ಭಾನುವಾರ, ಜೂನ್ 26, 2022
26 °C
ಉತ್ತರಪ್ರದೇಶ: ಹಿಂದೂ ಮಹಾಸಭಾದ ಅಧ್ಯಕ್ಷರ ಬಂಧನ, ಮೆರವಣಿಗೆ ನಿಷೇಧ

ಜ್ಞಾನವಾಪಿ, ಶಾಹಿ ಮಸೀದಿ ಬಳಿಕ ಈಗ ಟೀಲೆವಾಲಿ ಮಸೀದಿಯತ್ತ ಕೇಸರಿ ಸಂಘಟನೆಗಳ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಪಕ್ಕದ ಶಾಹಿ ಈದ್ಗಾ ಮಸೀದಿಯ ಕುರಿತು ನಡೆಯುತ್ತಿರುವ ಕಾನೂನು ಹೋರಾಟದ ನಡುವೆಯೇ ಕೇಸರಿ ಸಂಘಟನೆಗಳ ಚಿತ್ತವು ಇದೀಗ ಲಖನೌದಲ್ಲಿರುವ ‘ಟೀಲೆವಾಲಿ ಮಸೀದಿ’ಯತ್ತ ಹರಿದಿದೆ.

‘ಟೀಲೆವಾಲಿ ಮಸೀದಿಯು ವಾಸ್ತವವಾಗಿ ಲಕ್ಷ್ಮಣ ತಿಲಾ ಆಗಿದ್ದು, ಹನುಮಾನ್ ಚಾಲೀಸಾ ಪಠಿಸಲು ಮಸಿದೀಯತ್ತ ಮೆರವಣಿಗೆ ನಡೆಸುವುದಾಗಿ’ ಉತ್ತರಪ್ರದೇಶದ ಹಿಂದೂ ಮಹಾಸಭಾದ  ಕಾರ್ಯಕರ್ತರು ಪ್ರತಿಜ್ಞೆ ಮಾಡಿದ್ದರು. ಇದರ ಬೆನ್ನಲ್ಲೇ ಮಸೀದಿಯ ಇಮಾಮ್ ಸೈಯದ್ ಫಜ್ಲುಲ್ ಮನ್ನಾನ್ ಅವರು ಈ ಮೆರವಣಿಗೆಯ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ವಿಷಯ ತಿಳಿದ ಪೊಲೀಸರು ಭಾನುವಾರ ನಡೆಯಬೇಕಿದ್ದ ಉದ್ದೇಶಿತ ಮೆರವಣಿಗೆಯನ್ನು ನಿಷೇಧಿಸಿದ್ದು, ಶನಿವಾರ ತಡರಾತ್ರಿ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಿಷಿ ತ್ರಿವೇದಿ ಅವರನ್ನು ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ಹಿಂದೂ ಮಹಾಸಭಾದ ನೂರಾರು ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ತಕ್ಷಣವೇ ತ್ರಿವೇದಿ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

‘ಲಕ್ಷ್ಮಣ ತಿಲ ಮುಕ್ತಿಸಂಕಲ್ಪ ಯಾತ್ರೆಯನ್ನು ನಿಷೇಧಿಸಲಾಗಿದೆ. ಮಸೀದಿಗೆ ಹೋಗುವ ರಸ್ತೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಯಾವ ಸಂಘಟನೆಯೂ ಯಾವುದೇ ಯಾತ್ರೆಯನ್ನು ಕೈಗೊಂಡಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.

ಅವಧ್ ಇತಿಹಾಸಕಾರರ ಪ್ರಕಾರ, 16ನೇ ಶತಮಾನದಲ್ಲಿ ನಿರ್ಮಿಸಲಾದ ಟೀಲೆವಾಲಿ ಮಸೀದಿಯು ಪ್ರಸಿದ್ಧ ಇಮಾಂಬರಾ ಬಳಿಯ ಗೋಮತಿ ನದಿಯ ದಡದಲ್ಲಿದೆ. ಈ ಮಸೀದಿಯು ಉತ್ತರಪ್ರದೇಶದ ಅತಿದೊಡ್ಡ ಸುನ್ನಿ ಮಸೀದಿಯಾಗಿದ್ದು, ಇದರ ಪಕ್ಕದಲ್ಲಿರುವ ಬೃಹತ್ ಹುಲ್ಲುಹಾಸಿನಲ್ಲಿ ಏಕಕಾಲಕ್ಕೆ ಸುಮಾರು ಒಂದು ಲಕ್ಷ ಮಂದಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ.

ಕೇಸರಿ ಸಂಘಟನೆಗಳು ಟೀಲೆವಾಲಿ ಮಸೀದಿಯನ್ನು ಲಕ್ಷಣ ತಿಲಾ ಎಂದು ಪ್ರತಿಪಾದಿಸುತ್ತಿವೆ. ಇದನ್ನು ಮೊಘಲರ ಕಾಲದಲ್ಲಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದೂ ಹೇಳುತ್ತಿದ್ದಾರೆ. ಆದರೆ, ಈ ಮಸೀದಿಯನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನುವ ಹೇಳಿಕೆಗಳನ್ನು ಮುಸ್ಲಿಮರು ತಿರಸ್ಕರಿಸಿದ್ದು, ‘ಇದು ಕೇಸರಿ ಸಂಘಟನೆಗಳ ಪ್ರಚಾರವಲ್ಲದೆ ಬೇರೇನೂ ಅಲ್ಲ’ ಎಂದು ಮಸೀದಿಯ ಇಮಾಮ್ ಸೈಯದ್ ಫಜ್ಲುಲ್ ಮನ್ನಾನ್ ಹೇಳಿದ್ದಾರೆ.

ಲಖನೌ ನಗರವನ್ನು ರಾಮನ ಕಿರಿಯ ಸಹೋದರ ಲಕ್ಷ್ಮಣ ನಿರ್ಮಿಸಿದ್ದು, ನಗರದ ಹಿಂದಿನ ಹೆಸರು ‘ಲಖನ್‌ಪುರಿ’ ಎಂದಾಗಿತ್ತು ಎಂದೂ ಕೇಸರಿ ಸಂಘಟನೆಗಳು ಈ ಹಿಂದೆ ಪ್ರತಿಪಾದಿಸಿದ್ದವು. ಅಷ್ಟೇ ಅಲ್ಲ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯ ಸರ್ಕಾರವು ಲಖನೌವನ್ನು ಲಖನ್‌ಪುರ ಅಥವಾ ಲಕ್ಷ್ಮಣಪುರಿ ಎಂದು ಮರು ನಾಮಕಾರಣ ಮಾಡಲಿದೆ ಎಂದೂ ಸುಳಿವು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು