ಶನಿವಾರ, ನವೆಂಬರ್ 26, 2022
21 °C

ಸಚಿನ್ ಪೈಲಟ್ ಬಂಡಾಯದಲ್ಲಿ ಅಮಿತ್ ಶಾ ಪಾತ್ರ ಇರುವುದಕ್ಕೆ ಸಾಕ್ಷ್ಯವಿದೆ: ಗೆಹಲೋತ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸಚಿನ್‌ ಪೈಲಟ್‌ ನಂಬಿಕೆ ದ್ರೋಹಿ. ಅವರು ನನ್ನ ಸ್ಥಾನ ತುಂಬಲಾರರು. 2020ರಲ್ಲಿ ಅವರು ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದರು. ತಮ್ಮ ಸರ್ಕಾರವನ್ನೇ ಉರುಳಿಸಲು ಯತ್ನಿಸಿದ್ದರು’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಗುರುವಾರ ವಾಗ್ದಾಳಿ ನಡೆಸಿದ್ದಾರೆ. 

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಪಕ್ಷದ ನಾಯಕ ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್‌ ಜೋಡೊ ಯಾತ್ರೆಯು ಕೆಲ ದಿನಗಳಲ್ಲಿ ರಾಜ್ಯ ಪ್ರವೇಶಿಸಲಿದೆ. ಇಂತಹ ಸಮಯದಲ್ಲಿ ಗೆಹಲೋತ್‌ ಹೇಳಿಕೆ ನೀಡಿದ್ದಾರೆ.

ಎನ್‌ಡಿಟಿವಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಗೆಹಲೋತ್‌, ‘ಪೈಲಟ್‌ ಅವರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕೈವಾಡವಿತ್ತು. ಸರ್ಕಾರ ಕೆಡವುವ ಉದ್ದೇಶದಿಂದ ಪೈಲಟ್‌ಗೆ ನಿಷ್ಠರಾಗಿದ್ದ ಕೆಲ ಶಾಸಕರು ಗುರುಗ್ರಾಮದ ರೆಸಾರ್ಟ್‌ವೊಂದಕ್ಕೆ ತೆರಳಿದ್ದರು. ಸುಮಾರು ಒಂದು ತಿಂಗಳು ಅಲ್ಲಿದ್ದರು. ಆಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಬಂಡಾಯ ಶಾಸಕರನ್ನು ಭೇಟಿಯಾಗಿದ್ದರು. ಪೈಲಟ್ ಸೇರಿದಂತೆ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಎಲ್ಲಾ ಶಾಸಕರಿಗೂ ಬಿಜೆಪಿಯು ತಲಾ ₹10 ಕೋಟಿ ಮೊತ್ತ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ’ ಎಂದು ಹೇಳಿದ್ದಾರೆ.

‘‍ಪಕ್ಷವು ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಯಸಿದ್ದೇ ಆದಲ್ಲಿ, ನನ್ನ ಸ್ಥಾನಕ್ಕೆ ಸಚಿನ್‌ ಪೈಲಟ್‌ ಅವರನ್ನು ಬಿಟ್ಟು ಹಾಲಿ ಇರುವ 102 ಶಾಸಕರ ಪೈಕಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ. ಅದಕ್ಕೆ ಅಭ್ಯಂತರವೇನಿಲ್ಲ’ ಎಂದಿದ್ದಾರೆ.   

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರೊಬ್ಬರು ತಮ್ಮ ಸರ್ಕಾರವನ್ನೇ ಕೆಡವಲು ಮುಂದಾಗಿದ್ದರ ಉದಾಹರಣೆಯೇ ಇಲ್ಲ. ಅಂತಹ ದ್ರೋಹಿಯನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವೇ. ಅದನ್ನು ಪಕ್ಷದ ಶಾಸಕರು ಒಪ್ಪುತ್ತಾರೆಯೇ. ಪೈಲಟ್‌ ಅವರು ತಮ್ಮ ತಪ್ಪಿಗಾಗಿ ಶಾಸಕರ ಬಳಿ ಕ್ಷಮೆಯಾಚಿಸಿ ಅವರ ಮನಸ್ಸು ಗೆದ್ದಿದ್ದರೆ, ಆಗ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಆದರೆ ಅವರು ಈವರೆಗೂ ಕ್ಷಮೆಯಾಚಿಸಿಲ್ಲ’ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗವಹಿಸಿರುವ ಸಚಿನ್‌ ಪೈಲಟ್‌ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು