ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಕೋರ್ಸ್‌: ಹಿಂದುಳಿದ ವರ್ಗಗಳಿಗೆ ಶೇ 27 ಮೀಸಲು

Last Updated 29 ಜುಲೈ 2021, 20:29 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ, ದಂತ ವೈದ್ಯ ಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ನ ಅಖಿಲ ಭಾರತ ಕೋಟಾದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇ 10ರಷ್ಟು ಮೀಸಲಾತಿ ಯನ್ನು ಕೇಂದ್ರ ಸರ್ಕಾರವು ಘೋಷಿಸಿದೆ. 2021–22ನೇ ಶೈಕ್ಷಣಿಕ ವರ್ಷದಿಂದ ಇದು ಅನ್ವಯ ಆಗಲಿದೆ.

ಒಬಿಸಿಗೆ ಸೇರಿದ ಪದವಿಯ ಸುಮಾರು 1,500 ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿಯ ಸುಮಾರು 2,500 ವಿದ್ಯಾರ್ಥಿಗಳಿಗೆ ಈ ನಿರ್ಧಾರದಿಂದ ಪ್ರತಿ ವರ್ಷ ಅನುಕೂಲ ಆಗಲಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಹಾಗೆಯೇ, ಇಡಬ್ಲ್ಯುಎಸ್‌ನ 550 ವಿದ್ಯಾರ್ಥಿಗಳಿಗೆ ಪದವಿಯಲ್ಲಿ ಮತ್ತು 1,000 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಪ್ರಯೋಜನ ಆಗಲಿದೆ.

ವೈದ್ಯಕೀಯ ಕೋರ್ಸ್‌ಗಳಲ್ಲಿ ಒಬಿಸಿ ಮೀಸಲು ಜಾರಿ ದೀರ್ಘ ಕಾಲದಿಂದ ಬಾಕಿ ಇತ್ತು. ‍ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರ ಜತೆಗೆ ಸೋಮವಾರ ಸಭೆನಡೆಸಿ, ಮೀಸಲಾತಿ ಸಮಸ್ಯೆ ಪರಿಹರಿಸುವಂತೆ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ.

ದೇಶದ ಯಾವುದೇ ರಾಜ್ಯದಲ್ಲಿ ಇರುವ ಉತ್ತಮ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ನಡೆಸಲು ವಿದ್ಯಾರ್ಥಿಗೆ ಅವಕಾಶ ಸಿಗಬೇಕು. ಅದಕ್ಕಾಗಿ ಪ್ರತಿಭೆ ಆಧಾರಿತ ಅವಕಾಶ ನೀಡಿಕೆ ವ್ಯವಸ್ಥೆ ಬೇಕು ಎಂದು ಸುಪ್ರೀಂ ಕೋರ್ಟ್‌ 1986ರಲ್ಲಿ ಹೇಳಿತ್ತು. ಹಾಗಾಗಿಯೇ ಅಖಿಲ ಭಾರತ ಕೋಟಾ ಎಂಬುದು ಜಾರಿಗೆ ಬಂದಿತ್ತು.

ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಲಭ್ಯ ಇರುವ ಒಟ್ಟು ಸೀಟುಗಳ ಪೈಕಿ ಶೇ 15ರಷ್ಟು ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾ ಎಂದು ಪರಿಗಣಿಸಲಾಗುತ್ತದೆ.

ಅಖಿಲ ಭಾರತ ಕೋಟಾದಲ್ಲಿ ಮೀಸಲಾತಿ ಮೊದಲು ಇರಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಶೇ 15ರಷ್ಟು ಮತ್ತು ಶೇ 7.5ರಷ್ಟು ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ 2007ರಲ್ಲಿ ನಿರ್ದೇಶನ ನೀಡಿತ್ತು. ಹೀಗಾಗಿ ಅಖಿಲ ಭಾರತ ಕೋಟಾದಲ್ಲಿ ಮೀಸಲಾತಿ ಜಾರಿಗೆ ಬಂದಿತ್ತು.

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಪ್ರವೇಶಾತಿಯಲ್ಲಿ ಮೀಸಲಾತಿ) ಕಾಯ್ದೆಯು 2007ರಲ್ಲಿ ಜಾರಿಗೆ ಬರುವುದರೊಂದಿಗೆ ಒಬಿಸಿಗೆ ಏಕರೂಪದಲ್ಲಿ ಶೇ 27ರಷ್ಟು ಮೀಸಲಾತಿ ನೀಡಲು ಅವಕಾಶ ಆಯಿತು. ಸಫ್ದರ್‌ಜಂಗ್‌ ಆಸ್ಪತ್ರೆ, ಲೇಡಿ ಹಾರ್ಡಿಂಜ್‌ ವೈದ್ಯಕೀಯ ಕಾಲೇಜು, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಂತಹ ಕೇಂದ್ರೀಯ ಸಂಸ್ಥೆಗಳಲ್ಲಿ ಈ ಮೀಸಲಾತಿ ಜಾರಿಗೆ ಬಂತು. ಆದರೆ, ರಾಜ್ಯಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಇದು ಜಾರಿಗೆ ಬರಲಿಲ್ಲ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದಕ್ಕಾಗಿ ಸಂವಿಧಾನಕ್ಕೆ 2019ರಲ್ಲಿ ತಿದ್ದುಪಡಿ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT