ಸೋಮವಾರ, ಮೇ 17, 2021
21 °C
ರಾಜ್ಯಸಭೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಹುದ್ದೆಗಳಿಗೆ ನೇಮಕ: ನಿಷ್ಠರಿಗೆ ಮಣೆ

ಪತ್ರ ಬರೆದವರಿಗೆ ಸೋನಿಯಾ ಗಾಂಧಿ ಪ್ರಬಲ ಸಂದೇಶ: ಪ್ರಮುಖ ಹುದ್ದೆಗಳಲ್ಲಿಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಬಂಡಾಯ’ ಮುಖಂಡರನ್ನು ಕಡೆಗಣಿಸಿ ನಿಷ್ಠರಿಗೆ ಕೆಲವು ಹುದ್ದೆಗಳನ್ನು ಕಾಂಗ್ರೆಸ್‌ ಪಕ್ಷವು ಗುರುವಾರ ನೀಡಿದೆ.

ಯುವ ಮುಖಂಡರಾದ ಗೌರವ್‌ ಗೊಗೊಯಿ ಮತ್ತು ರವನೀತ್‌ ಸಿಂಗ್‌ ಬಿಟ್ಟು ಅವರನ್ನು ಕ್ರಮವಾಗಿ ಲೋಕಸಭೆಯ ಉಪನಾಯಕ ಮತ್ತು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್‌ಗೆ ಪೂರ್ಣಾವಧಿ ನಾಯಕತ್ವ ಬೇಕು ಎಂದು ಪಕ್ಷದ ಅಧ್ಯಕ್ಷರಿಗೆ ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ್ದ ಮನೀಶ್‌ ತಿವಾರಿ ಅವರನ್ನು ಕಡೆಗಣಿಸಲಾಗಿದೆ.

ರಾಜ್ಯಸಭೆಯ ಮುಖ್ಯ ಸಚೇತಕರನ್ನಾಗಿ ಹಿರಿಯ ಮುಖಂಡ ಜೈರಾಮ್‌ ರಮೇಶ್‌ ಅವರನ್ನು ನೇಮಿಸಲಾಗಿದೆ. 

ಸಂಸತ್ತಿನಲ್ಲಿ ಪಕ್ಷವು ಅನುಸರಿಸಬೇಕಾದ ಕಾರ್ಯತಂತ್ರವನ್ನು 10 ಸದಸ್ಯರಿರುವ ಅನೌಪಚಾರಿಕ ಗುಂಪು ನಿರ್ಧರಿಸಲಿದೆ. ಉಭಯ ಸದನದಲ್ಲಿ ಪಕ್ಷದ ನಾಯಕ, ಉಪ ನಾಯಕ, ಮುಖ್ಯಸಚೇತಕರು ಇದರ ಸದಸ್ಯರು. ಈ ಸಮಿತಿಗೆ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಪಕ್ಷದ ಖಜಾಂಚಿ ಅಹ್ಮದ್‌ ಪಟೇಲ್‌ ಮತ್ತು ಕೆ.ಸಿ. ವೇಣುಗೋಪಾಲ್‌ ಅವರನ್ನೂ ಸೇರಿಸಲಾಗಿದೆ. 

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಉಪ ನಾಯಕ ಆನಂದ್‌ ಶರ್ಮಾ ತಮ್ಮ ಹುದ್ದೆಯ ಕಾರಣಕ್ಕಾಗಿ ಈ ಸಮಿತಿಯಲ್ಲಿ ಇರುತ್ತಾರೆ. ಈ ಇಬ್ಬರೂ ಪತ್ರಕ್ಕೆ ಸಹಿ ಹಾಕಿದವರು.

ಕೇಂದ್ರ ಸರ್ಕಾರವು ಹೊರಡಿಸುವ ಸುಗ್ರೀವಾಜ್ಞೆಗಳನ್ನು ಪರಿಶೀಲಿಸಲು ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಜೈರಾಮ್‌ ರಮೇಶ್‌ ಈ ಸಮಿತಿಯ ಸಂಚಾಲಕರಾಗಿರುತ್ತಾರೆ. ಪಿ. ಚಿದಂಬರಂ, ದಿಗ್ವಿಜಯ ಸಿಂಗ್‌, ಗೌರವ್‌ ಗೊಗೊಯಿ, ಅಮರ್‌ ಸಿಂಗ್‌ ಸದಸ್ಯರು. 

ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಯಾರೊಬ್ಬರಿಗೂ ಹೊಸ ನೇಮಕಗಳಲ್ಲಿ ಅವಕಾಶ ದೊರೆತಿಲ್ಲ. 

ಕಾನೂನು ಸಂಬಂಧಿ ಸಲಹೆಗಳಿಗೆ ಪಕ್ಷವು ಕಪಿಲ್‌ ಸಿಬಲ್‌ ಅವರನ್ನೇ ಮುಖ್ಯವಾಗಿ ಅವಲಂಬಿಸಿತ್ತು. ಈಗ, ಚಿದಂಬರಂ ಅವರ ಕಾನೂನು ಪಾಂಡಿತ್ಯವನ್ನು ನೆಚ್ಚಿಕೊಳ್ಳಲು ನಿರ್ಧರಿಸಲಾಗಿದೆ. ಪತ್ರಕ್ಕೆ ಸಿಬಲ್‌ ಸಹಿ ಹಾಕಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು