ಗುರುವಾರ , ಆಗಸ್ಟ್ 11, 2022
23 °C

ಕಂಗನಾ ಬಂಗಲೆ ಕೆಡವದಂತೆ ಬಾಂಬೆ ಹೈಕೋರ್ಟ್‌ ತಡೆಯಾಜ್ಞೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಕಂಗನಾ ಕನೋಟ್ ಅವರಿಗೆ ಸೂಕ್ತ ಭದ್ರತೆ ನೀಡಿರುವುದು

ಮುಂಬೈ: ಬಾಲಿವುಡ್ ನಟಿ ಕಂಗನಾ ರನೋಟ್ ಅವರ ಮುಂಬೈನ ಬಂಗಲೆ ಕೆಡವದಂತೆ ಬಾಂಬೆ ಹೈಕೋರ್ಟ್‌ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ (ಬಿಎಂಸಿ) ಬುಧವಾರ ಸೂಚನೆ ನೀಡಿದೆ.

ಮಂಗಳವಾರ ಬಿಎಂಸಿ ಕಂಗನಾ ಅವರ ಬಂಗಲೆಗೆ ನೋಟಿಸ್ ಅಂಟಿಸಿ, ಸೂಕ್ತ ಅನುಮತಿ ಪಡೆಯದೇ ಕಟ್ಟಡದ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಹೇಳಿತ್ತು. ಬುಧವಾರ ಕಟ್ಟಡ ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿತ್ತು.

ಮುಂಬೈನ ಪಾಲಿ ಹಿಲ್‌ನ ಕಟ್ಟಡಕ್ಕೆ ಬಿಎಂಸಿಯ ನೋಟಿಸ್‌ ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್‌ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ. ಪಾಲಿಕೆಯ ಸಿಬ್ಬಂದಿ ಕಂಗನಾ ಕಚೇರಿ ಬಳಿ ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾಗಿರುವ ಕಟ್ಟಡವನ್ನು ತೆರವುಗೊಳಿಸಿದ್ದಾರೆ.


ಪಾಲಿ ಹಿಲ್‌ನಲ್ಲಿರುವ ಕಂಗನಾ ಅವರ ಬಂಗಲೆ

'ಕಾನೂನು ಬಾಹಿರವಾಗಿ ನೋಟಿಸ್‌ ಜಾರಿ ಮಾಡಲಾಗಿದೆ ಹಾಗೂ ಕಟ್ಟಡದೊಳಗೆ ಪ್ರವೇಶಿಸಿರುವುದು ಕಾನೂನು ಬಾಹಿರವಾದುದು. ಕಟ್ಟಡದ ಆವರಣದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ' ಎಂದು ಕಂಗನಾ ಪರ ವಕೀಲ ರಿಜ್ವಾನ್‌ ಸಿದ್ದಿಖಿ ಹೇಳಿದ್ದಾರೆ.

ವೈ ಪ್ಲಸ್‌ ಶ್ರೇಣಿಯ ಭದ್ರತೆ ಪಡೆದಿರುವ ಕಂಗನಾ ಬುಧವಾರ ಮುಂಬೈಗೆ ಬಂದಿಳಿದಿದ್ದಾರೆ.

ಬಿಎಂಸಿ ಕ್ರಮ ಖಂಡಿಸಿ ಕಂಗನಾ ಸರಣಿ ಟ್ವೀಟ್‌ ಮಾಡಿದ್ದು, ‘ನಾನು ಎಂದಿಗೂ ತಪ್ಪು ಮಾಡಿಲ್ಲ. ಆದರೆ ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತುಪಡಿಸಲು ಮುಂದಾಗಿದ್ದಾರೆ. ಇದೀಗ ನನ್ನ ಮುಂಬೈ ಪಿಒಕೆ ರೀತಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂದ್ರಾ ಉಪನಗರದ ಪಾಲಿ ಹಿಲ್ಸ್‌ನಲ್ಲಿರುವ ಕಂಗನಾ ಅವರ ಬಂಗ್ಲೆಯನ್ನು ಎರಡು ದಿನಗಳಿಂದ ಬಿಎಂಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಬುಧವಾರ ಪಾಲಿಕೆ ಕಾರ್ಮಿಕರ ತಂಡದೊಂದಿದೆ ಬಂಗಲೆಗೆ ಭೇಟಿ ನೀಡಿದ ಅಧಿಕಾರಿಗಳು ಕಟ್ಟಡ ಕೆಡವಲು ಸೂಚಿಸಿದ್ದರು.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆಯ ಬಳಿಕ ನಟಿ ಕಂಗನಾ ರನೋಟ್‌ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವಂತೆ ವರ್ತಿಸಿದ್ದಾರೆ. ಇತ್ತೀಚೆಗೆ ಅವರು ಮುಂಬೈ ನಗರದ ಅವ್ಯವಸ್ಥೆ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದರೊಂದಿಗೆ ಆಡಳಿತಾರೂಢ ಶಿವಸೇನೆ ಸೇರಿದಂತೆ ಇತರೇ ಪಕ್ಷಗಳು ಮುಖಂಡರೊಂದಿಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜಟಾಪಟಿ ನಡೆದಿದೆ.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ‘ಸಿನಿಮಾ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ’ ಎಂದು ಇತ್ತೀಚೆಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. ಇದು ವಿವಾದ ಸೃಷ್ಟಿಸಿತ್ತು. ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಆ ಹೇಳಿಕೆಯನ್ನು ಖಂಡಿಸಿದ್ದವು. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ ಮುಂಬೈ ಸುರಕ್ಷಿತವಲ್ಲ ಎಂದೆನಿಸುತ್ತಿದೆ ಎಂದು ಇತ್ತೀಚಿನ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದ ಕಂಗನಾ, ಬಾಲಿವುಡ್‌ನಲ್ಲಿ ಡ್ರಗ್ಸ್‌ ಬಳಕೆಯ ಬಗ್ಗೆಯೂ ಮಾತನಾಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಕಂಗನಾ ಅವರಿಗೆ ಕೇಂದ್ರ ಸರ್ಕಾರ ವೈ ಪ್ಲಸ್‌ ಶ್ರೇಣಿ (10 ಶಸ್ತ್ರಸಜ್ಜಿತ ಕಮಾಂಡೋಗಳು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ) ಭದ್ರತೆ ನೀಡಿದೆ.

ಇನ್ನಷ್ಟು ಓದು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು