ಭಾನುವಾರ, ಮೇ 29, 2022
30 °C

ಮತ ನೀಡಿ, ₹50ಕ್ಕೆ ಬಾಟಲಿ ಮದ್ಯ ಪಡೆಯಿರಿ: ಆಂಧ್ರ ಪ್ರದೇಶ ಬಿಜೆಪಿ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: 'ರಾಜ್ಯದಲ್ಲಿ ಬಿಜೆಪಿಗೆ ಮತ ನೀಡಿ ಅಧಿಕಾರಕ್ಕೆ ತಂದರೆ ₹75ಕ್ಕೆ ಬಾಟಲಿ ಮದ್ಯ ಪೂರೈಕೆ ಮಾಡಲಾಗುತ್ತದೆ. ಹೆಚ್ಚುವರಿ ಆದಾಯ ಉಳಿಕೆಯಾದರೆ, ಮದ್ಯದ ಬೆಲೆಯನ್ನು ₹50ಕ್ಕೆ ಇಳಿಕೆ ಮಾಡಲಾಗುವುದು' ಎಂದು ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಭರವಸೆ ನೀಡಿದ್ದಾರೆ.

ಮಂಗಳವಾರ ವಿಜಯವಾಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಬಿಜೆಪಿಗೆ ಮತ ನೀಡಿ, ನಾವು ನಿಮಗೆ ₹75ಕ್ಕೆ ಮದ್ಯ ಸಿಗುವಂತೆ ಮಾಡುತ್ತೇವೆ ಹಾಗೂ ಆದಾಯ ಹೆಚ್ಚಳವಾದರೆ, ₹50ಕ್ಕೆ ಮದ್ಯ ಪೂರೈಸುತ್ತೇವೆ' ಎಂದಿದ್ದಾರೆ.

ಕಳಪೆ ಗುಣಮಟ್ಟದ ಮದ್ಯವನ್ನು ರಾಜ್ಯದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಪಕ್ಷದ ವಿರುದ್ಧ ಬಿಜೆಪಿ ಅಧ್ಯಕ್ಷ ಸೋಮು ಆರೋಪಿಸಿದ್ದಾರೆ. ಕಡಿಮೆ ದರದಲ್ಲಿ ಮದ್ಯ ಸಿಗಬೇಕಾದರೆ 2024ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಜನರಲ್ಲಿ ಕೇಳಿದ್ದಾರೆ.

ಭಾರತದಲ್ಲೇ ತಯಾರಿಸಲಾಗುತ್ತಿರುವ ವಿದೇಶಿ ಮದ್ಯಗಳ (ಐಎಂಎಫ್‌ಎಲ್‌) ಮೇಲಿನ ಹೆಚ್ಚುವರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ಮದ್ಯದ ಬೆಲೆಯನ್ನು ಶೇಕಡ 15ರಿಂದ 20ರಷ್ಟು ಇಳಿಕೆ ಮಾಡಲು ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ಆದೇಶಿಸಿದೆ.

ಆಂಧ್ರ ಪ್ರದೇಶದಲ್ಲಿ ಮದ್ಯ ಸೇವನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯ ಸರ್ಕಾರವು ಮದ್ಯದ ಬೆಲೆಯನ್ನು ಶೇಕಡ 75ರಷ್ಟು ಏರಿಕೆ ಮಾಡಿತ್ತು.

ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಾರ್ಟಿಯನ್ನು (ಟಿಡಿಪಿ) ಗುರಿಯಾಗಿಸಿದ ಬಿಜೆಪಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 'ಕುಟುಂಬದ ಆಡಳಿತ' ನಡೆಯುತ್ತಿದ್ದು, ಬಿಜೆಪಿಗೆ ಮತ ನೀಡುವಂತೆ ಮತದಾರರನ್ನು ಕೋರಿದ್ದಾರೆ.

ರಾಜ್ಯ ಸರ್ಕಾರದ ಕೆಲವು ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೇರ ಪಾವತಿ ಮಾಡುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಸೋಮು ವೀರರಾಜು, ಒಬ್ಬ ವ್ಯಕ್ತಿ ತಿಂಗಳಿಗೆ ಸರಾಸರಿ 12,000 ರೂಪಾಯಿಯಷ್ಟು ಮದ್ಯ ಸೇವನೆ ಮಾಡುತ್ತಾನೆ. ಆ ಎಲ್ಲ ಹಣವನ್ನು ಜಗನ್‌ ಮೋಹನ್‌ ರೆಡ್ಡಿ ಅವರು ಸಂಗ್ರಹಿಸಿಕೊಂಡು, ಅದನ್ನೇ ಯೋಜನೆಯ ರೂಪದಲ್ಲಿ ಜನರಿಗೆ ಮರಳಿಸುತ್ತಿರುವುದಾಗಿ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು