ಶನಿವಾರ, ಸೆಪ್ಟೆಂಬರ್ 19, 2020
22 °C

ರಕ್ಷಣೆಗೆ ಧಾವಿಸಿದ, ರಕ್ತದಾನಕ್ಕೆ ಸಾಲು ನಿಂತ ಕೇರಳಿಗರ ಬಗ್ಗೆ ಪ್ರಶಂಸೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಯಿಕ್ಕೋಡ್‌: ಲ್ಯಾಂಡ್‌ ಆಗುವ ವೇಳೆ ರನ್‌ವೇನಿಂದ ಜಾರಿ ಬಿದ್ದು ತುಂಡಾದ ವಿಮಾನದಲ್ಲಿದ್ದವರ ರಕ್ಷಣೆಗೆ ಧಾವಿಸಿದ ಸ್ಥಳೀಯರು ಮತ್ತು ಅಧಿಕಾರಿಗಳ ಕಾರ್ಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಶಂಸಿಸಿದ್ದಾರೆ. ಇಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಕೇರಳಿಗರು ಮತ್ತು ಮಲಯಾಳಿಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಕೋಯಿಕ್ಕೋಡ್‌ ಮತ್ತು ಮಲಪುರ ಜನರ ಉಪಕಾರದ ಕುರಿತು ಟ್ವಿಟರ್‌ನಲ್ಲಿ ಚರ್ಚೆಗಳು ನಡೆಯುತ್ತಿದ್ದು, #Malappuram ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

ದುಬೈನಿಂದ 190 ಮಂದಿಯನ್ನು ಹೊತ್ತು ಕೋಯಿಕೋಡ್‌ನ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏರ್‌ ಇಂಡಿಯಾ ವಿಮಾನ ಶುಕ್ರವಾರ ರಾತ್ರಿ 7.30ರ ಸಮಯದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ ರನ್‌ವೇನಿಂದ 35 ಅಡಿ ಆಳದ ಕಣಿವೆಗೆ ಬಿದ್ದು ಎರಡು ತುಂಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್‌ಗಳೂ ಸೇರಿ 18 ಮಂದಿ ಮೃತಪಟ್ಟು 123ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.‌

ಈ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ನಿನ್ನೆ, ಸ್ಥಳೀಯರು ಮತ್ತು ಅಧಿಕಾರಿಗಳು ಕ್ಷಿಪ್ರವಾಗಿ ಸ್ಪಂದಿಸಿ, ಪ್ರತಿಕೂಲ ಹವಾಮಾನ, ಕೋವಿಡ್‌ ಭೀತಿಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹೀಗಾಗಿ ಪರಿಸ್ಥಿತಿಯೇ ಬದಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಲು ಆಸ್ಪತ್ರೆಯಲ್ಲಿ ಜನರು ಉದ್ದದ ಸರತಿ ಸಾಲುಗಳಲ್ಲಿ ನಿಂತದ್ದು ಒಂದು ಉದಾಹರಣೆಯಾಗಿ ನಿಂತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ವಿಮಾನ ದುರಂತಕ್ಕೀಡಾಗುತ್ತಲೇ ಸ್ಥಳೀಯರು ಸ್ಪಂದಿಸಿದ ರೀತಿ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಗಾಯಾಳುಗಳನ್ನು ವಿಮಾನದಿಂದ ಹೊರಗೆ ತರುತ್ತಿರುವುದು, ಅವರನ್ನು ಆಸ್ಪತ್ರೆಗೆ ಸೇರಿಸಲು ಜನ ವಾಹನಗಳನ್ನು ತಂದಿದ್ದು, ರಕ್ತದಾನ ಮಾಡಲು ಆಸ್ಪತ್ರೆ ಎದುರು ಯುವಕರು ಸರಿ ರಾತ್ರಿಯಲ್ಲೂ, ಕೋವಿಡ್‌ ಭೀತಿಯನ್ನೂ ಲೆಕ್ಕಿಸದೇ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು, ಚಿತ್ರಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌ ಅಗುತ್ತಿವೆ. ಹೀಗಾಗಿ #Malappuram ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು. ಟ್ವಿಟರ್‌ನಲ್ಲಿ ಸ್ಥಳೀಯರ ಉಪಕಾರವನ್ನು ಸ್ಮರಿಸಲಾಯಿತು.

‘ಜನರ ಈ ರೀತಿಯ ಸ್ಪಂದನೆಯನ್ನು ನಾವು ಹಲವು ಬಾರಿ ನೋಡಿದ್ದೇವೆ. ಪ್ರತಿಕೂಲ ಸನ್ನಿವೇಶದಲ್ಲಿ ಕೇರಳದ ಜನರು ಅದರ ವಿರುದ್ಧ ಒಗ್ಗೂಡುತ್ತಾರೆ. ಮಾನವೀಯತೆ ಎಂಬ ಒಳ್ಳೆಯತನ ನಮ್ಮ ಸಮಾಜದ ತಳಪಾಯವಾಗಿದೆ. ಈ ಸನ್ನಿವೇಶದಲ್ಲಿ ನಾವು ಮಲಪುರ ಮತ್ತು ಕೋಯಿಕ್ಕೋಡ್‌ ಜನರನ್ನು ಸ್ಮರಿಸೋಣ,’ ಎಂದು ವಿಜಯನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಕೇರಳದ ಸ್ಥಳೀಯರು ಕಾರ್ಯರೂಪಕ್ಕಿಳಿದಿದ್ದಾರೆ. ಪ್ರವಾಹದ, ಸಾಂಕ್ರಾಮಿಕ ರೋಗ ಮತ್ತು ವಿಮಾನ ದುರಂತದ ಸಮಯದಲ್ಲಿ ಮಲಯಾಳಿಗಳು ನಮ್ಮ ಚೇತನ ಮತ್ತು ಏಕತೆಯನ್ನು ಪ್ರದರ್ಶಿಸಿದ್ದಾರೆ. ಅಪಘಾತ ಸಂಭವಿಸಿದಾಗ, ಜನ ಧರ್ಮ, ಜಾತಿ, ವರ್ಗವನ್ನು ಲೆಕ್ಕಿಸದೆ ತಮ್ಮನ್ನು ತಾವು ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾರೆ. ಅದೇ ನನ್ನ ಕೇರಳ ಮಾದರಿ,’ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು