ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಸ್ಥಳಗಳ ಕಾಯ್ದೆ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

1991ರ ಕಾಯ್ದೆಯ 2, 3, 4ನೇ ಸೆಕ್ಷನ್‌ ಅಸಾಂವಿಧಾನಿಕ ಎಂಬ ಪ್ರತಿಪಾದನೆ
Last Updated 28 ಮೇ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991ರ ಕೆಲವು ಸೆಕ್ಷನ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಧರ್ಮ, ಜನಾಂಗ, ಜಾತಿ, ಲಿಂಗ ಹಾಗೂ ಹುಟ್ಟಿದ ಸ್ಥಳದ ಆಧಾರದಲ್ಲಿ ತಾರತಮ್ಯ ನಿಷೇಧದಂತಹ ಸಾಂವಿಧಾನಿಕ ಅವಕಾಶಗಳನ್ನು ಈ ಸೆಕ್ಷನ್‌ಗಳು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತವೆ ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಕೇಂದ್ರವು ಘೋಷಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮಥುರಾ ನಿವಾಸಿ ದೇವಕೀನಂದನ ಠಾಕೂರ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಕಾಯ್ದೆಯ 2, 3 ಮತ್ತು 4ನೇ ಸೆಕ್ಷನ್‌ಗಳ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ತಮ್ಮ ಪೂಜಾ ಸ್ಥಳಗಳು, ತೀರ್ಥಯಾತ್ರೆ ಸ್ಥಳಗಳು ಮತ್ತು ತಮ್ಮ ದೇವರ ಆಸ್ತಿಯನ್ನು ನ್ಯಾಯಾಂಗದ ಮೂಲಕ ಹಿಂದಕ್ಕೆ ಪಡೆದುಕೊಳ್ಳುವ ಅವಕಾಶವನ್ನು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಗೆ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಗೆ ಆಗಿರುವ ನಷ್ಟವು ಬಹಳ ದೊಡ್ಡದು. ಏಕೆಂದರೆ, ಕಾಯ್ದೆಯ 2, 3, ಮತ್ತು 4ನೇ ಸೆಕ್ಷನ್‌ನಿಂದಾಗಿ ನ್ಯಾಯಾಂಗದ ಮೂಲಕ ಪರಿಹಾರ ಪಡೆದುಕೊಳ್ಳುವ ಅವಕಾಶವೇ ಇಲ್ಲದಂತಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪೂಜಾ ಸ್ಥಳಗಳ ಸ್ವರೂಪ ಬದಲಾವಣೆಯನ್ನು ಸೆಕ್ಷನ್‌ 3 ನಿಷೇಧಿಸುತ್ತದೆ. 1947ರ ಆಗಸ್ಟ್ 15ರಂದು ಇದ್ದಪೂಜಾ ಸ್ಥಳಗಳ ಸ್ವರೂಪವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ಸೆಕ್ಷನ್‌ 4 ನಿಷೇಧಿಸುತ್ತದೆ.

ನ್ಯಾಯಾಂಗದ ಪರಿಶೀಲನೆಯ ಅವಕಾಶವನ್ನೇ ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರವು ತನ್ನ ಶಾಸನ ರೂಪಿಸುವಿಕೆ ಅಧಿಕಾರವನ್ನು ಉಲ್ಲಂಘಿಸಿದೆ. ನ್ಯಾಯಾಂಗದ ಪರಿಶೀಲನೆಯ ಅವಕಾಶವು ಸಂವಿಧಾನದ ಮೂಲ ಸ್ವರೂಪವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

‘ಕೃಷ್ಣ ಜನ್ಮಸ್ಥಾನದ ಪುನರುತ್ಥಾನಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ, ಈ ಕಾಯ್ದೆ ರೂಪಿಸುವಾಗ ಕೇಂದ್ರವು ಅಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿತು. ಆದರೆ, ಕೃಷ್ಣ ಕೂಡ ವಿಷ್ಣುವಿನ ಅವತಾರವಾಗಿದ್ದರೂ ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಲಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕಾಯ್ದೆಯು ಹಲವು ಕಾರಣಗಳಿಂದಾಗಿ ಅಸಾಂವಿಧಾನಿಕ; ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯು ಮೊಟಕುಗೊಳಿಸಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT