ಭಾನುವಾರ, ಅಕ್ಟೋಬರ್ 17, 2021
23 °C

ಲಖನೌ: ನಟಿ ಕಂಗನಾಗೆ ನಾಣ್ಯದ ಉಡುಗೊರೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ಕಂಗನಾ ರನೌತ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌

ಲಖನೌ: ಬಾಲಿವುಡ್‌ ನಟಿ ಕಂಗನಾ ರನೌತ್‌ ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿದರು.

ಕಂಗನಾ ಅವರು 'ತೇಜಸ್‌' ಹೆಸರಿನ ಸಿನಿಮಾದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂದು ಅವರು ಲಖನೌ ತಲುಪಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ರಾಜ್ಯ ಸರ್ಕಾರದ 'ಒಂದು ಜಿಲ್ಲೆ ಒಂದು ಉತ್ಪಾದನೆ' ಕಾರ್ಯಕ್ರಮಕ್ಕೆ ಕಂಗನಾ ರಾಯಭಾರಿಯಾಗಿರುವುದಾಗಿ ವರದಿಯಾಗಿದೆ.

ಯೋಗಿ ಆದಿತ್ಯನಾಥ್‌ ಭೇಟಿ ಬಳಿಕ ವಿಡಿಯೊ ಹಂಚಿಕೊಂಡಿರುವ ಕಂಗನಾ, 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸ್ಫೂರ್ತಿದಾಯಕ, ಹುರುಪಿನ ಹಾಗೂ ನಿಷ್ಕಪಟ ವ್ಯಕ್ತಿತ್ವದವರು...' ಎಂದು ವಿವರಿಸಿದ್ದಾರೆ.

'ನಮ್ಮ ಸಿನಿಮಾದ (ತೇಜಸ್‌) ಚಿತ್ರೀಕರಣದ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರ ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದೆ ಹಾಗೂ ಮುಂಬರುವ ಚುನಾವಣೆಗಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಶುಭಕೋರಿದೆ... ಹಿಂದೆ ಉತ್ತರ ಪ್ರದೇಶದಲ್ಲಿ ತಪಸ್ವಿ ರಾಜ ಶ್ರೀ ರಾಮ ಚಂದ್ರ ಇದ್ದರು ಹಾಗೂ ಈಗ ನಮಗೆ ಯೋಗಿ ಆದಿತ್ಯನಾಥ್‌ ಇದ್ದಾರೆ...' ಎಂದು ಕಂಗನಾ ಹಂಚಿಕೊಂಡಿದ್ದಾರೆ.
 
ರಾಮ ಜನ್ಮ ಭೂಮಿ ಪೂಜೆಯ ಸಂದರ್ಭದಲ್ಲಿ ಬಳಕೆ ಮಾಡಿದ್ದ ನಾಣ್ಯವನ್ನು ಆದಿತ್ಯನಾಥ್‌ ಅವರು ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ.

'ಕ್ವೀನ್‌' ಖ್ಯಾತಿಯ ನಟಿ ಕಂಗನಾ ಇಂದು ಬೆಳಿಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಪ್ರಕಟಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದ್ದರು.

ಕಂಗನಾ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಜೀವನಾಧಾರಿತ 'ತಲೈವಿ' ಸಿನಿಮಾ ಸೆಪ್ಟೆಂಬರ್‌ 10ರಂದು ಬಿಡುಗಡೆಯಾಗಿದೆ. ಸದ್ಯ ತಲೈವಿ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು