ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ: ಹೊಸ ತಲೆಮಾರಿನ ಭಿನ್ನ ನಾಯಕ

Last Updated 11 ನವೆಂಬರ್ 2020, 0:33 IST
ಅಕ್ಷರ ಗಾತ್ರ

‘ಅರ್ಧದಲ್ಲಿ ಶಾಲೆ ಬಿಟ್ಟವನು’ ಎಂದು ಅವರನ್ನು ಕರೆದವರಿದ್ದಾರೆ. ಕೆಲವರು ಅವರನ್ನು ‘ಟ್ವಿಟರ್‌ ಕಂದ’ ಎಂದೂ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ‘ಜಂಗಲ್ ರಾಜ್‌ನ ಯುವರಾಜ’ ಎಂದು ಕರೆಯುವ ಮಟ್ಟಕ್ಕೂ ಹೋದರು. ಆದರೆ, 31 ವರ್ಷದ ತೇಜಸ್ವಿ ಯಾದವ್‌ ಅವರು ಮೋದಿ ಮತ್ತು ನಿತೀಶ್‌ ಕುಮಾರ್ ಅವರ ಒಟ್ಟು ಬಲವನ್ನು ಏಕಾಂಗಿಯಾಗಿಯೇ ಎದುರಿಸಿದರು. ತಮ್ಮ ವಿರುದ್ಧ ಪ್ರತಿಸ್ಪರ್ಧಿಗಳು ಮಾಡಿದ ಅವಹೇಳನಕಾರಿ ಟೀಕೆ, ಆರೋಪಗಳಿಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ.

ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿಯಂತಹ ವಿಚಾರಗಳ ಬಗ್ಗೆ ಮಾತ್ರ ಚುನಾವಣಾ ಪ್ರಚಾರದಲ್ಲಿ ತೇಜಸ್ವಿ ಮಾತನಾಡಿದರು. ಬಿಹಾರದ ಚುನಾವಣಾ ಪ್ರಚಾರದಲ್ಲಿ ಈ ರೀತಿಯ ನಡವಳಿಕೆ ಇದೇ ಮೊದಲು ಇರಬೇಕೇನೋ. ಬಿಹಾರದಲ್ಲಿ ಮತ ಚಲಾವಣೆ ಇಲ್ಲ, ಬದಲಿಗೆ ಜಾತಿ ಧರ್ಮದ ಚಲಾವಣೆ ಆಗುತ್ತದೆ ಎಂಬ ಮಾತು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ.

‘ನಿಮಗೆ ಉದ್ಯೋಗ ಬೇಕೇ? ಅದೂ ಸರ್ಕಾರಿ ಉದ್ಯೋಗ? ನಿಮಗೆ ಸರ್ಕಾರಿ ಉದ್ಯೋಗ ಇದ್ದರೆ ಸುಂದರವಾದ ವಧು ಕೂಡ ಸಿಗುತ್ತಾಳೆ’– ತಮ್ಮ ಒಂದೊಂದು ರ್‍ಯಾಲಿಯಲ್ಲಿಯೂ ಅವರು ಹೀಗೆ ಹೇಳುತ್ತಿದ್ದರು. ‘10 ಲಕ್ಷ ಸರ್ಕಾರಿ ಉದ್ಯೋಗ ಕೊಡುತ್ತೇನೆ’ ಎಂದು ತೇಜಸ್ವಿ ಘೋಷಿಸುವಾಗ ಯುವ ಸಮೂಹದ ಉತ್ಸಾಹದ ಕೇಕೆ ಮುಗಿಲು ಮುಟ್ಟುತ್ತಿತ್ತು.

ಬಿಹಾರ ವಿಧಾನಸಭೆ ಚುನಾವಣೆ ಘೋಷಣೆ ಆದಾಗಿನಿಂದಲೂ ತೇಜಸ್ವಿಯ ನಡೆಗಳು ಎಲ್ಲಿಯೂ ಹಳಿ ತಪ್ಪಿರಲಿಲ್ಲ. ತಮ್ಮ ಪಕ್ಷ ಆರ್‌ಜೆಡಿಗೆ ಇರುವ ಕೆಟ್ಟ ಹಿನ್ನೆಲೆ, ತಮ್ಮ ಹೆತ್ತವರಾದ ಲಾಲು ಪ್ರಸಾದ್‌‌–ರಾಬ್ಡಿ ದೇವಿ ಅವರಿಗೆಪಕ್ಷದ ಕೆಲವು ಮುಖಂಡರಿಂದಾಗಿ ಬಂದ ಕೆಟ್ಟ ಹೆಸರು ಎಲ್ಲವೂ ಅವರ ಗಮನದಲ್ಲಿ ಇತ್ತು. ಅವರ ಆರಂಭವೇ ಚೆನ್ನಾಗಿತ್ತು: ‘ಆರ್‌ಜೆಡಿ ನೇತೃತ್ವದ ಸರ್ಕಾರ ಇದ್ದಾಗ ಏನಾದರೂ ತಪ್ಪಾಗಿದ್ದರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಅವರು ಹೇಳಿದ್ದರು.

ಸಾರ್ವಜನಿಕವಾದ ಈ ಕ್ಷಮೆ ಯಾಚನೆ ಹೊಸ ತೇಜಸ್ವಿಯನ್ನು ಹೊಸ ಅವತಾರದಲ್ಲಿ ಜನರ ಮುಂದೆ ಇರಿಸಿತು. ಏನೇ ತಪ್ಪುಗಳಿದ್ದರೂ ಅವರು ತಿದ್ದಿಕೊಳ್ಳಲು ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಇದು ರವಾನಿಸಿತು.

ರಾಮ ಮಂದಿರ, ಎನ್‌ಆರ್‌ಸಿ, ಸಿಎಎ, ಚೀನಾದ ಅತಿಕ್ರಮಣಕಾರಿ ವರ್ತನೆ ಅಥವಾ ಪ್ರಧಾನಿಯಿಂದ ತೆಗಳಿಕೆ... ಈ ಯಾವುದಕ್ಕೂ ಎನ್‌ಡಿಎ ಮುಖಂಡರ ಜತೆಗೆ ಅವರು ವಾಗ್ವಾದಕ್ಕೆ ಇಳಿಯಲಿಲ್ಲ. ವಲಸಿಗರು ಮತ್ತು ನಿರುದ್ಯೋಗಿಗಳನ್ನು ಕಾಡುತ್ತಿದ್ದ ಸ್ಥಳೀಯ ವಿಚಾರಗಳಷ್ಟೇ ಅವರ ಭಾಷಣದಲ್ಲಿ ಮುಖ್ಯ ಸ್ಥಾನ ಪಡೆದವು.

‘ಅನುಭವಿ ರಾಜಕಾರಣಿಯ ರೀತಿಯಲ್ಲಿ ತೇಜಸ್ವಿ ಅವರು ತಮ್ಮ ಗುರಿ ಏನು ಎಂಬುದರತ್ತಲೇ ಗಮನ ಕೇಂದ್ರೀಕರಿಸಿದ್ದರು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಿದ್ದ ತಂದೆ ಲಾಲು ಅವರ ಅನುಪಸ್ಥಿತಿಯಲ್ಲಿ ತೇಜಸ್ವಿ ನಡೆಸಿದ ರ್‍ಯಾಲಿಗಳ ಸಂಖ್ಯೆ 235. ಪ್ರಧಾನಿಯ ಸಮಾವೇಶಕ್ಕಿಂತ ಹೆಚ್ಚು ಜನರು ತೇಜಸ್ವಿ ಮಾತು ಕೇಳಲು ಬರುತ್ತಿದ್ದರು’ ಎಂದು ಸಮಾಜಶಾಸ್ತ್ರಜ್ಞ ಅಜಯ್‌ ಕುಮಾರ್‌ ಹೇಳುತ್ತಾರೆ. 31 ವರ್ಷದ ತೇಜಸ್ವಿ, ಬಿಹಾರ ಚುನಾವಣೆಯನ್ನು ತೀವ್ರ ಹಣಾಹಣಿಯಾಗಿ ಹೇಗೆ ಪರಿವರ್ತಿಸಿದರು ಎಂಬ ಸುಳಿವು ಅವರ ಮಾತಿನಲ್ಲಿ ಇದೆ.

‘ಇದಿಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರು ದುರ್ವರ್ತನೆ ತೋರಬಾರದು, ಫಲಿತಾಂಶ ಪ್ರಕಟವಾದ ಬಳಿಕ ಗುಂಡು ಹಾರಿಸಿ ನಡೆಸುವ ವಿಜಯೋತ್ಸವವೂ ಬೇಡ ಎಂದು ತೇಜಸ್ವಿ ಎಚ್ಚರಿಸಿದ್ದರು. ಮಹಾಮೈತ್ರಿಕೂಟವು ಭಾರಿ ಬಹುಮತ ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದರು. ವರ್ತನೆ ಮತ್ತು ಧೋರಣೆಯಲ್ಲಿ ಇಂತಹ ಬದಲಾವಣೆ ಸ್ವಾಗತಾರ್ಹ. ಬಿಹಾರದಲ್ಲಿ ಮಹಾಮೈತ್ರಿಕೂಟ ಗೆಲ್ಲಲಿ ಅಥವಾ ಎನ್‌ಡಿಎ ಅಧಿಕಾರಕ್ಕೆ ಬರಲಿ, ಹೊಸ ರೀತಿಯ ನಾಯಕನೊಬ್ಬನ ಉದಯಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ’ ಎಂದು ಕುಮಾರ್‌ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT