ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌: ಬಿಜೆಪಿಯ‘ಭಾಗ್ಯ’ನಗರ

Last Updated 4 ಡಿಸೆಂಬರ್ 2020, 22:26 IST
ಅಕ್ಷರ ಗಾತ್ರ

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಟಿಆರ್‌ಎಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಈ ಹಿಂದಿನ ಚುನಾವಣೆಗಳಿಗಿಂತ ಈಗ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕಾರ್ಯಕರ್ತರು ನಿಜವಾಗಿಯೂ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಕ್ಷದ ದೊಡ್ಡ ನಾಯಕರೆಲ್ಲಾ ಅತ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು. ಅದರ ಫಲವಾಗಿ ಹೈದರಾಬಾದ್‌ನಲ್ಲಿ ಬಿಜೆಪಿಯು ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡಿದೆ. ನಗರ ಪಾಲಿಕೆಯೊಂದರ ಚುನಾವಣೆಯನ್ನು ಬಿಜೆಪಿ ಇಷ್ಟು ಗಂಭೀರವಾಗಿ ಪರಿಗಣಿಸಿದ್ದು ಇದೇ ಮೊದಲು. ಇದಕ್ಕೆ ಹಲವು ಕಾರಣಗಳನ್ನು ವಿಶ್ಲೇಷಕರು ಈಗಾಗಲೇ ಗುರುತಿಸಿದ್ದಾರೆ.

ದಕ್ಷಿಣದಲ್ಲಿ ಅಧಿಕಾರ ವಿಸ್ತರಣೆ

ಉತ್ತರ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ದಕ್ಷಿಣ ಭಾರತದ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಬಿಜೆಪಿ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕಿದೆ. ಈಗ ದಕ್ಷಿಣ ಭಾರತದತ್ತ ಗಮನಹರಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಆದರೆ ಉಳಿದ ರಾಜ್ಯಗಳಲ್ಲಿ ಪಕ್ಷದ ಇರುವು ಅಷ್ಟಕ್ಕಷ್ಟೆ.

ದಕ್ಷಿಣದ ರಾಜ್ಯಗಳಲ್ಲಿ ತಮಿಳುನಾಡಿನಲ್ಲಿ ಒಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬಿಜೆಪಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿಯೇ ತಮಿಳುನಾಡಿನಲ್ಲಿ ಚಿತ್ರನಟಿ ಖುಷ್ಬೂ ಸುಂದರ್‌ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಮೈತ್ರಿಪಕ್ಷವಾದ ಎಐಎಡಿಎಂಕೆ ಜತೆಗೆ ಇದ್ದ ವೈಮನಸ್ಸನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಮಾತುಕತೆ ನಡೆಸಿ ಬಗೆಹರಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯನ್ನು ತನ್ನೆಲ್ಲಾ ಶಕ್ತಿಯನ್ನು ಬಳಸಿ ಬಿಜೆಪಿ ಎದುರಿಸಲಿದೆ. ಚುನಾವಣೆಯನ್ನು ಎದುರಿಸುವ ಬಗೆಯನ್ನು ನಿರ್ಧರಿಸುವ ಸಲುವಾಗಿ ಹೈದರಾಬಾದ್‌ ಚುನಾವಣೆಯನ್ನು ಪಕ್ಷವು ಒಂದು ಪ್ರಯೋಗವಾಗಿ ಬಳಸಿಕೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿಯೇ ಇದೆ. ಹೈದರಾಬಾದ್‌ ನಗರಪಾಲಿಕೆ ಚುನಾವಣೆಯಲ್ಲಿ ಹಿಂದೂ-ಮುಸ್ಲಿಮರ ಮತಗಳನ್ನು ಧ್ರುವೀಕರಣ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೇ ಎಂಬುದನ್ನು ಬಿಜೆಪಿ ಪರೀಕ್ಷಿಸಿದೆ. ಬಿಜೆಪಿ ನಿರೀಕ್ಷಿಸಿದ್ದ ಫಲಿತಾಂಶವೇ ಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

‘ದಕ್ಷಿಣ ಭಾರತದಲ್ಲಿ ನಾವು ಗಟ್ಟಿಯಾಗಿ ನೆಲೆಯೂರುತ್ತಿದ್ದೇವೆ. ಹೈದರಾಬಾದ್ ನಗರಪಾಲಿಕೆ ಚುನಾವಣೆಯ ಫಲಿತಾಂಶ ಇದನ್ನು ಸಾಬೀತು ಮಾಡಿದೆ. ತಮಿಳುನಾಡು ಸಹ ದೂರವಿಲ್ಲ. 2021ರಲ್ಲಿ ಭಾರಿ ಗೆಲುವಿನೊಂದಿಗೆ ನಾವು ತಮಿಳುನಾಡನ್ನೂ ಪ್ರವೇಶಿಸುತ್ತೇವೆ’ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ನಿಜಾಮಶಾಹಿಯನ್ನು ಕೊನೆಗೊಳಿಸುವುದಾಗಿ ಬಿಜೆಪಿ ನಾಯಕರು ತಮ್ಮ ಪ್ರಚಾರದಲ್ಲಿ ಹೇಳಿದ್ದರು. ಹೈದರಾಬಾದ್‌ನ ಹೆಸರನ್ನು ‘ಭಾಗ್ಯ ನಗರ’ ಎಂದು ಬದಲಿಸುವುದಾಗಿ ಯೋಗಿ ಆದಿತ್ಯನಾಥ ಹೇಳಿದ್ದರು. ಪಾಕಿಸ್ತಾನದ ಜತೆಗಿನ ಸಂಘರ್ಷ, ಅಕ್ರಮ ವಲಸಿಗರು, ಭಯೋತ್ಪಾದನೆ ಮೊದಲಾದ ವಿಚಾರಗಳನ್ನು ಇಟ್ಟುಕೊಂಡೇ ಪಕ್ಷವು ಈ ಚುನಾವಣೆಯನ್ನು ಎದುರಿಸಿದೆ. ಅದರಲ್ಲಿ ಯಶಸ್ಸೂ ದಕ್ಕಿರುವುದರಿಂದ ದಕ್ಷಿಣ ಭಾರತದ ಇತರ ಚುನಾವಣೆಗಳಲ್ಲೂ ಇದೇ ತಂತ್ರವನ್ನು ಅನುಸರಿಸುವ ನಿರೀಕ್ಷೆ ಇದೆ.

2023ರ ತೆಲಂಗಾಣ ವಿಧಾನಸಭಾ ಚುನಾವಣೆಗೂ ಈ ಚುನಾವಣೆಯ ಮೂಲಕವೇ ತಯಾರಿ ಆರಂಭಿಸಲಾಗಿದೆ. ಆಡಳಿತಾರೂಢ ಟಿಆರ್‌ಎಸ್‌ ಅನ್ನು ಕಟ್ಟಿಹಾಕಲು ಬಿಜೆಪಿ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ. ಗ್ರೇಟರ್ ಹೈದರಾಬಾದ್‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿ 10-15 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ ಒಟ್ಟಾರೆ ಫಲಿತಾಂಶದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ತೆಲಂಗಾಣದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗುತ್ತದೆ. ಹೀಗಾಗಿಯೇ ಪಕ್ಷದ ವರಿಷ್ಠರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ

ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿ ಬಿಜೆಪಿ ಈಗಾಗಲೇ ಮತಗಳ ಧ್ರುವೀಕರಣ ಮಾಡುವ ತಂತ್ರ ಅನುಸರಿಸುತ್ತಿದೆ. ರಾಜ್ಯದ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಮರ ಸಂಖ್ಯೆ ಶೇ 30ಕ್ಕಿಂತಲೂ ಹೆಚ್ಚು. ಈ ಕ್ಷೇತ್ರಗಳಲ್ಲಿ ಮುಸ್ಲಿಮೇತರರ ಮತಗಳನ್ನು ಒಟ್ಟುಗೂಡಿಸುವ ಮೂಲಕ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.

ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವನ್ನು ವಿರೋಧ ಪಕ್ಷಗಳು, ‘ಬಿಜೆಪಿಯ ಬಿ ಟೀಂ, ವೋಟ್‌ ಕಟ್ಟರ್’ ಎಂದು ಕರೆಯುತ್ತವೆ. ಒವೈಸಿ ಅವರು ತಮ್ಮ ಪಕ್ಷವು ಪಶ್ಚಿಮ ಬಂಗಾಳದಲ್ಲೂ ಸ್ಪರ್ಧಿಸಲಿದೆ ಎಂದು ಈಚೆಗಷ್ಟೇ ಹೇಳಿದ್ದಾರೆ. ಬಿಹಾರ ಚುನಾವಣೆಯಲ್ಲೂ ಒವೈಸಿ ಅವರ ಪಕ್ಷವು ಗಣನೀಯ ಸಾಧನೆ ಮಾಡಿದೆ, 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಒವೈಸಿ ಅವರ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದರೆ ಎಡಪಕ್ಷಗಳು, ಕಾಂಗ್ರೆಸ್‌ ಮತ್ತು ಇತರ ಪ್ರಾದೇಶಿಕ ಪಕ್ಷಗಳಿಗೆ ಬರಬಹುದಾದ ಮುಸ್ಲಿಮರ ಮತಗಳು ಎಐಎಂಐಎಂಗೆ ಬರುತ್ತದೆ. ಬಿಜೆಪಿಯೇತರ ಮತಗಳನ್ನು ಎಐಎಂಐಎಂ ಸೆಳೆಯುವುದರಿಂದ, ಬಿಜೆಪಿಯೇತರ ಪಕ್ಷಗಳಿಗೆ ಬರಬಹುದಾದ ಮತಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ಪಶ್ಚಿಮ ಬಂಗಾಳದಲ್ಲೂ ಎಐಎಂಐಎಂ ಅನ್ನು ಬಿಜೆಪಿ ದಾಳವನ್ನಾಗಿ ಬಳಸಿಕೊಳ್ಳಲಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಈ ತಂತ್ರದ ಸಾಧಕ ಬಾಧಕಗಳನ್ನು ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಪರಿಶೀಲಿಸ ಲಾಗಿದೆ. ಹೈದರಾಬಾದ್‌ನಲ್ಲಿ ಎಐಎಂಐಎಂ ಪ್ರಬಲ ಸ್ಪರ್ಧಿಯಾಗಿತ್ತು. ಕಾಂಗ್ರೆಸ್‌, ಟಿಆರ್‌ಎಸ್‌ ಪಕ್ಷಗಳ ವಿರುದ್ಧ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂ ಕಣದಲ್ಲಿದ್ದರು. ಬಿಜೆಪಿಯೇತರ ಮತಗಳು ವಿಭಜನೆಯಾದ ಕಾರಣ, ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿ ಗೆಲುವು ಸಾಧಿಸಿದೆ ಎಂದು ವಿರೋಧ ಪಕ್ಷಗಳ ನಾಯಕರು ವಿಶ್ಲೇಷಿಸಿದ್ದಾರೆ.

‘ಟಿಆರ್‌ಎಸ್‌ ಅಧಿಕಾರ ಕಳೆದುಕೊಳ್ಳುವ ಸೂಚನೆ’

ಬೆಂಗಳೂರು: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆಯು ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಜನರು ಆ ಪಕ್ಷದ ನಾಯಕರ ವಿರುದ್ಧ ಮತ ಚಲಾಯಿಸಿದ್ದರಿಂದ ಬಿಜೆಪಿ 35 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಈ ಚುನಾವಣೆಯಲ್ಲಿಬಿಜೆಪಿಯಸಹ ಉಸ್ತುವಾರಿಗಳಲ್ಲಿ ಒಬ್ಬರಾಗಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ

ಸುಧಾಕರ್‌ ಮತ್ತು ಶಾಸಕ ಎಂ. ಸತೀಶ್‌ ರೆಡ್ಡಿಬಿಜೆಪಿಯಚುನಾವಣಾ ಉಸ್ತುವಾರಿಗಳ ತಂಡದಲ್ಲಿದ್ದರು. ಜಿಎಚ್‌ಎಂಸಿಯ 150 ವಾರ್ಡ್‌ಗಳ ಪೈಕಿ 35 ಕ್ಷೇತ್ರಗಳಲ್ಲಿ ಖುದ್ದಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ‘ಟಿಆರ್‌ಎಸ್‌ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ನಿರಂತರ ಪ್ರಯತ್ನ ನಡೆಸಿತ್ತು. ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳ ತುಷ್ಟೀಕರಣದ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ. ಪ್ರಬಲ ಪರ್ಯಾಯ ನಾಯಕತ್ವಕ್ಕೆ ಅವರು ಕಾಯುತ್ತಿದ್ದಾರೆ. ಬಿಜೆಪಿ ಪರ್ಯಾಯ ಎಂಬುದನ್ನು ಮನಗಂಡಿದ್ದಾರೆ. ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ’ ಎಂದು ಜಿಎಚ್‌ಎಂಸಿ ಚುನಾವಣಾ ಫಲಿತಾಂಶ ಕುರಿತು ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

ಟಿಆರ್‌ಎಸ್‌ಗೆ ಏದುಸಿರು

ಹೈದರಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡನೇ ಬಾರಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ಟಿಆರ್‌ಎಸ್‌, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಮಾತ್ರ ಸಾಧ್ಯವಾಗಿದೆ. ಈ ಕಠಿಣ ದಾರಿಯಲ್ಲಿಬಿಜೆಪಿಯತೀವ್ರ ಸ್ಪರ್ಧೆ ಪಕ್ಷವನ್ನು ಮೆತ್ತಗೆ ಮಾಡಿತು. ಇತ್ತೀಚೆಗೆ ನಡೆದ ದುಬ್ಬಾಕ ಉಪಚುನಾವಣೆಯಲ್ಲಿ ಎದುರಾದ ಸೋಲು ಪಕ್ಷಕ್ಕೆ ಮುಂದಿನ ಕಠಿಣ ಸವಾಲಿನ ಸುಳಿವು ನೀಡಿತ್ತು.

2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ದುಬ್ಬಾಕ ಕ್ಷೇತ್ರದಿಂದ ಗೆದ್ದಿದ್ದ ರಾಮಲಿಂಗಾ ರೆಡ್ಡಿ ಅವರು ಆಗಸ್ಟ್‌ನಲ್ಲಿ ನಿಧನರಾದರು. ಅವರ ಪತ್ನಿ ಸುಜಾತಾ ರೆಡ್ಡಿ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆದರೆ ಎರಡು ಬಾರಿ ಸೋತಿದ್ದ ರಘುನಂದನ ರೆಡ್ಡಿ ಅವರನ್ನು ಬಿಜೆಪಿ ಕಡಿಮೆ ಅಂತರದಲ್ಲಿ ಗೆಲ್ಲಿಸಿಕೊಂಡು ಬಂದಿತು. ಇಲ್ಲಿ ಅನುಭವಿಸಿದ ಹಿನ್ನಡೆಯಿಂದ ಆಡಳಿತಾರೂಢ ಟಿಆರ್‌ಎಸ್ ಬಹುಬೇಗನೇ ಎಚ್ಚೆತ್ತುಕೊಂಡು, ಅಂದಿನಿಂದಲೇ ಹೈದರಾಬಾದ್ ಸ್ಥಳೀಯ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿತು.

ಅಕ್ಟೋಬರ್ ಮಧ್ಯಭಾಗದಲ್ಲಿ ಹೈದರಾಬಾದ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸೋತಿದೆ ಎಂಬ ತೀವ್ರ ಟೀಕೆಯನ್ನೂ ಎದುರಿಸಬೇಕಾಯಿತು. ತಡವಾಗಿ ಪರಿಹಾರ ಕಾರ್ಯಕ್ಕೆ ಇಳಿದಿದ್ದು, ಪ್ರವಾಹ ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸದಿರುವುದು ಪಕ್ಷಕ್ಕೆ ಸಮಸ್ಯೆ ತಂದಿಟ್ಟಿತು. ಸಂತ್ರಸ್ತರಿಗೆ ಘೋಷಿಸಿದ ₹10 ಸಾವಿರ ರೂಪಾಯಿ ಅರ್ಹರಿಗೆ ತಲುಪದೇ ಪಕ್ಷ ಪೇಚಿಗೆ ಸಿಲುಕಿತು. ಸಂತ್ರಸ್ತರ ಖಾತೆಗೆ ನೇರವಾಗಿ ಹಣ ತಲುಪಿಸುವ ಯೋಜನೆಯೂ ಹಳ್ಳ ಹಿಡಿಯಿತು. ಈ ಎಲ್ಲ ಗೊಂದಲಗಳ ನಡುವೆಯೇ ನ.17ರಂದು ಚುನಾವಣೆ ಘೋಷಣೆಯಾಯಿತು.

ಪ್ರವಾಹ ಸಂತ್ರಸ್ತರನ್ನು ಸಮಾಧಾನಪಡಿಸಿ ಅಧಿಕಾರ ಉಳಿಸಿಕೊಳ್ಳುವ ಸವಾಲು ಒಂದು ಕಡೆಯಾದರೆ, ಬಿಜೆಪಿಯನ್ನು ಹಣಿಯುವುದು ಟಿಆರ್‌ಎಸ್‌ಗೆ ಇನ್ನೊಂದು ತೊಡಕಾಗಿತ್ತು. ಕೋಮುವಾದಿ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಟಿಆರ್‌ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ (ಕೆಸಿಆರ್) ಅವರು ಜನರಿಗೆ ಪದೇ ಪದೇ ಮನವಿ ಮಾಡಿದರು. ಒವೈಸಿ ಪ್ರಾಬಲ್ಯದ ಓಲ್ಡ್‌ ಸಿಟಿಯಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಲು ಮುಂದಾದರು. ಪಕ್ಷದ ಪ್ರಣಾಳಿಕೆಯನ್ನು ಆಕರ್ಷಕಗೊಳಿಸಿದರು. ನಗರದ ನಾಗರಿಕರಿಗೆ ಉಚಿತ ಕುಡಿಯುವ ನೀರು ಕೊಡುವ ಜನಪ್ರಿಯ ಘೋಷಣೆ ಮಾಡಿ, ಜನರ ಮುಂದೆ ಹೋದರು. ದೋಬಿಘಾಟ್, ಕ್ಷೌರದ ಅಂಗಡಿಗಳಿಗೆ ಉಚಿತ ವಿದ್ಯುತ್ತಿನ ಭರವಸೆ ನೀಡಿದರು. ಹಿಂದಿನ ಬಾರಿ 88 ಕಡೆ ಗೆಲುವು ಸಾಧಿಸಿದ್ದ ಪಕ್ಷಕ್ಕೆ ಈ ಬಾರಿ ಗದ್ದುಗೆ ಸಿಗುವುದು ಸುಲಭವಿಲ್ಲ.

ಮೂರನೇ ಸ್ಥಾನಕ್ಕೆ ಒವೈಸಿ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದ ಹಾಗೆಯೇ ಎಐಎಂಐಎಂ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿದಿತ್ತು. ಕಳೆದ ಚುನಾವಣೆಯಲ್ಲಿ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದ ಪಕ್ಷ, ಈ ಬಾರಿ ಅದಕ್ಕಿಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿತ್ತು.

ಪಾಥರ್‌ಗಟ್ಟಿ, ರೀನ್ ಬಜಾರ್, ಚಂದ್ರಾಯನಗುಟ್ಟಾ, ದಬೀರ್‌ಪುರ ಹೀಗೆ ಮುಸ್ಲಿಂ ಪ್ರಾಬಲ್ಯದ ಜಾಗಗಳಲ್ಲಿ ಮಾತ್ರ ಸ್ಪರ್ಧೆ ಮಾಡಿರುವ ಪಕ್ಷ, ಖಚಿತ ಗೆಲುವು ಸಿಗಲಿರುವ 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿತು. ಕಳೆದ ಬಾರಿಯಂತೆ (44ರಲ್ಲಿ ಗೆಲುವು) 42 ಸ್ಥಾನಗಳಲ್ಲಿ ಗೆಲುವು ಖಚಿತಪಡಿಸಿಕೊಂಡಿದೆ. ಎಲ್ಲ ಸವಾಲುಗಳನ್ನು ಮೆಟ್ಟಿನಿಂತಿದ್ದರೂ, ಎರಡನೇ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಗಿದೆ.

ಆಡಳಿತಾರೂಢ ಟಿಆರ್‌ಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಏರ್ಪಡಲಿಲ್ಲ. ಮತ್ತೊಂದು ಕಡೆ ಬಿಜೆಪಿ ಬಿರುಸಿನ ಸ್ಪರ್ಧೆ ಒಡ್ಡಿತ್ತು. ಹೀಗಾಗಿ ಗೆಲ್ಲುವ ಖಚಿತ ಭರವಸೆಯಿರುವ ಅಭ್ಯರ್ಥಿಗಳನ್ನು ಹೆಕ್ಕಿ, ತನ್ನ ಸಾಂಪ್ರದಾಯಿಕ ನೆಲೆಗಳನ್ನು ಭದ್ರಪಡಿಸಿಕೊಳ್ಳುವುದರತ್ತ ಒವೈಸಿ ಚಿತ್ತ ನೆಟ್ಟರು. ಬಿಜೆಪಿ, ಕಾಂಗ್ರೆಸ್ ಹಾಗೂ ಟಿಆರ್‌ಎಸ್ ಪಕ್ಷಗಳು ಓಲ್ಡ್ ಹೈದ್ರಾಬಾದ್ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬ ಸುಳಿವು ಅದಾಗಲೇ ಒವೈಸಿಗೆ ಸಿಕ್ಕಾಗಿತ್ತು. ಹೀಗಾಗಿ ಒವೈಸಿ ಅವರಿಗೆ ಎಚ್ಚರಿಕೆಯ ನಡೆ ಅನಿವಾರ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT