ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ‌ | ಲ್ಯಾಂಡಿಂಗ್‌ ವೇಳೆ ವಿಮಾನ ದುರಂತ: ಪೈಲಟ್‌ಗಳು ಸೇರಿ 17 ಮಂದಿ ಸಾವು

ಕೋಯಿಕ್ಕೋಡ್‌: ಹೋಳಾದ ಏರ್‌ ಇಂಡಿಯಾ ವಿಮಾನ
Last Updated 8 ಆಗಸ್ಟ್ 2020, 6:47 IST
ಅಕ್ಷರ ಗಾತ್ರ
ADVERTISEMENT
""

ಕೋಯಿಕ್ಕೋಡ್‌: ದುಬೈಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು (ಐಎಕ್ಸ್‌ 1344) ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿದೆ. ಶುಕ್ರವಾರ ಸಂಜೆ 7.40ಕ್ಕೆ ನಡೆದ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರನ್‌ವೇಯನ್ನು ದಾಟಿ ಮುಂದೆ ಸಾಗಿದ ವಿಮಾನವು 35 ಅಡಿ ಕಣಿವೆಗೆ ಬಿದ್ದು ಎರಡು ತುಂಡಾಯಿತು ಎಂದು ನಾಗರಿಕ ವಾಯುಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ವಿಮಾನವು ರನ್‌ವೇಯಲ್ಲಿ ಇಳಿಯುವ ವೇಳೆಗೆ ಸ್ಕಿಡ್‌ ಆಯಿತು. ಈ ಸಂದರ್ಭದಲ್ಲಿ ಬೆಂಕಿ ಉಂಟಾಗಿಲ್ಲ. ಕೋವಿಡ್‌ ಪಿಡುಗಿನಿಂದಾಗಿ ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಆರಂಭಿಸಲಾದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಈ ವಿಮಾನ ಹಾರಾಟ ನಡೆಸಿತ್ತು.

ವಿಮಾನದಲ್ಲಿ 174 ವಯಸ್ಕರು ಮತ್ತು 10 ಪುಟ್ಟ ಮಕ್ಕಳಿದ್ದರು. ಐವರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಲಟ್‌ ದೀಪಕ್‌ ಸಾಠೆ ಮೃತಪಟ್ಟಿದ್ದಾರೆ. ಅವರು ಭಾರತೀಯ ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದರು. ವಿಮಾನ ತಪಾಸಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಪ್ರತಿಕೂಲ ಹವಾಮಾನವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಇಳಿಯುವುದು ಸುಮಾರು 30 ನಿಮಿಷ ತಡವಾಗಿತ್ತು.

ಏರ್‌ ಇಂಡಿಯಾದ ಅಂಗಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೋಯಿಂಗ್‌ 737 ವಿಮಾನಗಳು ಮಾತ್ರ ಇವೆ.

ರಕ್ಷಣಾ ಕಾರ್ಯಾಚರಣೆ: ರಕ್ಷಣಾ ಕಾರ್ಯಾಚರಣೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೂಚಿಸಿದ್ದಾರೆ. ರಾಜ್ಯದ ಸಚಿವ ಎ.ಸಿ.ಮೊಯ್ದೀನ್‌ ಅವರನ್ನು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿಗೆ ನಿಯೋಜಿಸಲಾಗಿದೆ. ಪೊಲೀಸ್‌ ಮಹಾ ನಿರೀಕ್ಷಕರೊಬ್ಬರು ಕೂಡ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕೋಯಿಕ್ಕೋಡ್‌ ಮತ್ತು ಮಲಪ್ಪುರ ಜಿಲ್ಲೆಗಳ ಅಗ್ನಿಶಾಮಕ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಂಭೀರವಾಗಿ ಗಾಯಗೊಂಡವರನ್ನು ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಲುಪಿದ್ದು ರಕ್ಷಣಾ ಕಾರ್ಯಗಳು ನಡೆಯುತ್ತಿವೆ. 123ಕ್ಕಿಂತಲೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿ ಒಟ್ಟು 190ಇದ್ದರು.ಇಬ್ಬರು ಪೈಲಟ್‌ಗಳು, ನಾಲ್ವರು ಸಿಬ್ಬಂದಿ, 174 ಪ್ರಯಾಣಿಕರ ಜತೆ 10 ಮಕ್ಕಳು ಇದ್ದರು ಎಂದು ಡಿಜಿಸಿಎ ಮಾಹಿತಿ ನೀಡಿದೆ

ಮೃತರ ಪೈಕಿ ಪೈಲಟ್ ದೀಪಕ್ ವಿ ಸಾಠೆ ಎಂದು ಗುರುತಿಸಲಾಗಿದೆ. ಅವರು ವಿಮಾನ ಹಾರಾಟದಲ್ಲಿ ಅನುಭವಿಯಾಗಿದ್ದರು. ಅಲ್ಲದೇ, ಭಾರತೀಯ ವಾಯುಪಡೆಯಲ್ಲೂ ಅವರು ಕಾರ್ಯನಿರ್ವಹಿಸಿದ್ದರು.

ವಿಮಾನ ಎರಡು ತುಂಡಾಗಿದೆ: ಡಿಜಿಸಿಎ ಹೇಳಿಕೆ

ದುಬೈನಿಂದ ಕೋಯಿಕ್ಕೋಡ್‌ಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(ಎಎಕ್ಸ್‌ಬಿ 1344, ಬಿ 737) 10ನೇ ರನ್‌ವೇಗೆ ಇಳಿದ ನಂತರ ಚಲಿಸುವುದನ್ನು ಮುಂದುವರೆಸಿದೆ. ರೇನ್‌ವೇ ಅಂತ್ಯಕ್ಕೆ ಬಂದಾಗ ಭಾರಿ ಮಳೆಯ ಕಾರಣ ಕಣಿವೆಯಲ್ಲಿ ಕೆಳಗೆ ಬಿದ್ದು ಎರಡು ತುಂಡುಗಳಾಗಿ ಒಡೆದಿದೆ ಎಂದು ಡಿಜಿಸಿಎ ತಿಳಿಸಿದೆ.

ಮಾಹಿತಿ ಪಡೆದ ಪ್ರಧಾನಿ ಮೋದಿ

ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಂದ ಮಾಹಿತಿ ಪಡೆದಿದ್ದಾರೆ. ಕೋಯಿಕ್ಕೋಡ್‌ ಮತ್ತು ಮಲಪ್ಪುರಂನ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಪಿಣರಾಯಿ ವಿಜಯನ್‌ ಅವರು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಚರಣೆಗೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಸಚಿವ ಎ.ಸಿ ಮೊಯಿದ್ದೀನ್‌ ಅವರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಲ್ಯಾಂಡಿಗ್‌ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಪ್ರಯಾಣಿಕರು, 10 ಮಕ್ಕಳು, ಇಬ್ಬರು ಪೈಲಟ್‌ಗಳು ಮತ್ತು 5 ಕ್ಯಾಬಿನ್ ಸಿಬ್ಬಂದಿ ಇದ್ದಾರು. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮಾಧ್ಯಮ ಡಿಜಿ ರಾಜೀವ್ ಜೈನ್ ತಿಳಿಸಿದ್ದಾರೆ.

ವಿಮಾನ ದುರಂತಕ್ಕೆ ಸಂಬಂಧಿಸಿದ್ದಂತೆ ದುಬೈನಲ್ಲಿರುವ ಭಾರತೀಯ ಕನ್ಸುಲೇಟ್‌ ಜನರಲ್‌ ಟ್ವೀಟ್‌ ಮಾಡಿದ್ದು, ಹೆಲ್ಪ್‌ ಲೈನ್‌ ನಂಬರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. 056 546 3903, 0543090572, 0543090572, 0543090575 ಸಂಖ್ಯೆಯಲ್ಲಿ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಕನ್ಸುಲೇಟ್‌ ಕಚೇರಿ ತಿಳಿಸಿದೆ.

ಮೋದಿ ಟ್ವೀಟ್

ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ವಿಮಾನ ದುರಂತದ ಬಗ್ಗೆ ದುಃಖ ವ್ಯಕ್ತ ಪಡಿಸಿದ ಮೋದಿ ಗಾಯಗೊಂಡವರು ಶೀಘ್ರವೇ ಗುಣವಾಗಲಿ ಎಂದು ಆಶಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ಸಂಬಂಧಪಟ್ಟ ಇಲಾಖೆಯವರು ಎಲ್ಲ ರೀತಿಯ ನೆರವುಗಳನ್ನು ಒದಗಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT