ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ವಿಮೋಚನಾ ದಿನ: ಭಾರತ, ಬಾಂಗ್ಲಾ ಸೇನಾ ಯೋಧರ 370 ಕಿ.ಮೀ ಸೈಕಲ್ ಯಾತ್ರೆ

Last Updated 18 ನವೆಂಬರ್ 2021, 10:24 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಂಗ್ಲಾದೇಶದ ವಿಮೋಚಾನೆಗಾಗಿ 1971ರಲ್ಲಿ ನಡೆದ ಯುದ್ಧದ ಸ್ಮರಣೆ ಹಾಗೂ ಬಾಂಗ್ಲಾ ವಿಮೋಚನಾ ದಿನದ ಸುವರ್ಣ ಮಹೋತ್ಸವದ ನೆನಪಿಗಾಗಿ ಉಭಯ ರಾಷ್ಟ್ರಗಳ ಸೇನಾ ಯೋಧರು ಜಂಟಿಯಾಗಿ ಜೆಸ್ಸೋರ್‌ನಿಂದ ಕೋಲ್ಕತ್ತಾದವರೆಗೆ ಜಂಟಿ ಸೈಕಲ್‌ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ಇಲ್ಲಿ ತಿಳಿಸಿದರು.

ತಲಾ 20 ಸೈಕಲಿಸ್ಟ್‌ಗಳಂತೆ, ಎರಡೂ ರಾಷ್ಟ್ರಗಳ ಸೇನಾಪಡೆಯ40 ಮಂದಿ ಸೈನಿಕರು ಈ ಸೈಕಲ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನ.15 ರಂದು ಬಾಂಗ್ಲಾದೇಶದ ಜೆಸ್ಸೋರ್‌ನಿಂದ ಆರಂಭವಾಗಿರುವ ಸೈಕಲ್ ಯಾತ್ರೆ ಹತ್ತು ದಿನಗಳ ಕಾಲ 370 ಕಿ.ಮೀ ದೂರವನ್ನು ಕ್ರಮಿಸಿ ಇದೇ 24ರಂದು ಕೋಲ್ಕತ್ತಾದ ಫೋರ್ಟ್‌ ವಿಲಿಯಂನಲ್ಲಿರುವ ಈಸ್ಟರ್ನ್‌ ಕಮಾಂಡ್ ಪ್ರಧಾನ ಕಚೇರಿಯನ್ನು ತಲುಪಲಿದೆ.

’1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಶೌರ್ಯ ಮತ್ತು ಪರಾಕ್ರಮ ಪ್ರದರ್ಶಿಸಿ, ಹುತಾತ್ಮರಾದ ಸೈನಿಕರಿಗೆ ಸೈಕಲ್ ಯಾತ್ರೆಯ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಆ ಯುದ್ಧದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಹೊಸ ಬಾಂಗ್ಲಾದೇಶ ಹುಟ್ಟಿಗೆ ಕಾರಣವಾಗಿದ್ದನ್ನು ಸ್ಮರಿಸುವುದು ಸೈಕಲ್ ಯಾತ್ರೆಯ ಉದ್ದೇಶವಾಗಿದೆ’ ಎಂದು ರಕ್ಷಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

’ಜೆಸ್ಸೋರ್‌ನಿಂದ ಪ್ರಾರಂಭವಾಗಿರುವ ಈ ಯಾತ್ರೆಯು ಬಾಂಗ್ಲಾದೇಶದ ಜೆನೈದಾ, ಕುಷ್ಟಿಯಾ, ಮೆಹರ್‌ಪುರ, ದರ್ಶನ, ಚುಡಂಗಾ ದಾಟಿ, ಭಾರತದ ಕೃಷ್ಣನಗರ, ರಣಘಾಟ್, ಕಲ್ಯಾಣಿ ಮತ್ತು ಬ್ಯಾರಕ್‌ಪುರದ ಮೂಲಕ ಹಾದು ಹೋಗಲಿದೆ’ ಎಂದು ಅವರು ಹೇಳಿದರು.

ಈ ತಂಡ ಭಾರತದಲ್ಲಿ ಹಿರಿಯರೊಂದಿಗೆ ಸಂವಹನ ನಡೆಸಲಿದೆ. ಹಾಗೆಯೇ ಬಾಂಗ್ಲಾದೇಶದ ಯುದ್ಧ ಸ್ಮಾರಕ ಭವನ 'ಮುಕ್ತಿ ಜೋದ್ಧಸ್‌’ಗೆ ಭೇಟಿ ನೀಡಲಿದೆ. ಜೊತೆಗೆ, ಯುವ ಸಮುದಾಯಕ್ಕೆ ಬಾಂಗ್ಲಾದೇಶದ ವಿಮೋಚನೆಯಲ್ಲಿ ಸೇನಾ ಪಡೆಗಳ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಜತೆಗೆ ಯುವ ಸಮುದಾಯವನ್ನು ಸಶಸ್ತ್ರ ಪಡೆಗಳಿಗೆ ಸೇರುವಂತೆ ಪ್ರೇರೇಪಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT