ಮಂಗಳವಾರ, ಅಕ್ಟೋಬರ್ 27, 2020
18 °C

ಮಹಿಳಾ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಹೊಸ ಸಲಹೆ–ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ಅವರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಹಿಳೆಯರ ವಿರುದ್ಧದ ಅಪರಾಧಗಳ ಸಂದರ್ಭದಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಲು ವಿಫಲವಾದರೆ ಅದು ನ್ಯಾಯದಾನದಲ್ಲಿ ಉಂಟಾಗುವ ವೈಫಲ್ಯ ಎಂದು ಕೇಂದ್ರ ಹೇಳಿದೆ.

ಉತ್ತರಪ್ರದೇಶದ ಹಾಥರಸ್‌ನಲ್ಲಿ ಇತ್ತೀಚೆಗೆ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲೇ ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಮೂರು ಪುಟಗಳ ವಿವರವಾದ ಸಲಹೆ ನೀಡಿದೆ. ಹೀಗಾಗಿ ಸಹಜವಾಗಿಯೇ ಈ ಬೆಳವಣಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ.

‘ಸಂಜ್ಞೆಯ ಅಪರಾಧ (Cognisable Offence) ಪ್ರಕರಣಗಳಲ್ಲಿ ಕಡ್ಡಾಯವಾಗಿ ಸಿಆರ್‌ಪಿಸಿ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಬೇಕು,’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಹಿಳೆಯರ ಮೇಲೆ ನಡೆಯುವ ಸಂಜ್ಞೆಯ ಅಪರಾಧವೂ ಸೇರಿದಂತೆ ಯಾವುದೇ ದೌರ್ಜನ್ಯಗಳ ಪ್ರಕರಣದಲ್ಲಿ ಯಾವುದೇ ಪೊಲೀಸ್‌ ಠಾಣೆಗೆ ತನ್ನ ವ್ಯಾಪ್ತಿಯ ಪರಿಮಿತಿ ಇಲ್ಲದೇ ಎಫ್‌ಐಆರ್‌ ಅಥವಾ ಜೀರೊ ಎಫ್‌ಐಆರ್‌ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬುದನ್ನು ಕೇಂದ್ರ ಸರ್ಕಾರ ನೆನಪು ಮಾಡಿಕೊಟ್ಟಿದೆ.

‘ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನಿನಲ್ಲಿ ಕಟ್ಟುನಿಟ್ಟಾದ ನಿಬಂಧನೆಗಳಿದ್ದರೂ, ಅಗತ್ಯಗಳನ್ನು ಪಾಲಿಸುವಲ್ಲಿ ಪೊಲೀಸರು ವಿಫಲವಾಗುವುದು ನ್ಯಾಯದಾನ ವ್ಯವಸ್ಥೆಯಲ್ಲಿ ಆಗುವ ವೈಫಲ್ಯ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಇದು ಪೂರಕವಲ್ಲ,’ ಎಂದು ಗೃಹ ಇಲಾಖೆ ಹೇಳಿದೆ.

‘ಇಂಥ ವೈಫಲ್ಯಗಳು ಕಂಡುಬಂದರೆ, ಸೂಕ್ತ ತನಿಖೆ ನಡೆಸಿ, ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯಗಳಿಗೆ ಕೇಂದ್ರ ಕಟ್ಟುನಿಟ್ಟಾಗಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು