿನಲ್ಲಿ ಶೇ 20 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ.

ಬುಧವಾರವಷ್ಟೇ ಪಶ್ಚಿಮ ಬಂಗಾಳದಲ್ಲಿ 38 ಜನರು ಸೋಂಕಿನಿಂದ ಸಾವಿಗೀಡಾಗುವುದರೊಂದಿಗೆ ಮೃತರ ಸಂಖ್ಯೆ 17,475ಕ್ಕೆ ಏರಿಕೆಯಾಗಿದೆ. 1,925 ಹೊಸ ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 14,87,363ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,017 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಪ್ರಮಾಣ ಶೇ 97.32 ರಷ್ಟಿದೆ. ರಾಜ್ಯದಲ್ಲಿ ಸದ್ಯ 22,378 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು