ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರ: ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ನಿರ್ಧಾರ

ಟ್ರ್ಯಾಕ್ಟರ್‌ ರ್‍ಯಾಲಿ: ರೈತ ಮುಖಂಡರ ವಿರುದ್ಧ ದೂರು ದಾಖಲು
Last Updated 27 ಜನವರಿ 2021, 17:32 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ರ್‍ಯಾಲಿಯ ಹಿಂಸಾಚಾರ ಪ್ರಕರಣವನ್ನು ಕಠಿಣವಾಗಿ ನಿರ್ವಹಿಸುವ ಸೂಚನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ರೈತರ ಚಳವಳಿಯ ಪ್ರಮುಖ ನಾಯಕರೂ ಸೇರಿದಂತೆ ಹಲವು ಮಂದಿಯ ವಿರುದ್ಧ 22 ದೂರುಗಳನ್ನು ದಾಖಲಿಸಲಾಗಿದೆ.

ಸ್ವರಾಜ್‌ ಇಂಡಿಯಾ ನಾಯಕ ಯೋಗೇಂದ್ರ ಯಾದವ್‌, ರೈತ ಸಂಘಟನೆ ಗಳ ಮುಖಂಡರಾದ ಗುರ್ನಾಮ್‌ ಸಿಂಗ್‌ ಚದುನಿ, ರಾಕೇಶ್‌ ಟಿಕಾಯತ್‌‌, ದರ್ಶನ್‌ ಪಾಲ್‌, ಬೂಟಾ ಸಿಂಗ್‌, ರಾಜಿಂದರ್‌ ಸಿಂಗ್‌, ಬಲಬೀರ್ ಸಿಂಗ್‌ ರಾಜೇವಾಲ್‌ ಮತ್ತು ಜೋಗಿಂದರ್‌ ಸಿಂಗ್‌ ಉಗ್ರಾಹಾನ್‌ ವಿರುದ್ಧ ದೂರುಗಳು ದಾಖಲಾಗಿವೆ. ಮಂಗಳವಾರದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈವರೆಗೆ, 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಅಪರಾಧ ತನಿಖಾ ವಿಭಾಗದ ಪೊಲೀಸರು ಕೆಂಪು ಕೋಟೆಗೆ ಲಗ್ಗೆ ಮತ್ತು ಇತರ ಹಿಂಸಾಚಾರದ ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಡಕಾಯಿತಿ, ಹತ್ಯೆ ಅಥವಾ ಗಂಭೀರವಾಗಿ ಗಾಯಗೊಳಿಸುವ ಉದ್ದೇಶದ ಹಲ್ಲೆ, ಅಪರಾಧ ಪಿತೂರಿ ಮತ್ತು ಇತರ ಸೆಕ್ಷನ್‌ ಗಳ ಅಡಿ ದೂರುಗಳು ದಾಖಲಾಗಿವೆ.

ಕೆಂಪು ಕೋಟೆಯಲ್ಲಿ ಧಾರ್ಮಿಕ ಬಾವುಟವನ್ನು ಹಾರಿಸಿದ್ದು ಪ್ರಕರಣದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬಾವುಟ ಹಾರಿಸಿದ್ದರ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೆಂಪು ಕೋಟೆಗೆ ಮುತ್ತಿಗೆ ಬಗ್ಗೆ ವರದಿ ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ ಪಟೇಲ್‌ ಸೂಚಿಸಿದ್ದಾರೆ. ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿರುವ ಯುನೆಸ್ಕೊ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆ ಇರುವ ಕೆಂಪು ಕೋಟೆಗೆ ಆಗಿರುವ ಹಾನಿಯನ್ನು ಪರಿಶೀಲಿಸಲು ಸಚಿವರು ಅಲ್ಲಿಗೆ ಭೇಟಿ ನೀಡಿದ್ದಾರೆ.

ಮುತ್ತಿಗೆ ಮತ್ತು ಬಾವುಟ ಹಾರಿಸಿದ್ದರ ಬಗ್ಗೆ ಸಮಗ್ರವಾದ ವರದಿ ಸಲ್ಲಿಸುವಂತೆ ಭೇಟಿ ವೇಳೆ ಅವರು ಸೂಚಿಸಿದರು. ಈ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿ, ಮತ್ತೊಂದು ದೂರು ದಾಖಲಿಸುವ ಉದ್ದೇಶವಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

ಬಿಜೆಪಿ ಜತೆ ನಂಟು ಆರೋಪ

ನಟ ದೀಪ್‌ ಸಿಧು ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ್ದರ ಹಿಂದೆ ಪಿತೂರಿ ಇದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪಿಸಿದೆ.

ಬಿಜೆಪಿಯ ಹಲವು ಪ್ರಮುಖ ಮುಖಂಡರಿಗೆ ದೀಪ್‌ ಸಿಧು ನಿಕಟವರ್ತಿ ಎಂಬುದನ್ನು ಸೂಚಿಸುವ ಫೋಟೊಗಳು ಮತ್ತು ವಿವರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರೈತ ಸಂಘಟನೆಗಳ ಮುಖಂಡರೂ ಈ ಆರೋಪ ಮಾಡಿದ್ದಾರೆ. ಸಿಧು ಮತ್ತು ಬಿಜೆಪಿ ಸಂಸದ ಹಾಗೂ ನಟ ಸನ್ನಿ ಡಿಯೋಲ್‌ ಅವರು ಜತೆಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಆದರೆ, ಆದರೆ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ದೀಪ್‌ ಜತೆಗೆ ಯಾವುದೇ ಸಂಬಂಧ ಇಲ್ಲ ಎಂದು ಸನ್ನಿ ಸ್ಪಷ್ಟೀಕರಣ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಅವರು ಪಂಜಾಬ್‌ನ ಗುರುದಾಸಪುರ ಕ್ಷೇತ್ರದಿಂದ ಸ್ಪರ್ಧಿಸಿದಾಗ ದೀಪ್‌ ಜತೆಗಿದ್ದರು. ಕೆಂಪು ಕೋಟೆಯಲ್ಲಿ ‘ನಿಶಾನ್‌ ಸಾಹಿಬ್‌’ ಧ್ವಜ ಹಾರಿಸಿದ್ದು ಯೋಜಿತ ಕೃತ್ಯ ಏನಲ್ಲ. ಇದಕ್ಕೆ ಯಾರೂ ಕೋಮು ಬಣ್ಣ ಹಚ್ಚಬಾರದು ಮತ್ತು ತಮ್ಮನ್ನು ಮೂಲಭೂತವಾದಿಗಳು ಎಂದು ಬಣ್ಣಿಸಬಾರದು ಎಂದು ದೀಪ್‌ ಅವರು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.


ಬಿಜೆಪಿ–ಎಎಪಿ ಜಟಾಪಟಿ

ಬಿಜೆಪಿ ತನ್ನ ಕೈಗೊಂಬೆ ದೀಪ್‌ ಸಿಧುವನ್ನು ಬಳಸಿಕೊಂಡು ರೈತರ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಎಎಪಿ ಆರೋಪಿಸಿದೆ. ಆದರೆ, ಹಿಂಸಾಚಾರದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಕಾಣಿಸಿಕೊಂಡಿದ್ದ ಅಮ್ರಿಕ್‌ ಸಿಂಗ್‌ ಮಿಕಿ ಎಂಬ ವ್ಯಕ್ತಿ ಎಎಪಿಯ ಮುಖಂಡ ಎಂದು ಬಿಜೆಪಿ ತಿರುಗೇಟು ನೀಡಿದೆ. ಮಿಕಿ ಅವರು ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಚಿತ್ರಗಳನ್ನು ಪ್ರಕಟಿಸಿದ್ದಾರೆ ಎಂದೂ ಬಿಜೆಪಿ ಹೇಳಿದೆ.

ಸಿಧು ಮತ್ತು ಬಿಜೆಪಿಯ ಹಿರಿಯ ಮುಖಂಡರು ಇರುವ ಹಲವು ‍ಫೋಟೊಗಳನ್ನು ಎಎಪಿ ವಕ್ತಾರ ರಾಘವ ಚಡ್ಡಾ ಅವರು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಪಂಜಾಬ್‌ ಮುಖ್ಯಮಂತ್ರಿ, ಬಿಜೆಪಿಯ ಏಜೆಂಟ್‌ ಅಮರಿಂದರ್‌ ಸಿಂಗ್‌ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಅದೇಶ್‌ ಗುಪ್ತಾ ಅವರು ಎಎಪಿಯ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದೂ ಚಡ್ಡಾ ಹೇಳಿದ್ದಾರೆ.

ಅಮ್ರಿಕ್‌ ಅವರು 2020ರ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಎಎಪಿ ಸೇರಿ, ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ ಎಂದು ಅದೇಶ್‌ ಆರೋಪಿಸಿದ್ದಾರೆ. ಆದರೆ, ಅಮ್ರಿಕ್‌ ಅವರು ಎಎಪಿಯ ಸದಸ್ಯನೇ ಅಲ್ಲ ಎಂದು ಚಡ್ಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT