ಭಾನುವಾರ, ಮೇ 29, 2022
30 °C

ಮೊದಲು ಸ್ವಂತ ರಾಜ್ಯದಲ್ಲಿ ಸಿಲಿಂಡರ್‌ ಬೆಲೆ ಇಳಿಸಿ; ಬಘೇಲ್‌ಗೆ ರಮಣ್‌ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ರಾಯ್‌ಪುರ: ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 500ಕ್ಕಿಂತ ಹೆಚ್ಚಾಗಲು ಬಿಡುವುದಿಲ್ಲ ಎಂದು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಛತ್ತೀಸಗಡ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ರಮಣ್‌ ಸಿಂಗ್‌ ಅವರು, ಬಘೇಲ್‌ ಸರ್ಕಾರವು ತಮ್ಮ ಸ್ವಂತ ರಾಜ್ಯದಲ್ಲಿ ಕಡಿಮೆ ದರದಲ್ಲಿ ಸಿಲಿಂಡರ್‌ ವಿತರಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಡೆಹ್ರಾಡೂನ್‌ನಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಬಘೇಲ್‌, ಮುಂಬರುವ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ತಮ್ಮ (ಕಾಂಗ್ರೆಸ್)‌ ಪಕ್ಷವು ಅಧಿಕಾರಕ್ಕೇರಿದರೆ ಸಿಲಿಂಡರ್‌ ದರ ₹ 500 ಕ್ಕಿಂತ ಹೆಚ್ಚಾಗುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು.

ಈ ಬಗ್ಗೆ ಮಾತನಾಡಿರುವ ರಮಣ್‌, 'ಸರಣಿ ಘೋಷಣೆಗಳು ಆರಂಭವಾಗಿವೆ ಮತ್ತು ಅಧಿಕಾರಕ್ಕೆ ಮರಳುವುದಕ್ಕಾಗಿ ಅವರು ಯಾವುದೇ ಭರವಸೆ ನೀಡಲು ಹಿಂಜರಿಯುವುದಿಲ್ಲ. ಇಂತಹ ಆಶ್ವಾಸನೆಗಳನ್ನು ಕೊಡುವ ಮೊದಲು, ಕಳೆದ ಮೂರು ವರ್ಷಗಳಲ್ಲಿ ಸಿಲಿಂಡರ್‌ಗಳನ್ನು ₹ 500ಕ್ಕೆ ವಿತರಿಸಲಾಗಿದೆಯೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಚುನಾವಣೆಗೆ ಮುನ್ನ ಇಲ್ಲಿಯೂ (ಛತ್ತೀಸಗಡದಲ್ಲೂ) ಇಂತಹ ದೊಡ್ಡ ಘೋಷಣೆಗಳನ್ನು ನೀಡಲಾಗಿತ್ತು. ಇಂದು ಅವನ್ನೆಲ್ಲ ಕಸದ ಬುಟ್ಟಿಗೆ ಎಸೆಯಲಾಗಿದೆ' ಎಂದು ಟೀಕಿಸಿದ್ದಾರೆ.

ಕೇವಲ ವೋಟಿಗಾಗಿ ಇಂತಹ ಘೋಷಣೆಗಳನ್ನು ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ, ಉತ್ತರಖಂಡದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.

'ಕಾಂಗ್ರೆಸ್‌ ಪಕ್ಷವು ಕೇವಲ ಮತ ಗಳಿಕೆ ಸಲುವಾಗಿ ಇಂತಹ ಯೋಜನೆಗಳನ್ನು ಘೋಷಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದರೂ  ಆಗಿನಿಂದ ಇಂತಹ ಘೋಷಣೆಗಳನ್ನು ಮಾಡದೆ, ಈಗ ಈ ರೀತಿ ಪ್ರಕಟಿಸುತ್ತಿರುವುದು ಏಕೆ? ಅವರ ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ್ಲ' ಎಂದು ಕುಟುಕಿದ್ದಾರೆ.

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರುವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು