ಶನಿವಾರ, ಮೇ 21, 2022
19 °C

ಐಎಸ್ಐ ಸಹಕಾರ: ಭಾರತಕ್ಕೆ ನುಸುಳಲು 200 ಭಯೋತ್ಪಾದಕರ ಸಂಚು–ಬಂಧಿತ ಪಾಕ್ ಉಗ್ರ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಯೋತ್ಪಾದಕರು ಭಾರತದೊಳಗೆ ನುಸುಳಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಯು (ಐಎಸ್‌ಐ) ಸಹಕರಿಸುತ್ತಿರುವ ಮಾಹಿತಿಯನ್ನು ಬಂಧಿತ ಉಗ್ರ ಅಲಿ ಬಾಬರ್‌ (19) ಹೊರ ಹಾಕಿದ್ದಾನೆ. ಸೆಪ್ಟೆಂಬರ್‌ 26ರಂದು ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಿಂದ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಅಲಿ ಬಾಬರ್‌ನನ್ನು ಬಂಧಿಸಿತ್ತು.

ಡಿಸೆಂಬರ್‌ನಲ್ಲಿ ತೀವ್ರ ಹಿಮಪಾತ ಆಗುವುದಕ್ಕೂ ಮುನ್ನವೇ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಸುಮಾರು 200 ಭಯೋತ್ಪಾದಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧ ಅಡಗುತಾಣಗಳಲ್ಲಿ ಕಾಯುತ್ತಿರುವುದಾಗಿ ಬಾಬರ್‌ ಹೇಳಿದ್ದಾನೆ. ಐಎಸ್‌ಐ ಬೆಂಬಲದ ಮೂಲಕ ಉಗ್ರರು ದೇಶದ ಒಳಗೆ ನುಸುಳಲು ಸಜ್ಜಾಗಿರುವುದಾಗಿ ಗುರುವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮುಂದೆ ಬಾಬರ್‌ ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳಲ್ಲಿ ಪಾಕಿಸ್ತಾನದ ಸೇನೆಯೂ ಸಹ ಉಗ್ರರಿಗೆ ಸಹಕರಿಸುತ್ತಿರುವುದಾಗಿ ಹೇಳಿದ್ದಾನೆ.

ಉರಿ ವಲಯದಲ್ಲಿ ಭಾರತೀಯ ಸೇನೆಯು ಸೆಪ್ಟೆಂಬರ್‌ 26ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಬಾಬರ್‌ನನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್‌ 18ರಂದು ಇತರೆ ಐದು ಜನ ಉಗ್ರರೊಂದಿಗೆ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಿದ್ದಾಗಿ ಬಾಬರ್‌ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಇದನ್ನೂ ಓದಿ–

ದೇಶದೊಳಗೆ ನುಸುಳಲು ಬಳಸಿದ ಮಾರ್ಗ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಳ್ಳಲು ಮಾಡಿಕೊಂಡಿದ್ದ ಸ್ಥಳೀಯರ ಸಂಪರ್ಕ ಸೇರಿದಂತೆ ಇನ್ನಷ್ಟು ಮಾಹಿತಿಯನ್ನು ಕಲೆಹಾಕಲು ಎನ್‌ಐಎ ಪ್ರಯತ್ನಿಸುತ್ತಿದೆ.

ಮುಂದಿನ ಕೆಲವು ವಾರಗಳಲ್ಲಿ ಉಗ್ರರು ಒಳನುಸುಳಲು ತೀವ್ರ ಪ್ರಯತ್ನ ನಡೆಸುವ ಕುರಿತು ಗುಪ್ತಚರ ಸಂಸ್ಥೆಗಳಿಂದಲೂ ಎ‌ಚ್ಚರಿಕೆ ರವಾನೆಯಾಗಿದೆ. ಹಿಮ ಸುರಿಯುವಿಕೆಯ ಪ್ರಮಾಣ ಹೆಚ್ಚುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಭಯೋತ್ಪಾದಕರು ಕಾಯುತ್ತಿರುವ ಬಗ್ಗೆ ತಿಳಿಸಲಾಗಿದೆ.

ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಗಸ್ತು ತಿರುಗುವುದನ್ನು ಹೆಚ್ಚಿಸಿದೆ. ಸಿಆರ್‌ಪಿಎಫ್‌, ಕೇಂದ್ರದ ಗುಪ್ತಚರ ಸಂಸ್ಥೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆಗಳು ಭಿಂಬೆರ್‌ ಗಡಿ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿವೆ. ಇತ್ತೀಚೆಗೆ ಉಗ್ರರು ದೇಶದೊಳಗೆ ನುಸುಳಲು ಈ ಪ್ರದೇಶವನ್ನು ಬಳಕೆ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಭಾರತದೊಳಗೆ ನುಸುಳಲು ಐಎಸ್‌ಐ ಎಂಟು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದು, ಉಗ್ರರ ಗುಂಪುಗಳನ್ನು ಒಗ್ಗೂಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ಐಎಸ್‌ಐ ಮತ್ತು ಉಗ್ರರ ನಡುವಿನ ಸಂದೇಶಗಳನ್ನು ಭಾರತದ ಗುಪ್ತಚರ ಸಂಸ್ಥೆಗಳು ಡಿಕೋಡ್‌ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಿವೆ.

ಮುಜಾಫರಬಾದ್‌ನಲ್ಲಿರುವ ಲಷ್ಕರ್‌–ಎ–ತಯ್ಬಾದ ಹೊಸ ಕಚೇರಿಯಲ್ಲಿ ಉಗ್ರ ಸಂಘಟನೆಗಳ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಸಭೆಯಲ್ಲಿ ಜೈಷ್–ಎ–ಮೊಹಮ್ಮದ್‌, ಲಷ್ಕರ್‌–ಎ–ತಯ್ಬಾ ಹಾಗೂ ಅಲ್‌–ಬಾದ್ರೆ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು. ಡಿಸೆಂಬರ್‌ಗೂ ಮುನ್ನ ಉಗ್ರರನ್ನು ಭಾರತದೊಳಗೆ ನುಸುಳುವಂತೆ ಮಾಡಲು ಸ್ಪಷ್ಟ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು