ಗುರುವಾರ , ಅಕ್ಟೋಬರ್ 6, 2022
27 °C

ಆರ್‌ಎಸ್‌ಎಸ್‌ ಸಾಮಾಜಿಕ ಮಾಧ್ಯಮಗಳ ಡಿಪಿಯಲ್ಲಿ ಕೊನೆಗೂ ಕಾಣಿಸಿಕೊಂಡ ರಾಷ್ಟ್ರಧ್ವಜ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶುಕ್ರವಾರ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು ಬದಲಿಸಿದೆ. ಕೇಸರಿ ಧ್ವಜವನ್ನು ತೆಗೆದುಹಾಕಿ ತ್ರಿವರ್ಣ ಧ್ವಜವನ್ನು ಡಿಪಿಯನ್ನಾಗಿ ಮಾಡಿಕೊಂಡಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 2 ಮತ್ತು 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ತಿರಂಗ'ವನ್ನು ಡಿಪಿಯಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದರು.

ಪ್ರಧಾನಿ ಮೋದಿ ಕರೆ ನೀಡಿದ ನಂತರವೂ ಆರ್‌ಎಸ್‌ಎಸ್‌ ತನ್ನ ಸಾಮಾಜಿಕ ಮಾಧ್ಯಮಗಳ ಡಿಪಿಯನ್ನು ಬದಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು.

ಈ ವಿಚಾರವಾಗಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, 'ಸಂಘವೊಂದು ಸ್ವಾತಂತ್ರ್ಯ ಸಿಕ್ಕಿದ ಬಳಿಕ 52 ವರ್ಷಗಳ ವರೆಗೆ ನಾಗ್ಪುರದ ಮುಖ್ಯ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಇದೀಗ ನರೇಂದ್ರ ಮೋದಿ ಕರೆಯನ್ನು ಒಪ್ಪಿಕೊಂಡು ತನ್ನ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರವನ್ನು ಬದಲಿಸಲಿದೆಯೇ' ಎಂದು ಆರ್‌ಎಸ್‌ಎಸ್‌ ಉದ್ದೇಶಿಸಿ ಪ್ರಶ್ನಿಸಿದ್ದರು.

ಇದೇ ವೇಳೆ, ಸಂಘದ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವುದರ ಕುರಿತು ಮಾತನಾಡಿರುವ ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಸಹ-ಪ್ರಭಾರಿ ನರೇಂದ್ರ ಠಾಕೂರ್, ‘ಸಂಘವು ತನ್ನ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಸಾಮಾಜಿಕ ಮಾಧ್ಯಮಗಳ ಡಿಪಿಯಲ್ಲಿ ತಿರಂಗವನ್ನು ಬಳಸಲಿದೆ’ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತರು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

'ಹರ್ ಘರ್ ತಿರಂಗ' ಕಾರ್ಯಕ್ರಮದ ಭಾಗವಾಗಿ ಆಗಸ್ಟ್ 13–15 ರ ಅವಧಿಯಲ್ಲಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಕೇಂದ್ರ ಸರ್ಕಾರ ಜನರಿಗೆ ಕರೆ ನೀಡಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು