ಭಾನುವಾರ, ಜೂನ್ 26, 2022
26 °C

ಪಶ್ಚಿಮ ಬಂಗಾಳ: ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮತ್ತೆ ಟಿಎಂಸಿಗೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳ ಮೂಲದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು ಭಾನುವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿದ್ದಾರೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು, ಸಿಂಗ್ ಅವರನ್ನು ಬರಮಾಡಿಕೊಂಡರು. 

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಂಗ್ ಅವರು ಟಿಎಂಸಿ ತೊರೆದು, ಬಿಜೆಪಿ ಸೇರಿದ್ದರು. ಅಲ್ಲದೆ, ಬರಾಕ್‌ಪೊರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತು ಪ್ರವೇಶಿಸಿದ್ದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ‘ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಸರಿಯಾಗಿ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯ ಘಟಕದ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದೇನೆ’ ಎಂದೂ ಅರ್ಜುನ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯಲ್ಲಿ ಉತ್ತಮ ಕಾರ್ಯಕರ್ತರಿಗೆ ಅರ್ಹ ಮನ್ನಣೆ ದೊರೆಯುತ್ತಿಲ್ಲ. ರಾಜ್ಯ ಘಟಕದ ಉಪಾಧ್ಯಕ್ಷನಾಗಿದ್ದರೂ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು