ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ–ಮಿಜೋರಾಂ ಗಡಿ ವಿವಾದ: ಸಿಎಂ ಹಿಮಂತ ಬಿಸ್ವ, ಇತರ 6 ಮಂದಿ ವಿರುದ್ಧ ಪ್ರಕರಣ

Last Updated 31 ಜುಲೈ 2021, 19:30 IST
ಅಕ್ಷರ ಗಾತ್ರ

ಐಜ್ವಾಲ್:ಗಡಿ ವಿಚಾರವಾಗಿ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗತೆ ಪಟ್ಟಣದ ಹೊರವಲಯದಲ್ಲಿನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಅಸ್ಸಾಂ ಮತ್ತು ಮಿಜೋರಾಂ ನಡುವೆ ಸಮನ್ಸ್ ಮೇಲಾಟ ಶುರುವಾಗಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ರಾಜ್ಯದ ಆರು ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ, ಮಿಜೋರಾಂನ ಆರು ಅಧಿಕಾರಿಗಳಿಗೆ ಸಮನ್ಸ್ ನೀಡಿರುವ ಅಸ್ಸಾಂ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಕೊಲೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಅಸ್ಸಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಿಜೋರಾಂ ಐಜಿಪಿ ಜಾನ್ ನೀಹ್ಲಾಯಾ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ‘ಪ್ರಕರಣ ದಾಖಲಿಸಿದ್ದಕ್ಕೆ ಸಂತೋಷ. ಆದರೆ ತನಿಖೆಯನ್ನು ಸ್ವತಂತ್ರ ಸಂಸ್ಥೆಯಿಂದ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ಗಡಿ ಸಂಘರ್ಷದ ಕುರಿತು ತಮ್ಮ ಹಾಗೂ ಆರು ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿಂದಿನ ತರ್ಕವೇನು ಎಂದು ಬಿಸ್ವಾ ಪ್ರಶ್ನೆ ಮಾಡಿದ್ದಾರೆ.

ಸ್ಸಾಂ ಐಜಿಪಿ ಅನುರಾಗ್ ಅಗರ್‌ವಾಲ್, ಡಿಐಜಿ ದೇವೋಜ್ಯೋತಿ ಮುಖರ್ಜಿ, ಕ್ಯಾಚಾರ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಹಂದ್ರಕಾಂತ್ ನಿಂಬಾಳ್ಕರ್ ಮತ್ತು ಧೋಲೈ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸಹಬ್ ಉದ್ದೀನ್ ಹೆಸರು ಎಫ್‌ಐಆರ್‌ನಲ್ಲಿದೆ. ಜತೆಗೆಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ಮತ್ತು ವಿಭಾಗೀಯ ಅರಣ್ಯಾಧಿಕಾರಿ ಸನ್ನಿದೇವ್ ಚೌಧರಿ ಅವರ ಮೇಲೂ ಆರೋಪ ಹೊರಿಸಲಾಗಿದೆ. ಅಸ್ಸಾಂ ಪೊಲೀಸ್ ಇಲಾಖೆ 200 ಸಿಬ್ಬಂದಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಅಸ್ಸಾಂ ಸರ್ಕಾರವು, ಮಿಜೋರಾಂನ ಆರು ಅಧಿಕಾರಿಗೆ ಸಮನ್ಸ್ ನೀಡಿದ್ದು, ವಿಚಾರಣೆಗೆ ಕರೆದಿದೆ. ಕೊಲಾಸಿಬ್ ಜಿಲ್ಲೆಯ ಉಪ ಆಯುಕ್ತ ಎಚ್ ಲಾಲ್‌ತಂಗ್ಲಿಯಾನಾ, ಪೊಲೀಸ್ ವರಿಷ್ಠಾಧಿಕಾರಿ ವನ್ಲಾಲ್‌ಫಕ ರಾಲ್ಟೆ ಮೊದಲಾದವರಿಗೆ ಆಗಸ್ಟ್ 2ರಂದು ಧೋಲೈ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಆದೇಶಿಸಿದೆ.

ಗಡಿಯ ಘರ್ಷಣಾ ಸ್ಥಳದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದ್ದರೂ, ಬೂದಿ ಮುಚ್ಚಿದ ಕೆಂಡದಂತಿದೆ. ಹೆಚ್ಚಿನ ಸಂಖ್ಯೆಯ ಸಿಆರ್‌ಪಿಎಫ್ ಪಡೆ ಸಿಬ್ಬಂದಿ ಎರಡೂ ರಾಜ್ಯಗಳ ನಡುವಿನ ರಾಷ್ಟ್ರೀಯ ಹೆದ್ದಾರಿ 306ರಲ್ಲಿ ಗಸ್ತು ತಿರುಗುತ್ತಿದ್ದಾರೆ.

ಮಿಜೋರಾಂ ರಾಜ್ಯಪಾಲರಿಂದ ರಾಷ್ಷ್ರಪತಿ ಭೇಟಿ (ನವದೆಹಲಿ): ಮಿಜೋರಾಂ ರಾಜ್ಯಪಾಲ ಡಾ. ಹರಿಬಾಬು ಕಂಭಂಪತಿ ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿದ್ದು, ಅಸ್ಸಾಂ ಹಾಗೂ ಮಿಜೋರಾಂ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಭೆಯು ಮಹತ್ವ ಪಡೆದುಕೊಂಡಿದೆ.

ಕಳೆದ ಸೋಮವಾರ ಅಸ್ಸಾಂ ಅಧಿಕಾರಿಗಳ ತಂಡದ ಮೇಲೆ ಮಿಜೋರಾಂ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಐವರು ಅಸ್ಸಾಂ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT