ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ ಸೀಟು ಹಂಚಿಕೆ: ಜೆಡಿಯು 122, ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧೆ

Last Updated 6 ಅಕ್ಟೋಬರ್ 2020, 15:42 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿ(ಯು) ಎದುರು ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಈಗಾಗಲೇ ಘೋಷಿಸಿದೆ. ಇದೀಗ ಬಿಜೆಪಿ ಮತ್ತು ಜೆಡಿ(ಯು) ಚುನಾವಣೆಗೆ 50:50 ಸೂತ್ರದಲ್ಲಿ ಸ್ಥಾನ ಹಂಚಿಕೆ ಮಾಡಿಕೊಂಡಿವೆ.

ರಾಜ್ಯದ 243 ವಿಧಾನಸಭೆ ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿ(ಯು) 122 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 121 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ನಿತೀಶ್‌ ಕುಮಾರ್‌ ಮೈತ್ರಿ ಪಕ್ಷದ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

122 ಕ್ಷೇತ್ರ ಪೈಕಿ ಏಳು ಸ್ಥಾನಗಳನ್ನು ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ನೇತೃತ್ವದ ಹಿಂದುಸ್ತಾನಿ ಅವಾಮ್‌ ಮೋರ್ಚಾಗಾಗಿ ಮೀಸಲಿಟ್ಟಿರುವುದಾಗಿ ಸಿಎಂ ನಿತೀಶ್‌ ಕುಮಾರ್‌ ಮಂಗಳವಾರ ಪ್ರಕಟಿಸಿದ್ದಾರೆ.

ಎಲ್‌ಜೆಪಿ ಮುಖಂಡ ಚಿರಾಗ್‌ ಪಾಸ್ವಾನ್‌ಗೆ ಪರೋಕ್ಷವಾಗಿ ಬಿಜೆಪಿ ಸಹಕಾರ ನೀಡುತ್ತಿರುವುದಾಗಿ ಆಗುತ್ತಿರುವ ಚರ್ಚೆಗಳಿಗೆ ಬಿಜೆಪಿ ಮತ್ತು ಜೆಡಿ(ಯು) ಮುಖಂಡರು ತೆರೆ ಎಳೆದಿದ್ದಾರೆ. 'ಯಾರು ಏನು ಮಾತನಾಡುತ್ತಾರೆ ಎಂಬುದರಿಂದ ನನಗೆ ಏನೂ ಆಗಬೇಕಿಲ್ಲ' ಎಂದು ನಿತೀಶ್‌ ಹೇಳಿದ್ದಾರೆ.

'ನನ್ನ ಮೇಲೆ ಆರೋಪ ಮಾಡುತ್ತಿರುವವರು ಮೊದಲು ಉತ್ತರಿಸಲಿ, ಜೆಡಿ(ಯು) ಬೆಂಬಲವಿಲ್ಲದೆಯೇ ರಾಮ್‌ ವಿಲಾಸ್ ಪಾಸ್ವಾನ್‌ ಅವರು ರಾಜ್ಯಸಭಾ ಸದಸ್ಯರಾದರೇ? ಎಲ್‌ಜೆಪಿಯಲ್ಲಿರುವುದು ಮೂರು ಶಾಸಕರು ಮಾತ್ರ. ಇಷ್ಟು ಕನಿಷ್ಠ ಬೆಂಬಲದೊಂದಿಗೆ ನೀವು ರಾಜ್ಯಸಭೆ ಸದಸ್ಯರಾಗಬಹುದೇ?' ಎಂದು ನಿತೀಶ್‌ ಕುಮಾರ್ ಪ್ರಶ್ನಿಸಿದ್ದಾರೆ.

'ಚುನಾವಣಾ ಪ್ರಚಾರಗಳಲ್ಲಿ ಎನ್‌ಡಿಎ ಹೊರತಾದ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಬಳಸದಂತೆ ನಿಯಂತ್ರಿಸಲು, ಅಗತ್ಯವಾದರೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸುತ್ತೇವೆ' ಎಂದು ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಚಿತ್ರ ಬಳಕೆಯ ಕುರಿತು ಪ್ರತಿಕ್ರಿಯಿಸಿರುವ ಎಲ್‌ಜೆಪಿ, 'ನರೇಂದ್ರ ಮೋದಿ ಅವರು ಕೇವಲ ಬಿಜೆಪಿಗೆ ಮಾತ್ರವೇ ಪ್ರಧಾನಿ ಅಲ್ಲ. ಅವರು ನಮಗೂ ಪ್ರಧಾನಿ. ಚುನಾವಣೆ ಪ್ರಚಾರದಲ್ಲಿ ಅವರ ಚಿತ್ರ ಬಳಸಲು ನಮಗೆ ಸಂಪೂರ್ಣ ಹಕ್ಕಿದೆ' ಎಂದು ಎಲ್‌ಜೆಪಿ ವಕ್ತಾರ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಲ್‌ಜೆಪಿ, ಬಿಹಾರದಲ್ಲಿ ಜೆಡಿ(ಯು) ಎದುರಿಗೆ ಸ್ಪರ್ಧಿಸಲು ನಿರ್ಧರಿಸಿದೆ. ಬಿಜೆಪಿಯು ಜೆಡಿ(ಯು) ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಹಾಗಾಗಿ, ಎಲ್‌ಜೆಪಿ ಅನಿವಾರ್ಯವಾಗಿ ಬಿಹಾರದಲ್ಲಿ ಎನ್‌ಡಿಎ ಮೈತ್ರಿಯಿಂದ ಹೊರ ಬಂದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT