ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್ ಗಡಿ ಸಂಘರ್ಷ: ಭಾರತ–ಚೀನಾ ಸೇನಾ ಪಡೆಗಳಿಂದ ಗುಂಡಿನ ಚಕಮಕಿ

Last Updated 8 ಸೆಪ್ಟೆಂಬರ್ 2020, 1:34 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ–ಚೀನಾ ಸೇನಾ ಪಡೆಗಳ ಮಧ್ಯೆ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ.

‘ಭಾರತೀಯ ಸೇನಾ ಸಿಬ್ಬಂದಿ ನಡೆಸಿದ ‘ಎಚ್ಚರಿಕೆ ದಾಳಿ (ವಾರ್ನಿಂಗ್ ಶಾಟ್‌)’ಗೆ ಪ್ರತಿಯಾಗಿ ಕ್ರಮ ಕೈಗೊಳ್ಳಬೇಕಾಯಿತು’ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ತಿಳಿಸಿದೆ.

ಘಟನೆಯನ್ನು ದೆಹಲಿಯಲ್ಲಿನ ಮೂಲವೊಂದು ಖಚಿತಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ. ಭಾರತೀಯ ಸೇನೆ ಅಥವಾ ಚೀನಾ ಸೇನೆಯಲ್ಲಿ ಸಾವು–ನೋವು ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ.

‘ಭಾರತೀಯ ಸೇನೆಯು ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಅಕ್ರಮವಾಗಿ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಉಲ್ಲಂಘಿಸಿದೆ’ ಎಂದು ಪಿಎಲ್‌ಎಯ ಪಶ್ಚಿಮ ಕಮಾಂಡ್‌ನ ಹಿರಿಯ ಕರ್ನಲ್ ಝಾಂಗ್ ಸುಯಿಲಿ ಸೋಮವಾರ ರಾತ್ರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಝಾಂಗ್ ಹೇಳಿಕೆ ಉಲ್ಲೇಖಿಸಿ ‘ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ’ ಒಡೆತನದ ಮಾಧ್ಯಮ ಗ್ಲೋಬಲ್ ಟೈಮ್ಸ್ ಸಹ ಟ್ವೀಟ್ ಮಾಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ನಡುವೆ ಮಾತುಕತೆ ನಡೆದ ಕೇವಲ ಮೂರೇ ದಿನಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ರಷ್ಯಾದ ಮಾಸ್ಕೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಉಭಯ ಸಚಿವರ ನಡುವೆ ಮಾತುಕತೆ ನಡೆದಿತ್ತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಹ ವಾರಾಂತ್ಯದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಮೇ ತಿಂಗಳ ಬಳಿಕ ಭಾರತ–ಚೀನಾ ಸೇನೆ ನಡುವೆ ಸಂಘರ್ಷ ಘಟಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಜೂನ್ 15ರಂದು ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು–ನೋವು ಸಂಭವಿಸಿತ್ತು. ಆದರೆ ಅದರ ವಿವರಗಳನ್ನು ಚೀನಾ ಬಹಿರಂಗಪಡಿಸಿಲ್ಲ.

‘ಭಾರತೀಯ ಸೇನೆಯ ಕ್ರಮವು ಹಲವು ಒಪ್ಪಂದಗಳ ಉಲ್ಲಂಘನೆಯಾಗಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುವುದಲ್ಲದೆ ಸುಲಭವಾಗಿ ತಪ್ಪುಗ್ರಹಿಕೆ ಹಾಗೂ ತಪ್ಪು ನಿರ್ಣಯಗಳಿಗೆ ಕಾರಣವಾಗುತ್ತದೆ. ಇಂತಹ ಅಪಾಯಕಾರಿ ಕ್ರಮಗಳನ್ನು ಭಾರತೀಯ ಸೇನೆ ತಕ್ಷಣವೇ ನಿಲ್ಲಿಸಬೇಕು ಎಂದು ಪಿಎಲ್‌ಎ ವಕ್ತಾರರು ಹೇಳಿದ್ದಾರೆ.

ಪಾಂಗಾಂಗ್ ಸರೋವರ ಬಳಿ ಚೀನಾ ಸೇನೆ ಮತ್ತೊಮ್ಮೆ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿದೆ. ಆದರೆ, ಚೀನಾದ ಕಡೆಯಿಂದ ಇಂತಹುದೊಂದು ದುಸ್ಸಾಹಸವನ್ನು ಅಂದಾಜಿಸಿದ್ದ ಭಾರತದ ಯೋಧರು, ಈ ಯತ್ನವನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಭಾರತದ ಸೇನೆಯ ವಕ್ತಾರ ಕರ್ನಲ್‌ ಅಮನ್‌ ಆನಂದ್ ಆಗಸ್ಟ್ 31ರಂದು ತಿಳಿಸಿದ್ದರು.

‘ಭಾರತ–ಚೀನಾ ಗಡಿರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಇದೆ. ಯಾವುದೇ ಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ’ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT