ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಕಠಿಣ ಮಾರ್ಗಸೂಚಿಗೆ ಶೇ 44ರಷ್ಟು ಮಂದಿ ಬೇಸರ

ಸಿಂಗಪುರದಲ್ಲಿ ನಡೆಸಿದ ಆನ್‌ಲೈನ್‌ ಸಮೀಕ್ಷೆಯಿಂದ ಬಹಿರಂಗ
Last Updated 16 ಆಗಸ್ಟ್ 2020, 11:52 IST
ಅಕ್ಷರ ಗಾತ್ರ

ಸಿಂಗಪುರ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ಪಾಲನೆ ಮಾಡುವಲ್ಲಿ ಸಿಂಗಪುರದ ಶೇ 44ರಷ್ಟು ಜನರು ರೋಸಿಹೋಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಮಾಸ್ಕ್‌ ಧರಿಸುವುದು, ಅಂತರ ಕಾಪಾಡುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಆದರೆ, ಇಷ್ಟು ದಿನಗಳು ಕಳೆದರೂ ಕೋವಿಡ್‌ ಪ್ರಸರಣ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮಾಸ್ಕ್‌ ಧರಿಸುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಇನ್ನೂ ಕೆಲ ಕಾಲ ಮುಂದುವರಿಸಬೇಕಲ್ಲ ಎಂಬ ವಿಷಯಕ್ಕೆ ಜನರು ರೋಸಿ ಹೋಗಿದ್ದಾರೆ ಎಂದು ಆನ್‌ಲೈನ್‌ ಮೂಲಕ ನಡೆದ ಸಮೀಕ್ಷೆ ಹೇಳಿದೆ.

16 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ 1,000 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಶೇ 27ರಷ್ಟು ಜನರು ಮಾಸ್ಕ್ ಧರಿಸಬೇಕು ಎಂಬ ಕಟ್ಟಳೆ ಹತಾಶೆಯನ್ನುಂಟು ಮಾಡುತ್ತದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ ಸಿಂಗಪುರದಲ್ಲಿ ‘ಸೇಫ್‌ಎಂಟ್ರಿ’ ಎಂಬ ಆ್ಯಪ್‌ಅನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯ. ಆದರೆ, ಈ ಆ್ಯಪ್‌ ಬಳಕೆ ಉಪದ್ರವವೇ ಸರಿ ಎಂದು ಶೇ 5ರಷ್ಟು ಜನರ ಹೇಳಿದ್ದಾರೆ.

ಗೆಳೆಯರು, ಸಂಬಂಧಿಕರು ಒಟ್ಟಿಗೇ ಸೇರುವ ಸಂದರ್ಭದಲ್ಲಿ ಜನರ ಸಂಖ್ಯೆಯನ್ನು ನಿಯಮಿತಗೊಳಿಸಿರುವ ಕುರಿತು ಶೇ 14ರಷ್ಟು ಜನರು ಅಸಮಾಧಾನ ಹೊರಹಾಕಿದ್ದಾರೆ.

‘ಪ್ರತಿ ಬಾರಿ ನಾವು ಮನೆಯಿಂದ ಹೊರ ಹೋಗುವಾಗ ಮಾಸ್ಕ್‌ ಧರಿಸಬೇಕು ಎನ್ನುವುದು ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ’ ಎಂದುಎಂದು ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸಿಂಗಪುರದ ಸಾ ಸ್ವೀ ಹಾಕ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಡೀನ್‌ ಟಿವೊ ಯಿಕ್‌ ಯಿಂಗ್‌ ಅಭಿಪ್ರಾಯಪಡುತ್ತಾರೆ.

‘ಆದರೆ, ಕೊರೊನಾ ವೈರಸ್‌ ದಾಳಿಯ ವಿರುದ್ಧ ರಕ್ಷಣೆ ಪಡೆಯುವ ಸಲುವಾಗಿ ಸರ್ಕಾರ ರೂಪಿಸಿರುವ ಈ ಮಾರ್ಗಸೂಚಿಗಳನ್ನು ನಾವು ಕಡೆಗಣಿಸಬಾರದಲ್ಲ’ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT